ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ನೋಂದಣಿ ಪ್ರಕ್ರಿಯೆ ಸುಸೂತ್ರ

ಜಿಲ್ಲೆಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜನಜಂಗುಳಿ
Last Updated 5 ನವೆಂಬರ್ 2020, 13:25 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜಮೀನು ಹಾಗೂ ನಿವೇಶನಗಳ ನೋಂದಣಿ ಪ್ರಕ್ರಿಯೆ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ಸುಸೂತ್ರವಾಗಿ ನಡೆಯಿತು.

ಕೆಜಿಎಫ್‌ ಹೊರತುಪಡಿಸಿ ಜಿಲ್ಲೆಯ ಇತರೆ ಐದೂ ತಾಲ್ಲೂಕುಗಳಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗಳು ಗುರುವಾರ ಗಿಜಿಗುಡುತ್ತಿದ್ದವು. ಜಮೀನು ಮತ್ತು ನಿವೇಶನ ಮಾಲೀಕರು, ಖರೀದಿದಾರರು ಹಾಗೂ ಮಧ್ಯವರ್ತಿಗಳಿಂದ ಕಚೇರಿಗಳು ತುಂಬಿ ಹೋಗಿದ್ದವು.

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಬುಧವಾರ (ನ.4) ಕೆಲ ಸಮಯ ನೋಂದಣಿ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಪ್ರತಿನಿತ್ಯದಂತೆ ಆಸ್ತಿಗಳ ನೋಂದಣಿ ಪ್ರಕ್ರಿಯೆ ನಡೆದಿರಲಿಲ್ಲ. ಬುಧವಾರ ಮಧ್ಯಾಹ್ನದವರೆಗೆ ಕಾದು ಹಿಂದಿರುಗಿದ್ದ ಆಸ್ತಿ ಖರೀದಿದಾರರು ಹಾಗೂ ಮಾರಾಟಗಾರರು ನೋಂದಣಿಗಾಗಿ ಗುರುವಾರ ಬೆಳಿಗ್ಗೆಯೇ ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಮುಗಿಬಿದ್ದರು.

ಆಸ್ತಿಗಳ ಕ್ರಯ ಕರಾರು, ಆಧಾರ ಪತ್ರ (ಮಾರ್ಟ್‌ ಗೇಜ್‌), ಭೋಗ್ಯದ ಕರಾರು, ಮಾರಾಟ, ದಾನಪತ್ರ, ಊಯಿಲು (ವಿಲ್‌), ಸಾಮಾನ್ಯ ಅಧಿಕಾರ ಪತ್ರ (ಜಿಪಿಎ), ಆಶ್ರಯ ಮನೆ ಸೇರಿದಂತೆ ಎಲ್ಲಾ ಬಗೆಯ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಿತು.

ನೋಂದಣಿ ಸಾಫ್ಟ್‌ವೇರ್ ‘ಕಾವೇರಿ’ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿನ ಇ–ಸ್ವತ್ತು ಮಧ್ಯೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿಗಳ ನೋಂದಣಿಯಾದ ನಂತರ ನೋಂದಣಿ ದತ್ತಾಂಶ ಗ್ರಾ.ಪಂಗಳಿಗೆ ರವಾನೆಯಾಯಿತು.

ಸಾಫ್ಟವೇರ್‌ ಸುಸೂತ್ರ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ಸಾಫ್ಟ್‌ವೇರ್ ಹಾಗೂ ಕಂದಾಯ ಇಲಾಖೆಯ ಭೂಮಿ ಸಾಫ್ಟ್‌ವೇರ್ ಸುಸೂತ್ರವಾಗಿ ಕಾರ್ಯ ನಿರ್ವಹಿಸಿದವು. ಇದರಿಂದ ನಗರಗಳ ವ್ಯಾಪ್ತಿಯ ಆಸ್ತಿಗಳ ನೋಂದಣಿಗೆ ಸಮಸ್ಯೆ ಆಗಲಿಲ್ಲ. ಶುಲ್ಕ ಪಾವತಿಯಲ್ಲೂ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ.

ಬಹುಪಾಲು ಜನರು ಉಪ ನೋಂದಣಾಧಿಕಾರಿಗಳ ಕಚೇರಿಗೆ ಬಂದು ಸಿಬ್ಬಂದಿ ಮೂಲಕ ನೋಂದಣಿ ಮಾಡಿಸುತ್ತಿದ್ದ ದೃಶ್ಯ ಕಂಡುಬಂತು. ಪತ್ರ ಬರಹಗಾರರ ಮೂಲಕ ಆಸ್ತಿ ನೋಂದಣಿ, ವರ್ಗಾವಣೆ, ಅಡಮಾನ ಪತ್ರ ಸಿದ್ಧಪಡಿಸಿದ ಬಳಿಕ ನೋಂದಣಿ ಮಾಡಿಸಿದರು. ಆನ್‌ಲೈನ್‌ ಬದಲಿಗೆ ಕಚೇರಿಗಳಲ್ಲೇ ಡಿಮಾಂಡ್‌ ಡ್ರಾಫ್ಟ್‌ (ಡಿ.ಡಿ) ಮೂಲಕ ಶುಲ್ಕ ಪಾವತಿಸಿದರು. ಅಲ್ಲದೇ, ಕಚೇರಿಗಳಲ್ಲೇ ದಾಖಲೆಪತ್ರ ಅಪ್‌ಲೋಡ್ ಮಾಡಲಾಯಿತು.

ಪೈಲಟ್‌ ಯೋಜನೆ: ಆನ್‌ಲೈನ್‌ ನೋಂದಣಿಯ ಪೈಲಟ್‌ ಯೋಜನೆಗೆ ಜಿಲ್ಲೆಯ ಉಪ ನೋಂದಣಾಧಿಕಾರಿ ಕಚೇರಿಗಳು ಆಯ್ಕೆಯಾಗಿಲ್ಲ. ಹೀಗಾಗಿ ಆಫ್‌ಲೈನ್‌ನಲ್ಲೇ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಐದೂ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ದಿನವೊಂದಕ್ಕೆ ಸರಾಸರಿ 150 ಆಸ್ತಿಗಳು ನೋಂದಣಿಯಾಗುತ್ತವೆ. ಗುರುವಾರ ಸಹ ಇಷ್ಟೇ ಸಂಖ್ಯೆಯ ಆಸ್ತಿಗಳ ನೋಂದಣಿ ಪ್ರಕ್ರಿಯೆ ನಡೆಯಿತು.

ಆಟಕ್ಕುಂಟು ಲೆಕ್ಕಕ್ಕಿಲ್ಲ: ಬಹುತೇಕ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಜನರು ಕೋವಿಡ್‌ ಆತಂಕ ಮರೆತು ಪರಸ್ಪರ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಂತಿದ್ದರು. ಕಚೇರಿಗಳಲ್ಲಿ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿಯಿತ್ತು. ಸ್ಯಾನಿಟೈಸರ್‌ ಸಹ ಇರಲಿಲ್ಲ. ಹಲವರು ಮಾಸ್ಕ್‌ ಧರಿಸದೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT