ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯೋವೃದ್ಧರ ಪೋಷಿಸುವ ಹೃದಯವಂತಿಕೆ ಅಗತ್ಯ

Last Updated 15 ನವೆಂಬರ್ 2020, 13:37 IST
ಅಕ್ಷರ ಗಾತ್ರ

ಕೋಲಾರ: ‘ವಯೋವೃದ್ಧರ ಸೇವೆ ದೇವರ ಸೇವೆಗಿಂತಲು ಮಿಗಿಲು. ವಯೋವೃದ್ಧರನ್ನು ಮಕ್ಕಳಂತೆ ಪ್ರೀತಿಯಿಂದ ಪೋಷಿಸುವ ಹೃದಯವಂತಿಕೆ ಅಗತ್ಯವಿದೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ನಗರದ ಮುಸ್ಸಂಜೆ ಮನೆ ವೃದ್ಧಾಶ್ರಮದಲ್ಲಿ ಭಾನುವಾರ ನಡೆದ ‘ಹಿರಿಯರೊಂದಿಗೆ ದೀಪಾವಳಿ ಸಂಭ್ರಮ’ ಕಾರ್ಯಕ್ರಮದಲ್ಲಿ ಹೊಸ ಬಟ್ಟೆ, ಸಿಹಿ ವಿತರಿಸಿ ಮಾತನಾಡಿದರು.

‘ಸಮಾಜದಲ್ಲಿ ಸಾಕಷ್ಟು ಮಂದಿ ದೀಪಾವಳಿಯಂತಹ ಸಂಭ್ರಮ, ಹಬ್ಬಗಳ ಆಚರಣೆ ಹಾಗೂ ಮಕ್ಕಳ ವಾತ್ಸಲ್ಯದಿಂದ ವಂಚಿತರಾಗಿರುತ್ತಾರೆ. ಇದಕ್ಕೆ ಮಕ್ಕಳೇ ಪ್ರಮುಖ ಕಾರಣ ಎನ್ನುವುದು ವಿಷಾದಕರ ಸಂಗತಿ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ವೃದ್ಧಾಶ್ರಮ ಸಂಸ್ಕೃತಿ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜೀವನದ ಸಂಧ್ಯಾ ಕಾಲದಲ್ಲಿ ವಯೋವೃದ್ಧ ತಂದೆ ತಾಯಿಗೆ ಸಿಗಬೇಕಾದ ಪ್ರೀತಿ ಮತ್ತು ಆರೈಕೆ ಇಲ್ಲವಾಗಿದೆ. ವಯೋವೃದ್ಧ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಬದುಕು ಯಾರಿಗೂ ಶಾಶ್ವತವಲ್ಲ. ಆದರೆ, ಬದುಕಿನಲ್ಲಿ ನಮ್ಮ ನಡೆ ಪ್ರಮುಖವಾಗುತ್ತದೆ. ಸಾಕಿ ಬೆಳೆಸಿದ ತಂದೆ ತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ವಯಸ್ಸಾದಂತೆ ಪೋಷಕರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಸರಿಯಿರುವುದಿಲ್ಲ. ಅವರಿಗೆ ಆಶ್ರಯವಾಗಿ ಯಾರಾದರೂ ಪಕ್ಕದಲ್ಲಿ ಇರಲೇಬೇಕಾಗುತ್ತದೆ. ವಯೋವೃದ್ಧರಿಗೆ ಮಕ್ಕಳಿಂದ ದೂರವಾಗಿದ್ದೇವೆ ಎಂಬ ನೋವು ಕಾಡದಂತೆ ಯುವ ಪೀಳಿಗೆ ನಡೆದುಕೊಳ್ಳಬೇಕು. ಉಳ್ಳವರು ವೃದ್ಧಾಶ್ರಮಗಳಿಗೆ ಆರ್ಥಿಕ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

‘ಮುಸ್ಸಂಜೆ ಮನೆ ಸಂಸ್ಥೆಯು ಪ್ರತಿ ವರ್ಷದಂತೆ ಈ ಬಾರಿಯು ವಯೋವೃದ್ಧರು ಮತ್ತು ಅನಾಥ ಮಕ್ಕಳೊಂದಿಗೆ ದೀಪಾವಳಿ ಅಚರಿಸುತ್ತಿದೆ. 9 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ವಿವರಿಸಿದರು.‌

ಅತಿಥಿಗಳು ಆಶ್ರಮದ ವೃದ್ಧರಿಗೆ ನೋಮುದಾರ ಕಟ್ಟಿ, ಸಿಹಿ ನೀಡಿದರು. ವಕೀಲರಾದ ಕೆ.ವಿ.ಸುರೇಂದ್ರಕುಮಾರ್, ರಾಘವೇಂದ್ರ, ಮುಸ್ಸಂಜೆ ಮನೆ ವೃದ್ಧಾಶ್ರಮದ ಕಾರ್ಯದರ್ಶಿ ಶಾಂತಕುಮಾರಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT