ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳೇರಹಳ್ಳಿ ಪ್ರಕರಣ: ‘ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ’

Last Updated 25 ಸೆಪ್ಟೆಂಬರ್ 2022, 4:37 IST
ಅಕ್ಷರ ಗಾತ್ರ

ಕೋಲಾರ: ‘ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ಬಾಲಕ ದೇವರ ಗುಜ್ಜಕೋಲು ಮುಟ್ಟಿದನೆಂದು ಗ್ರಾಮದ ಕೆಲವರು ದಂಡ ವಿಧಿಸಿದ್ದಾರೆ. ನಿಮಗೆ ದಂಡ ತಾನೇ ಬೇಕು? ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಜಾತಿ ಘಟಕದಿಂದ ದಂಡ ಕಟ್ಟಲು ನಾವು ಸಿದ್ಧ. ಆದರೆ, ದೇವರನ್ನು ಮುಟ್ಟಲು ದಲಿತರಿಗೆ ಅವಕಾಶ ಮಾಡಿಕೊಡಬೇಕು’ ಎಂದುಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್‌.ಧರ್ಮಸೇನ ಸವಾಲು ಹಾಕಿದ್ದಾರೆ.

ಶನಿವಾರ ಉಳ್ಳೇರಹಳ್ಳಿಗೆ ಭೇಟಿ ನೀಡಿ ಸಂತ್ರಸ್ತ ಬಾಲಕನ ಕುಟುಂಬವನ್ನು ಭೇಟಿಯಾದ ಬಳಿಕ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ದಲಿತರು ತಕ್ಕ ಪಾಠ ಕಲಿಸಲಿದ್ದಾರೆ. ದಲಿತರ ರಕ್ಷಣೆಗೆ ಮುಂದಾಗದಿದ್ದರೆ ಈ ಸರ್ಕಾರ ಹೆಚ್ಚು ದಿನ ಇರಲ್ಲ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಇದೂವರೆಗೂ ಒಬ್ಬ ಸಚಿವನೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ದಲಿತರ ಹೆಸರಿನಲ್ಲಿ ಸ್ಥಾನಮಾನ ಪಡೆದಿರುವ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಬಂದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಉಳ್ಳೇರಹಳ್ಳಿ ಘಟನೆ ನಂತರ ಬಾಲಕನ ತಾಯಿ ಶೋಭಾ ಅವರಿಗೆಕೊಲೆ ಬೆದರಿಕೆ ಬಂದಿದ್ದು, ಏನಾದರೂ ಅನಾಹುತವಾದರೆ ಬಿಜೆಪಿ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಭೇದ ಭಾವದ ಧರ್ಮ ಬೇಕಿಲ್ಲ’
ಮಾಲೂರು
: ‘ಪರಿಶಿಷ್ಟ ಬಾಲಕನಿಗೆ ದಂಡ ವಿಧಿಸಿ ದಬ್ಬಾಳಿಕೆ ನಡೆಸಿರುವುದು ಖಂಡನೀಯ’ ಎಂದು ನಟ, ಹೋರಾಟಗಾರ ಚೇತನ್ ಅಹಿಂಸಾ ಕಿಡಿಕಾರಿದರು.

ಶನಿವಾರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅವರು, ‘ಸಾವಿರಾರು ವರ್ಷಗಳಿಂದ ದಲಿತರು, ಮಹಿಳೆಯರು, ಶೂದ್ರರು, ಹಿಂದುಳಿದ ವರ್ಗಹಾಗೂ ಬಡವರ ಮೇಲೆ ಸತತವಾಗಿ ದಬ್ಬಾಳಿಕೆ ನಡೆಯುತ್ತಿದೆ. ಪ್ರಸ್ತುತ ಸಮಾಜಕ್ಕೆ ನ್ಯಾಯ ಬೇಕಾಗಿದೆ. ನ್ಯಾಯವೆಂದರೆ ಇತಿಹಾಸದ ತಪ್ಪುಗಳನ್ನು ತಿದ್ದಬೇಕಿದೆ’ ಎಂದರು.

‘ದೇವರನ್ನು ನಂಬಿ ಶೋಭಾ ದೇಗುಲಕ್ಕೆ ಹೋಗುತ್ತಿದ್ದರು. ಭೇದಭಾವ ಮೂಡಿಸುವ ಧರ್ಮ ಬೇಕಾಗಿಲ್ಲ, ಯಾವ ದೇವರೂ ಬೇಡ, ಯಾವ ದೇವಸ್ಥಾನವೂ ಅಗತ್ಯವಿಲ್ಲ. ಬುದ್ಧ, ಅಂಬೇಡ್ಕರ್‌, ಬಸವ, ಪೆರಿಯಾರ್, ಫುಲೆ ಮತ್ತು ಕುವೆಂಪು ಹೇಳಿರುವ ಸಮಾನತೆ, ನ್ಯಾಯ ಮತ್ತು ವೈಜ್ಞಾನಿಕ ಮನೋಭಾವ ಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT