ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅಪ್ಪನ ಅಖಾಡದಲ್ಲಿ ಮಗನ ತಿರುಗಾಟ!

ಹಳ್ಳಿಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ ಕಾಂಗ್ರೆಸ್‌ ಶಾಸಕ ಡಾ. ಯತೀಂದ್ರ
Last Updated 31 ಜನವರಿ 2023, 3:54 IST
ಅಕ್ಷರ ಗಾತ್ರ

ಕೋಲಾರ: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವುದಾಗಿ ಘೋಷಿಸಿರುವ ಕೋಲಾರ ವಿಧಾನಸಭಾ ಕ್ಷೇತ್ರದ ಸ್ಥಿತಿಗತಿ ತಿಳಿಯಲು ಅವರ ಪುತ್ರ ಹಾಗೂ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೋಮವಾರ ಮಧ್ಯಾಹ್ನದವರೆಗೆ ವಿವಿಧ ಹಳ್ಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿದರು.

ಬಹುತೇಕ ಚುನಾವಣಾ ಪ್ರಚಾರದಂತೆ ಭಾಸವಾದ ಅವರ ತಿರುಗಾಟದ ಅವಧಿಯಲ್ಲಿ ಮೂರು ಗ್ರಾಮಗಳಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. ಬೂತ್‌ ಸಮಿತಿಗಳಿಗೆ ಚಾಲನೆ ನೀಡಿದರು.

ಮೊದಲು ಬೆಳಿಗ್ಗೆ ಕೋಲಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಆನಂತರ ಬಸವನತ್ತಕ್ಕೆ ತೆರಳಿ ಸಿದ್ದರಾಮಯ್ಯ ಅವರ ವಾಸ್ತವ್ಯಕ್ಕೆ ಸಿದ್ಧಪಡಿಸಿರುವ ಮನೆ ವೀಕ್ಷಿಸಿದರು. ಮನೆಯ ಮಾಲೀಕರೊಂದಿಗೆ ಮಾತನಾಡಿದರು. ‘ಮನೆ ಚೆನ್ನಾಗಿದೆ ಎಂದು ಮುಖಂಡರಿಗೆ ತಿಳಿಸಿ, ತಂದೆಯವರು ಒಂದು ಬಾರಿ ನೋಡಬೇಕಿದೆ’ಎಂದರು.

ಆನಂತರ ಅಪ್ಪನ ಅಖಾಡದಲ್ಲಿ ಪ್ರಚಾರ ಶುರುವಿಟ್ಟುಕೊಂಡರು. ಅವರಿಗೆ ವಿಧಾನ ಪರಿಷತ್‌ ಸದಸ್ಯರಾದ ನಜೀರ್ ಅಹಮದ್‌, ಎಂ.ಎಲ್‌.ಅನಿಲ್‌ ಕುಮಾರ್‌ ಹಾಗೂ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಸಾಥ್‌ ನೀಡಿದರು.

ಬಸವನತ್ತ, ಕೋಡಿರಾಮಸಂದ್ರ, ಕಳ್ಳೀಪುರ, ಹೊನ್ನೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಬಸವನತ್ತ ಗ್ರಾಮದಲ್ಲಿ ಮೆರವಣಿಗೆ ತೆರಳಿದ ಯತೀಂದ್ರರಿಗೆ ಮಹಿಳೆಯರು ಆರತಿ ಬೆಳಗಿದರು. ಆರತಿ ತಟ್ಟೆಗೆ ಹಣ ಹಾಕಿ ನಮಸ್ಕರಿಸಿದರು. ಗಂಗಮ್ಮ ದೇಗುಲದಲ್ಲಿ ದೇವರ ದರ್ಶನ ಪಡೆದರು.

ಪ್ರತಿ ಗ್ರಾಮದಲ್ಲಿ 15 ನಿಮಿಷ ಸಭೆ ನಡೆಸಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಿನ ಸಾಧನೆಗಳನ್ನು ಜನರಿಗೆ ತಿಳಿಸಿದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಡಿರಾಮಸಂದ್ರ ಗ್ರಾಮಕ್ಕೆ ತೆರಳಿ, ಸತ್ಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಭೆ ನಡೆಸಿ ಮಾತನಾಡಿದರು. ಬಳಿಕ ಕಳ್ಳೀಪುರಕ್ಕೆ ತೆರಳಿ ಬಸವಣ್ಣ, ಡಾ.ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಭೆಯಲ್ಲಿ ಪಾಲ್ಗೊಂಡರು.

ಹೊನ್ನೇನಹಳ್ಳಿ ಗ್ರಾಮಕ್ಕೆ ತೆರಳಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೆರವಣಿಗೆಯಲ್ಲಿ ತೆರಳಿ ಸಭೆಯಲ್ಲಿ ಪಾಲ್ಗೊಂಡರು.

ಕುತಂತ್ರದಿಂದ ಸೋಲು: ‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅನೇಕ ಜನಪರ ಯೋಜನೆ ಜಾರಿಗೆ ತಂದರು. ಆದರೆ, ಪ್ರತಿಪಕ್ಷಗಳ ಕುತಂತ್ರ ಹಾಗೂ ಅಪಪ್ರಚಾರದಿಂದ ಸೋತೆವು. ಈಗಲೂ ಅವರನ್ನು ಸೋಲಿಸಲು ಪಟ್ಟಭದ್ರ ಹಿತಾಸಕ್ತಿಗಳು ಒಂದಾಗುವ ಸಾಧ್ಯತೆಗಳಿದ್ದು, ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

‘ಸಿದ್ದರಾಮಯ್ಯ ಅವರು ರೈತರು, ಕೂಲಿಕಾರ್ಮಿಕರು, ಬಡವರು, ಮಹಿಳೆಯರ ಪರವಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ರಾಜ್ಯದಾದ್ಯಂತ ಪ್ರವಾಸ ಮಾಡಬೇಕಿರುವುದರಿಂದ ಪದೇಪದೇ ಇಲ್ಲಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ, ನೀವೇ ಇಲ್ಲಿ ಪ್ರಚಾರ ನಡೆಸಬೇಕು. ನಾನೂ ಪ್ರಚಾರಕ್ಕೆ ಬರುತ್ತೇನೆ’ ಎಂದು ಕೋರಿದರು.

ಎಂಎಲ್‌ಸಿ ಅನಿಲ್ ಕುಮಾರ್‌ ಅವರು ಗ್ರಾಮಗಳ ಪರಿಚಯ, ಮತಗಳು, ಬೂತ್‌ಗಳು, ಸಮಿತಿ ರಚನೆ ಮಾಹಿತಿ ನೀಡಿ ಮುಖಂಡರ ಪರಿಚಯಿಸಿದರು.

ಕಾಣದ ಫ್ಲೆಕ್ಸ್‌, ಬ್ಯಾನರ್: ಕ್ಷೇತ್ರದ ಎಲ್ಲೂ ಫ್ಲೆಕ್ಸ್‌, ಬ್ಯಾನರ್‌ ಕಾಣಲಿಲ್ಲ. ಗ್ರಾಮಗಳಲ್ಲಿ, ಅಲ್ಪಸಂಖ್ಯಾತರ ಸಭೆ ನಡೆದ ಸ್ಥಳದಲ್ಲೂ ಇರಲಿಲ್ಲ. ಗ್ರಾಮಗಳಲ್ಲಿ ಸಣ್ಣ ಪ್ರಮಾಣದಲ್ಲಿ ಶಾಮಿಯಾನ ಹಾಕಿ ಸಭೆ ನಡೆಸಲಾಯಿತು.

ಮಾಜಿ ಶಾಸಕ ಡಾ.ಸುಧಾಕರ್‌, ನಗರಸಭೆ ಸದಸ್ಯ ಅಂಬರೀಶ್, ಮಾಜಿ ಸದಸ್ಯ ಸೋಮಶೇಖರ್‌, ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಶ್ರೀನಿವಾಸ್‌, ಮುಖಂಡರಾದ ರವಿ ರಾಮಸ್ವಾಮಿ, ಪ್ರಸನ್ನ ಕುಮಾರ್‌, ಕೃಷ್ಣೇಗೌಡ, ದಯಾನಂದ, ಶಿವ, ನವೀನ್, ಶ್ರೀಕೃಷ್ಣ, ಸೀಸಂದ್ರಗೋಪಾಲ್, ಚಂಜಿಮಲೆ ರಮೇಶ್, ವರದೇನಹಳ್ಳಿ ವೆಂಕಟೇಶ್, ಯಲ್ಲಪ್ಪ, ಖಾದ್ರಿಪುರ ಬಾಬು, ಗೋವಿಂದರಾಜು, ಬಸವನತ್ತ ಶ್ರೀನಿವಾಸ್, ರಾಘವೇಂದ್ರ, ಪಂಚಾಯಿತಿ ಸದಸ್ಯ ಮುರಳಿ, ಸವಿತಾ ಮಂಜುನಾಥ್, ಕುರುಬರಪೇಟೆ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT