ಗುರುವಾರ , ಆಗಸ್ಟ್ 11, 2022
23 °C
ಬಸ್‌ ನಿಲ್ದಾಣ ಭಣಭಣ

ಸತತ 3ನೇ ದಿನ ಮುಷ್ಕರ: ರಸ್ತೆಗಿಳಿಯದ ಬಸ್‌; ₹ 1.25 ಕೋಟಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ಭಾನುವಾರವೂ ಮುಷ್ಕರ ಮುಂದುವರಿಸಿದ್ದರಿಂದ ಜಿಲ್ಲೆಯಲ್ಲಿ ಮೂರನೇ ದಿನವೂ ಬಸ್‌ಗಳು ಸಂಚರಿಸಲಿಲ್ಲ.

ಮುಷ್ಕರದ ಮೊದಲ ದಿನವಾದ ಶುಕ್ರವಾರ (ಡಿ.11) ಜಿಲ್ಲೆಯಲ್ಲಿ ಕೆಲ ಕಾಲ ಚಾಲಕರು, ನಿರ್ವಾಹಕರು ಹಾಗೂ ಇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಬಂಗಾರಪೇಟೆ ತಾಲ್ಲೂಕಿನಲ್ಲಿ 4 ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಯಿತು.

ನಂತರ ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ಕೆಲಸ ಸ್ಥಗಿತಗೊಳಿಸಿ ಮನೆಗೆ ಹಿಂದಿರುಗಿದ್ದರು. ಬಳಿಕ ಬಸ್‌ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಡಿಪೊಗಳಲ್ಲಿ ನಿಲ್ಲಿಸಲಾಗಿತ್ತು. ಸಂಸ್ಥೆ ಅಧಿಕಾರಿಗಳ ಮನವೊಲಿಕೆ ಪ್ರಯತ್ನಕ್ಕೂ ಜಗ್ಗದ ನೌಕರರು ಮುಷ್ಕರ ಮುಂದುವರಿಸಿದ್ದರು.

ಮುಷ್ಕರದ ಸಂಗತಿ ತಿಳಿದಿದ್ದ ಸಾರ್ವಜನಿಕರು ಖಾಸಗಿ ಬಸ್‌ ಹಾಗೂ ವಾಹನಗಳ ಮೊರೆ ಹೋದರು. ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಎಂದಿಗಿಂತ ಹೆಚ್ಚಿನ ಜನಸಂದಣಿ ಕಂಡುಬಂತು. ಖಾಸಗಿ ವಾಹನಗಳ ಮಾಲೀಕರು ಮುಷ್ಕರದ ಲಾಭ ಪಡೆದು ಸಾರ್ವಜನಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡುತ್ತಿದ್ದುದ್ದು ಎಲ್ಲೆಡೆ ಸಾಮಾನ್ಯವಾಗಿತ್ತು.

ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು ಮುಷ್ಕರದ ಕಾರಣದಿಂದ ಭಣಗುಡುತ್ತಿದ್ದವು. ನಿಲ್ದಾಣದಲ್ಲಿನ ಅಂಗಡಿಗಳು ಹಾಗೂ ಹೋಟೆಲ್‌ಗಳು ಮುಚ್ಚಿದ್ದವು.

₹ 1.25 ಕೋಟಿ ನಷ್ಟ: ಜಿಲ್ಲಾ ಕೇಂದ್ರ ಕೋಲಾರ, ಮಾಲೂರು, ಮುಳಬಾಗಿಲು, ಕೆಜಿಎಫ್‌ ಹಾಗೂ ಶ್ರೀನಿವಾಸಪುರ ಸೇರಿದಂತೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿಯ 5 ಡಿಪೊಗಳಿವೆ. ಜಿಲ್ಲೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಪರ್ಕವಿದೆ. ಆಂಧ್ರಪ್ರದೇಶ, ತಮಿಳುನಾಡು ರಾಜ್ಯಕ್ಕೂ ಪ್ರತಿನಿತ್ಯ ನೂರಾರು ಬಸ್‌ ಸಂಚರಿಸುತ್ತವೆ.

ಕೋಲಾರ ವಿಭಾಗದ 5 ಡಿಪೊಗಳಿಂದ ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ 320 ಅನುಸೂಚಿಗಳಲ್ಲಿ (ಶೆಡ್ಯೂಲ್‌) ಬಸ್‌ ಸಂಚರಿಸುತ್ತಿದ್ದವು. ಒಂದು ಅನುಸೂಚಿಗೆ ಕನಿಷ್ಠ 250 ಕಿಲೋ ಮೀಟರ್‌ನಿಂದ ಗರಿಷ್ಠ 500 ಕಿ.ಮೀ ಪ್ರಯಾಣದ ಗುರಿ ಇರುತ್ತದೆ.

ಒಟ್ಟಾರೆ 320 ಅನುಸೂಚಿಗಳಿಂದ ದಿನಕ್ಕೆ 80 ಸಾವಿರ ಕಿ.ಮೀ ದೂರ ಕ್ರಮಿಸಲಾಗುತ್ತಿತ್ತು ಮತ್ತು ಸರಾಸರಿ 50 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸಂಸ್ಥೆಗೆ ದಿನಕ್ಕೆ ಸರಾಸರಿ ₹ 42 ಲಕ್ಷ ಆದಾಯ ಬರುತ್ತಿತ್ತು. ನೌಕರರ 3 ದಿನದ ಮುಷ್ಕರದಿಂದ ಬಸ್‌ಗಳು ಡಿಪೊಗಳಲ್ಲಿ ನಿಂತಲ್ಲೇ ನಿಂತಿದ್ದು, ಸುಮಾರು ₹ 1.25 ಕೋಟಿ ನಷ್ಟವಾಗಿದೆ.

ಕೋವಿಡ್‌ ಮತ್ತು ಲಾಕ್‌ಡೌನ್‌ ಸಂದರ್ಭದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದ ಕೆಎಸ್‌ಆರ್‌ಟಿಸಿಯ ಆದಾಯ ಇತ್ತೀಚೆಗೆ ಚೇತರಿಸಿಕೊಂಡಿತ್ತು. ಕಡಿಮೆ ಬಸ್‌ಗಳನ್ನು ಓಡಿಸುತ್ತಿದ್ದರೂ, ಆದಾಯದಲ್ಲಿ ಪ್ರಗತಿ ಕಂಡು ನಷ್ಟ ಇಳಿಮುಖವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು