ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ | ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಬೇಡ: ನೋಡಲ್ ಅಧಿಕಾರಿ ಕಿವಿಮಾತು

Last Updated 11 ಮಾರ್ಚ್ 2021, 14:03 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಭಯಪಡುವ ಅಗತ್ಯವಿಲ್ಲ. ಮುಖ್ಯ ಪರೀಕ್ಷೆಗೆ ಇನ್ನೂ 103 ದಿನ ಬಾಕಿಯಿದ್ದು, ಈಗಿನಿಂದಲೇ ಶ್ರದ್ಧೆಯಿಟ್ಟು ಓದಿದರೆ ಪರೀಕ್ಷೆ ಕಷ್ಟವಲ್ಲ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್‌ ಕಿವಿಮಾತು ಹೇಳಿದರು.

ಜಿಲ್ಲೆಯ ಬೂದಿಕೋಟೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿ, ‘ವಿದ್ಯಾರ್ಥಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ ಎಂಬ ಆತಂಕ ಬೇಡ. ಎಲ್ಲಾ ಪರೀಕ್ಷೆಗಳೂ ಒಂದೇ. ಕಲಿಕೆಯಲ್ಲಿ ಯಶ ಸಾಧಿಸಿದ್ದರೆ ಪ್ರಶ್ನೆಗಳಿಗೆ ಉತ್ತರಿಸಲು ಭಯ ಬೇಕಿಲ್ಲ’ ಎಂದು ತಿಳಿಸಿದರು.

‘ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ಸಿಗುವುದರಿಂದ ಆತಂಕವಿಲ್ಲದೆ ಪರೀಕ್ಷೆ ಬರೆಯಬಹುದು. ಬರವಣಿಗೆ ಉತ್ತಮವಾಗಿದ್ದರೆ ಹೆಚ್ಚಿನ ಅಂಕ ಬರುವ ಸಾಧ್ಯತೆ ಇರುತ್ತದೆ. ಬರವಣಿಗೆ ಮೌಲ್ಯಮಾಪಕರು ಓದುವಂತಿದ್ದರೆ ಅಂಕ ನೀಡಿಕೆಯಲ್ಲೂ ಧಾರಾಳತನ ತೋರುತ್ತಾರೆ, ಆದ್ದರಿಂದ ಬರವಣಿಗೆ ಉತ್ತಮಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಈಗಾಗಲೇ ಹಲವು ಶಾಲೆಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿದೆ. ಕೆಲವೆಡೆ ಮಾರ್ಚ್‌ ಅಂತ್ಯದೊಳಗೆ ಪಠ್ಯಕ್ರಮ ಮುಗಿಯಲಿದೆ. ನಂತರ ಗುಂಪು ಅಧ್ಯಯನಕ್ಕೆ ಆದ್ಯತೆ ನೀಡಲಾಗುತ್ತದೆ. ಇಲಾಖೆ ಕ್ರಿಯಾಯೋಜನೆಯಂತೆ ಚಟುವಟಿಕೆ ನಡೆಯುತ್ತಿವೆ. ಈಗಾಗಲೇ ಅಧ್ಯಾಯವಾರು ಪ್ರಶ್ನೆಪತ್ರಿಕೆ ನೀಡಲಾಗಿದೆ ಮತ್ತು ಈ ಬಾರಿ ಪ್ರಶ್ನೋತ್ತರ ಕೋಠಿ ಕೊಡಲಾಗುತ್ತದೆ’ ಎಂದು ವಿವರಿಸಿದರು.

ಗುಣಾತ್ಮಕ ಅಂಕ: ‘ಶೇ 100ರ ಫಲಿತಾಂಶ ಸಾಧನೆಯ ಗುರಿಯಿರಲಿ. ಜಿಲ್ಲಾವಾರು ಫಲಿತಾಂಶದಲ್ಲಿ ಒಟ್ಟು ಉತ್ತೀರ್ಣರಾದವರ ಸಂಖ್ಯೆ ಪರಿಗಣಿಸದೆ ಗುಣಾತ್ಮಕ ಅಂಕಗಳ ಆಧಾರದಲ್ಲಿ ಜಿಲ್ಲೆಗೆ ರ್‌್ಯಾಂಕ್‌‌ ನೀಡುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳು ಎ ಮತ್ತು ಎ+ ಶ್ರೇಣಿ ಪಡೆಯುವತ್ತ ಗಮನ ಹರಿಸಬೇಕು’ ಎಂದರು.

‘ಪರೀಕ್ಷೆ ಕುರಿತಂತೆ ಗೊಂದಲಗಳನ್ನು ಪರಿಹರಿಸಿಕೊಳ್ಳಿ. ಸಮಸ್ಯೆಗಳಿದ್ದರೆ ಧೈರ್ಯದಿಂದ ಶಿಕ್ಷಕರ ಬಳಿ ಪ್ರಶ್ನೆ ಕೇಳಿ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನದೆ ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸಿ. ಗುಂಪು ಚರ್ಚೆ, ಸಂವಾದ, ಪುನರ್ಮನನದ ಮೂಲಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಪರೀಕ್ಷೆಗೆ ಸಿದ್ಧರಾಗಿ’ ಎಂದು ಹೇಳಿದರು.

‘ಧ್ಯಾನ, ಯೋಗದ ಮೂಲಕ ಮನಸ್ಸನ್ನು ಕಲಿಕೆಯತ್ತ ಬಾಗಿಸಿ. ಶೇ 10ರಷ್ಟು ಮಾತ್ರವೇ ಪ್ರೇರಣೆ, ಉಳಿದ ಶೇ 90ರಷ್ಟು ಪರಿಶ್ರಮವಿದ್ದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯ. ಏಕಾಗ್ರತೆ, ಆಸಕ್ತಿ, ಶ್ರದ್ಧೆಯಿದ್ದರೆ ಕಲಿಕೆಯಲ್ಲಿ ಸಾಧನೆ ಸುಲಭ, ಸ್ವಯಂ ಕಲಿಕೆಯ ಮನೋಭಾವ ಬಲಗೊಳ್ಳಬೇಕು. ಪಠ್ಯಪುಸ್ತಕ ಓದುವ ಅಭ್ಯಾಸ ಮಾಡಿ’ ಎಂದು ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಕಿವಿಮಾತು ಹೇಳಿದರು.

ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಬಂಗಾರಪೇಟೆ ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಸಿ.ಎಂ.ವೆಂಕಟರಮಣಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT