ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಸಾಕಾಣಿಕೆ ಲಾಭದಾಯಕ ವೃತ್ತಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌ ಅಭಿಪ್ರಾಯ
Last Updated 7 ಅಕ್ಟೋಬರ್ 2020, 12:42 IST
ಅಕ್ಷರ ಗಾತ್ರ

ಕೋಲಾರ: ‘ಕುರಿ ಸಾಕಾಣಿಕೆಯು ಲಾಭದಾಯಕ ವೃತ್ತಿ. ರೈತರು ಕೃಷಿಯ ಜತೆಗೆ ಉಪ ಕಸುಬಾಗಿ ಕುರಿ ಸಾಕಾಣಿಕೆ ಮಾಡಬಹುದು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌ ಕಿವಿಮಾತು ಹೇಳಿದರು.

ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುರಿ ಸಾಕಾಣಿಕೆ ತರಬೇತಿ ಉದ್ಘಾಟಿಸಿ ಮಾತನಾಡಿ, ‘ಕೋವಿಡ್‌ ಸಂಕಷ್ಟದಿಂದ ಎಲ್ಲರಿಗೂ ಉದ್ಯೋಗ ಮತ್ತು ಸಂಬಳದ ಬಗ್ಗೆ ಅಭದ್ರತೆ ಉಂಟಾಗಿರುವುದರಿಂದ ಸ್ವಉದ್ಯೋಗದತ್ತ ಆಕರ್ಷಿತರಾಗುತ್ತಿದ್ದಾರೆ. ಹೆಚ್ಚಿನ ಜನರು ಕುರಿ ಸಾಕಾಣಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ’ ಎಂದರು.

‘ಯಾರು ಬೇಕಾದರೂ ಹಣ ಸಂಪಾದಿಸಬಹುದು. ಸಂಪಾದನೆಗೆ ಸಾಕಷ್ಟು ದಾರಿಗಳಿವೆ. ಆದರೆ, ಎಲ್ಲರೂ ಜ್ಞಾನ ಗಳಿಸಲು ಸಾಧ್ಯವಿಲ್ಲ. ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಜ್ಞಾನಾರ್ಜನೆ ಸಾಧ್ಯ. ಈ ಪೈಕಿ ತರಬೇತಿ ಕೇಂದ್ರಗಳು ಸೇರಿವೆ. ಜ್ಞಾನ ಪಡೆದುಕೊಳ್ಳುವ ಅವಕಾಶ ಸಿಕ್ಕಾಗ ಕೈಚೆಲ್ಲದೆ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಯಾರೂ ನಿಷ್ಪ್ರಯೋಜಕರಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಆದರೆ, ಆ ಪ್ರತಿಭೆ ಗುರುತಿಸಿ ಹೊರ ಜಗತ್ತಿಗೆ ಪರಿಚಯಿಸುವ ಸಾಮರ್ಥ್ಯವಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. 10 ದಿನಗಳ ಕಾಲ ನಡೆಯುವ ಕುರಿ ಸಾಕಾಣಿಕೆ ತರಬೇತಿಯಲ್ಲಿ ಶಿಸ್ತಿನಿಂದ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

‘ಪ್ರತಿ ವೃತ್ತಿಯು ಪ್ರಾಮಾಣಿಕತೆ ಅಪೇಕ್ಷಿಸುತ್ತದೆ. ಧರ್ಮದ ದಾರಿಯಲ್ಲಿ ನಡೆಯುವವರನ್ನು ದೇವರು ಕೈ ಹಿಡಿಯುತ್ತಾನೆ. ಅಸತ್ಯ, ಅಪ್ರಾಮಾಣಿಕ ದಾರಿಯಲ್ಲಿ ಹೋಗುವವರಿಗೆ ಕಾಲವೇ ಸೂಕ್ತ ಉತ್ತರ ನೀಡುತ್ತದೆ’ ಎಂದು ತಿಳಿಸಿದರು.

ಭವಿಷ್ಯವಿದೆ: ‘ಕುರಿ ಸಾಕಾಣಿಕೆಯು ಲಾಭದಾಯಕ ವೃತ್ತಿ ಆಗಿರುವುದರಿಂದ ಎಲ್ಲರಿಗೂ ಭವಿಷ್ಯವಿದೆ. ಆದರೆ, ವೈಜ್ಞಾನಿಕವಾಗಿ ಕುರಿ ಸಾಕಾಣಿಕೆ ಮಾಡಬೇಕು. ಆಗ ಮಾತ್ರ ಈ ವೃತ್ತಿಯಲ್ಲಿ ಬೆಳೆಯಲು ಸಾಧ್ಯ. ಜೀವನದಲ್ಲಿ ಹಂತ ಹಂತವಾಗಿ ಮೇಲೇರಬೇಕು. ಅಡ್ಡ ದಾರಿ ಹಿಡಿದು ಬೇಗ ಶ್ರೀಮಂತರಾಗಲು ಹೊರಟೆ ಕಷ್ಟ ತಪ್ಪಿದ್ದಲ್ಲ’ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಅಧೀಕ್ಷಕ ವಿಶ್ವನಾಥ್ ಹೇಳಿದರು.

‘ಇಂದಿಗೂ ಸಾಕಷ್ಟು ಜನ ಹಳೆ ಪದ್ಧತಿಯಲ್ಲೇ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಕುರಿಗಳಿಗೆ ಬರುವ ರೋಗ, ಅದರ ನಿವಾರಣೆ, ಕುರಿ ತಳಿಗಳ ಭಿನ್ನತೆ, ಮೇವು ವಿತರಣೆ, ಕುರಿ ಶೆಡ್ ನಿರ್ಮಾಣ ಸೇರಿದಂತೆ ಪ್ರಮುಖ ಅಂಶಗಳ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ಪಡೆದು ಕುರಿ ಸಾಕಾಣಿಕೆ ಮಾಡುವುದು ಉತ್ತಮ’ ಎಂದರು.

ಸಾಲ ಸೌಲಭ್ಯ: ‘ಕೃಷಿ ಪ್ರಧಾನ ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮವು ರೈತರ ಜೀವನಾಡಿಯಾಗಿದೆ. ಹೈನುಗಾರಿಕೆಗೆ ಬ್ಯಾಂಕ್‌ಗಳು ಸಾಲ ನೀಡುತ್ತವೆ. ಅದೇ ರೀತಿ ಕುರಿ ಸಾಕಾಣಿಕೆಗೂ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುತ್ತದೆ’ ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಬಾಲಾಜಿ ವಿವರಿಸಿದರು.

‘ಕುರಿ ಮತ್ತು ಮೇಕೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ₹ 68 ಸಾವಿರ ಸಹಾಯಧನ ನೀಡಲಾಗುತ್ತದೆ. ಆಸಕ್ತರು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯಧನ ಪಡೆಯಬಹುದು’ ಎಂದು ಮಾಹಿತಿ ನೀಡಿದರು.

ತರಬೇತುದಾರರಾದ ಕೆ.ವಿ.ವಿಜಯ್‌ಕುಮಾರ್, ಎನ್.ಗಿರೀಶ್‌ರೆಡ್ಡಿ, ಎನ್.ವಿ ನಾರಾಯಣಸ್ವಾಮಿ, ಆರ್.ವೆಂಕಟಾಚಲಪತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT