ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಸುಧಾರಣೆಗೆ ಶಿಕ್ಷಕರ ಪರಿವಾರ ರಚನೆ

ಪ್ರತಿ ಶಾಲೆಯಲ್ಲಿ ತಾಯಂದಿರ ಸಭೆ: ಡಿಡಿಪಿಐ ನಾಗೇಶ್ ಹೇಳಿಕೆ
Last Updated 8 ಅಕ್ಟೋಬರ್ 2021, 15:24 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಸಂಪನ್ಮೂಲ ಶಿಕ್ಷಕರ ಕೋಲಾರ ಪರಿವಾರ ರಚಿಸಲಾಗಿದೆ. ನ.2ರಿಂದ ವಿಶೇಷ ತರಗತಿ, ಮಕ್ಕಳ ಕಲಿಕೆಗೆ ಪ್ರೇರಣೆ ನೀಡಲು ಪ್ರತಿ ಶಾಲೆಯಲ್ಲೂ ತಾಯಂದಿರ ಸಭೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು.

2021-22ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದ ಪ್ರಗತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ಕೋಲಾರ ಪರಿವಾರ ಅಧಿವೇಶನ ಹಾಗೂ ಹಿಂದಿ ಭಾಷಾ ಶಿಕ್ಷಕರ ಸ್ಫೂರ್ತಿ ಪ್ರೇರಣಾ ಕಾರ್ಯಾಗಾರಕ್ಕೆ ಉದ್ಘಾಟಿಸಿ ಮಾತನಾಡಿದರು.

‘ಇತರೆಲ್ಲಾ ವಿಷಯಗಳಂತೆ ಹಿಂದಿ ಭಾಷಾ ವಿಷಯಕ್ಕೂ ಪ್ರಾಮುಖ್ಯತೆ ಇದೆ. ಅಂಕಗಳ ಒಟ್ಟಾರೆ ಸಾಧನೆಗೆ ಪ್ರತಿ ವಿಷಯದಲ್ಲೂ ಸಾಧನೆ ಅಗತ್ಯ. ಮಕ್ಕಳೊಂದಿಗೆ ತರಗತಿಯಲ್ಲಿ ಹಿಂದಿಯಲ್ಲೇ ಮಾತನಾಡಿ. ಎಸ್ಸೆಸ್ಸೆಲ್ಸಿ ಗುಣಾತ್ಮಕ ಫಲಿತಾಂಶಕ್ಕಾಗಿ ಇಲಾಖೆ ಕ್ರಮ ಕೈಗೊಳ್ಳಲಿದೆ. ಅಧ್ಯಾಯವಾರು ಪ್ರಶ್ನೋತ್ತರ ತಯಾರಿಸಿದ್ದು, ಇದನ್ನು ದಾನಿಗಳ ನೆರವಿನಿಂದ ಮುದ್ರಿಸಿ ಶಾಲೆಗಳಿಗೆ ತಲುಪಿಸಲಾಗುತ್ತದೆ’ ಎಂದು ವಿವರಿಸಿದರು.

‘ಮಕ್ಕಳಿಗೆ ಪರೀಕ್ಷಾ ಕುರಿತು ಭಯ ಹೋಗಲಾಡಿಸಲು ಆಯಾ ಕೇಂದ್ರಗಳಲ್ಲೇ ಅಣಕು ಪರೀಕ್ಷೆ ನಡೆಸಲಾಗುತ್ತದೆ. ಒಟ್ಟಾರೆ ಪರೀಕ್ಷಾ ಕೇಂದ್ರಗಳು ಮಕ್ಕಳ ಸ್ನೇಹಿಯಾಗುವಂತೆ ಮಾಡಲಾಗುತ್ತದೆ. ಶಿಕ್ಷಕರಿಗೆ ಅಂತರ ಶಾಲಾ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ, ಗೈರಾದವರ ಮನೆಗಳಿಗೆ ಶಿಕ್ಷಕರ ಭೇಟಿ, ಪೋಷಕರೊಂದಿಗೆ ಮಾತುಕತೆ, ಮಕ್ಕಳು ಮನೆಯಲ್ಲಿ ಪ್ರತಿನಿತ್ಯ ಓದುವಂತೆ ಮಾಡಲು ನಿತ್ಯ ಶಿಕ್ಷಕರಿಂದ ಕರೆ ನೀಡುವ ಬಗ್ಗೆ ಆಲೋಚನೆ ಮಾಡಲಾಗುತ್ತದೆ’ ಎಂದರು.

‘2 ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳನ್ನು ಇಲಾಖೆಯ ಅನುಷ್ಠಾನಾಧಿಕಾರಿಗಳಿಗೆ ದತ್ತು ನೀಡಲಾಗುತ್ತದೆ. 15 ದಿನಕ್ಕೊಮ್ಮೆ ವರದಿ ನೀಡುವಂತೆ ಸೂಚಿಸುವುದು ಫಲಿತಾಂಶ ಉತ್ತಮಪಡಿಸುವಲ್ಲಿ ಇಲಾಖೆ ಕೈಗೊಳ್ಳಲಿರುವ ಯೋಜನೆಗಳ ಭಾಗವಾಗಿದೆ’ ಎಂದು ಮಾಹಿತಿ ನೀಡಿದರು.

ಶಿಕ್ಷಕರಿಗೆ ಸವಾಲು: ‘8ನೇ ತರಗತಿಯಿಂದಲೇ ಹಲವು ಶಾಲೆಗಳಲ್ಲಿ ಹಿಂದಿ ಕಲಿಕೆ ಆರಂಭಗೊಳ್ಳುವುದರಿಂದ ಪ್ರೌಢ ಶಾಲಾ ಶಿಕ್ಷಕರು ಅಕ್ಷರ ಕಲಿಕೆಯೊಂದಿಗೆ ಆರಂಭಿಸಬೇಕಾಗಿದ್ದು, ಇದೊಂದು ಸವಾಲಾಗಿದೆ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟರು.

‘ಸಣ್ಣ ಶಬ್ದಗಳಿಂದ ಆರಂಭಿಸಿ ವಾಕ್ಯ ರಚನೆ ಕಲಿಸಿ. ಕನ್ನಡ, ಹಿಂದಿ ಭಾಷೆ, ವಾಕ್ಯ ರಚನೆಯಲ್ಲಿ ಸಾಮ್ಯತೆ ಇರುವುದರಿಂದ ಕಲಿಕೆ ಸುಲಭ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಭಾಷಾ ಪಾಂಡಿತ್ಯ ಬೆಳೆಸುವ ಅಗತ್ಯವಿದೆ. ಗೊಂದಲವಿದ್ದರೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳಿ. ಎಸ್ಸೆಸ್ಸೆಲ್ಲಿ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮವಾಗಲು ಶಿಕ್ಷಕರ ಪರಿಶ್ರಮ ಅಗತ್ಯ’ ಎಂದರು.

‘ಮಕ್ಕಳಲ್ಲಿ ಓದು ಬರವಣಿಗೆ ಜ್ಞಾನ ಹೆಚ್ಚಿಸಿ. ಹಿಂದಿ ಭಾಷಾ ವಿಷಯದಲ್ಲಿ ಪ್ರಾವಿಣ್ಯತೆ ಬಂದರೆ ಉದ್ಯೋಗಕ್ಕಾಗಿ ಹೊರ ರಾಜ್ಯಕ್ಕೆ ಹೋದಾಗಲೂ ಧೈರ್ಯದಿಂದ ಜೀವನ ನಡೆಸುವ ಶಕ್ತಿ ಬೆಳೆಯುತ್ತದೆ. ಅಧ್ಯಾಯವಾರು ಪ್ರಶ್ನೋತ್ತರ ಮಾಲಿಕೆ ಸಿದ್ಧಪಡಿಸಲಾಗಿದೆ. ಮಕ್ಕಳಿಗೆ ರೂಪಣಾತ್ಮಕ ಚಟುವಟಿಕೆ ಕುರಿತ ಮಾಹಿತಿ ನೀಡಲಾಗುತ್ತಿದೆ’ ಎಂದು ಹೇಳಿದರು.

ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಎಂ.ಆರ್.ಜಯಂತಿ, ಎಲ್.ಎಂ.ಮಂಜುನಾಥ್, ವೇಣುಗೋಪಾಲ, ಶೋಭಾ, ಸೋಮಶೇಖರ್, ಚಂದ್ರಶೇಖರ್, ಪ್ರಭಾ, ರಾಘವೇಂದ್ರ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT