ಗೋಮಾಂಸ ನಿಷೇಧ: ಒಗ್ಗಟ್ಟಿನ ಹೋರಾಟ

ಕೋಲಾರ: ‘ಆಹಾರ ತಿನ್ನುವ ಹಕ್ಕು ನಮ್ಮದು. ಈ ಹಕ್ಕು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ರಾಜ್ಯದಲ್ಲಿ ಬಿಜೆಪಿಯು ಆರ್ಎಸ್ಎಸ್ ಅಜೆಂಡಾ ಹಿಡಿದು ಸರ್ಕಾರ ನಡೆಸುತ್ತಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ನಾರಾಯಣಸ್ವಾಮಿ ಗುಡುಗಿದರು.
ಗೋಮಾಂಸ ನಿಷೇಧ ವಿರೋಧಿಸಿ ನಡೆಸಲು ಉದ್ದೇಶಿಸಿರುವ ಹೋರಾಟದ ರೂಪುರೇಷೆ ಸಂಬಂಧ ಇಲ್ಲಿ ಗುರುವಾರ ನಡೆದ ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಸಂವಿಧಾನ ವಿರೋಧಿ ಕಾನೂನು ಜಾರಿ ಮಾಡಲು ಹೊರಟಿದೆ. ಇದರ ವಿರುದ್ಧ ಜಾತ್ಯಾತೀತ ಮತ್ತು ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಬೇಕು’ ಎಂದರು.
‘ರಾಜ್ಯ ಸರ್ಕಾರ ಗೋಮಾಂಸ ನಿಷೇಧಿಸಿರುವುದರಿಂದ ರೈತಾಪಿ ವರ್ಗದ ಮೇಲೆ ದುಷ್ಪರಿಣಾಮವಾಗಲಿದೆ. ವಯಸ್ಸಾದ ಗೋವುಗಳು ಮತ್ತು ಗಂಡು ಸೀಮೆ ಹಸುಗಳಿಂದ ರೈತರಿಗೆ ನಷ್ಟ ಉಂಟಾಗುತ್ತದೆ. ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 4 ಲಕ್ಷ ಗಂಡು ಸೀಮೆ ಕರುಗಳು ಜನಿಸುತ್ತವೆ. ಈ ಕರುಗಳಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ನಷ್ಟ ಉಂಟಾಗುತ್ತದೆ. ಈ ನಷ್ಟಕ್ಕೆ ಹೊಣೆ ಯಾರು?’ ಎಂದು ಪ್ರಶ್ನಿಸಿದರು.
‘ಗೋಮಾಂಸ ನಿಷೇಧಿಸಿರುವ ಸರ್ಕಾರಗಳು ಗೋಮಾಂಸ ರಫ್ತು ಮಾಡಲು ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಿವೆ. ಗೋಮಾಂಸ ನಿಷೇಧದಿಂದ ಕೋಳಿ ಮಾಂಸದ ಬೆಲೆ ಏರಿಕೆಯಾಗುತ್ತದೆ. ಸರ್ಕಾರದ ಈ ಅಪಕ್ವ ನೀತಿಗಳಿಂದ ಶ್ರೀಮಂತ ವ್ಯಾಪಾರಿಗಳಿಗೆ ಅನುಕೂಲ ಆಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸಂಚು: ‘ಬಿಜೆಪಿಯು ಜನರ ಆಹಾರದ ಹಕ್ಕು ಕಸಿದುಕೊಳ್ಳುವ ಸಂಚು ಮಾಡಿದೆ. ಇದರ ವಿರುದ್ಧ ದಲಿತ, ಅಲ್ಪಸಂಖ್ಯಾತ ಹಾಗು ಹಿಂದುಳಿದ ವರ್ಗಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ರಾಜಪ್ಪ ತಿಳಿಸಿದರು.
‘ದೇಶದಲ್ಲಿ ಮನುವಾದಿಗಳು ಹೆಚ್ಚುತ್ತಿದ್ದಾರೆ. ಸಂವಿಧಾನ ತೆಗೆದು ಮನುವಾದ ಜಾರಿಗೊಳಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದೆ. ಬಿಜೆಪಿಯ ನಡೆ ವಿರುದ್ಧ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಧ್ವನಿ ಎತ್ತಬೇಕು’ ಎಂದು ಸಲಹೆ ನೀಡಿದರು.
ಅರಾಜಕತೆ ಸೃಷ್ಟಿ: ‘ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಬಿಜೆಪಿ ಸರ್ಕಾರ ದಮನಿತರನ್ನು ಮತ್ತಷ್ಟು ಶೋಷಿಸಲು ಹೊರಟಿದೆ. ಕಾರ್ಮಿಕರು, ರೈತರು ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಬೀದಿಪಾಲು ಮಾಡಲು ಅವಣಿಸುತ್ತಿದೆ’ ಎಂದು ನಗರಸಭೆ ಸದಸ್ಯ ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರವು ದಲಿತರು, ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ದಿನದಿಂದಲೂ ಬಡವರ ಮೇಲಿನ ಶೋಷಣೆ ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಗೋಮಾಂಸ ನಿಷೇಧ ಮಸೂದೆ ಅಂಗೀಕಾರಕ್ಕೆ ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿಗೊಳಿಸಲು ಮುಂದಾಗಿದೆ. ಇದರ ವಿರುದ್ಧ ಜನಾಂದೋಲನ ನಡೆಯಬೇಕು’ ಎಂದು ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು ಹೇಳಿದರು.
ದಲಿತ ಸಂಘರ್ಷ ಸಮಿತಿ ಸದಸ್ಯ ಮುನಿಯಪ್ಪ, ನಗರಸಭೆ ಮಾಜಿ ಸದಸ್ಯ ಅಫ್ರೋಜ್ ಪಾಷಾ, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ದಲಿತ ಮುಖಂಡ ನಾರಾಯಣಸ್ವಾಮಿ ಪಾಲ್ಗೊಂಡರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.