ಮಂಗಳವಾರ, ಫೆಬ್ರವರಿ 7, 2023
26 °C
ಕರಡಗೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರ ಪರದಾಟ

ಕೆಜಿಎಫ್: ಶೌಚಕ್ಕೆ ಮಕ್ಕಳಿಗೆ ಬಯಲೇ ಗತಿ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಶ್ರೀನಿವಾಸಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಡಿಗ್ರಾಮ ಕರಡಗೂರು ಸರ್ಕಾರಿ ಪ್ರೌಢಶಾಲೆ ಶೌಚಾಲಯ ಪಾಳಿ ಬಿದ್ದಿರುವ ಕಾರಣ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಶೌಚಕ್ಕೆ ಬಯಲೇ ಗತಿಯಾಗಿದೆ.

ಶಾಲೆಯಲ್ಲಿ ಒಟ್ಟು 65 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರ ಪೈಕಿ 20 ವಿದ್ಯಾರ್ಥಿನಿಯರು ಇದ್ದಾರೆ. ಶಾಲಾ ಆವರಣದಲ್ಲಿರುವ ಶೌಚಾಲಯ ಪಾಳು ಬಿದ್ದಿದೆ. ಇದರಿಂದ ವಿದ್ಯಾರ್ಥಿಗಳು ಶಾಲೆಯ ಹಿಂಭಾಗದಲ್ಲಿರುವ ಬಂಡೆ ಕಲ್ಲುಗಳ ಮರೆಯಲ್ಲಿ ಶೌಚ ಮಾಡಬೇಕಾದ ದುಸ್ಥಿತಿ ಇದೆ. ವಿದ್ಯಾರ್ಥಿನಿಯರದ್ದು ಇದೇ ಸ್ಥಿತಿಯಾಗಿದೆ.  ಬಾಲಕರು ಮತ್ತು ಬಾಲಕಿಯರನ್ನು ಸರದಿ ಮೇರೆಗೆ ಬಂಡೆ ಮರೆಗೆ ಶೌಚಾಲಯಕ್ಕೆ ಕಳಿಸಲಾಗುತ್ತಿದೆ.

ಕರಡಗೂರು ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಒಂದೇ ಸ್ಥಳದಲ್ಲಿದೆ. ಹಿಂದೆ ಕಟ್ಟಿದ ಮೂರು ಶೌಚಾಲಯ ಪಾಳು ಬಿದ್ದಿವೆ. ಒಂದು ಶೌಚಾಲಯವನ್ನು ಶಿಕ್ಷಕರು ಉಪಯೋಗಿಸುತ್ತಿದ್ದಾರೆ. 2018-19 ರಲ್ಲಿ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣ ಮಾಡಿತ್ತು. ಅದಕ್ಕೆ ಡಓವರ್ ಹೆಡ್ ಟ್ಯಾಂಕ್ ಮತ್ತು ಕೊಳವೆಗಳನ್ನು ಜೋಡಿಸಲಾಗಿತ್ತು. ಆದರೆ ಅದು ಇದುವರೆವಿಗೂ ಉಪಯೋಗ ಮುಕ್ತವಾಗಿಸಿಲ್ಲ. ದುಷ್ಕರ್ಮಿಗಳು ಕೊಳವೆಗಳನ್ನು ಒಡೆದು ಹಾಕಿರುವುದರಿಂದ ಶೌಚಾಲಯವನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ. ಸಣ್ಣಪುಟ್ಟ ದುರಸ್ತಿ ಮಾಡಿದರೆ, ಹೊಸದಾಗಿ ನಿರ್ಮಾಣ ಮಾಡಿರುವ ಶೌಚಾಲಯವನ್ನು ಉಪಯೋಗಿಸಿಕೊಳ್ಳಬಹುದು. ಆದರೆ ಹೊಸದಾಗಿ ಪುನಃ ಶೌಚಾಲಯನ್ನು ನಿರ್ಮಾಣ ಮಾಡಲು ಗ್ರಾಮ ಪಂಚಾಯತಿ ಮುಂದಾಗಿದೆ. ₹4.30 ಲಕ್ಷ ಮೀಸಲು ಇಡಲಾಗಿದೆ.

ಗಡಿ ಗ್ರಾಮದ ಶಾಲೆಗೆ ಸೌಕರ್ಯ ಕಲ್ಪಿಸಿ: ಈ ಗ್ರಾಮದಿಂದ 5 ಕಿ.ಮೀ ಕ್ರಮಿಸಿದರೆ ಆಂಧ್ರಪ್ರದೇಶ ಸಿಗುತ್ತದೆ. ಇಂಥ ಗಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಉತ್ತಮ ಬೆಳೆವಣಿಗೆ. ಆದರೆ ಶೌಚಾಲಯ ವ್ಯವಸ್ಥೆ ವ್ಯವಸ್ಥೆ ಇಲ್ಲದೆ ಇರುವುದು ಶೋಚನೀಯ. ಕನ್ನಡ ಎಂದು ಬಾಯಿ ಬಡಿದರೆ ಸಾಲದು, ಗಡಿ ಗ್ರಾಮದ ಕನ್ನಡ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಸೌಸೌಕರ್ಯ ಕಲ್ಪಿಸಬೇಕು. ಕರಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶೀಘ್ರವೇ ಶೌಚಾಲಯ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮವಹಿಸಬೇಕು ಎನ್ನುವುದು ಇಲ್ಲಿನ ಸ್ಥಳೀಯ ಆಗ್ರಹ.

ಪಾಳು ಬಿದ್ದ ಶೌಚಾಲಯಕ್ಕಿಂತ ಬಯಲು ಶೌಚಾಲಯವೇ ವಾಸಿ
ಶೌಚಾಲಯದ ಸುತ್ತಮುತ್ತ ಪೊದೆಗಳು ಹೇರಳವಾಗಿ ಬೆಳೆದಿದೆ. ಹಾವು, ಚೇಳು ಮತ್ತು ವಿಷಜಂತುಗಳ ಕಾಟ ಇದೆ. ಇತ್ತೀಚಿಗೆ ಶೌಚಾಲಯ ಸಮೀಪ ಹಾವು ಕಂಡು ವಿದ್ಯಾರ್ಥಿಗಳು ಭಯಭೀತರಾಗಿದ್ದರು. ಆಗ ಕೆಲ ವಿದ್ಯಾರ್ಥಿಗಳು ಹಾವು ಹೊಡೆದು ಸಾಯಿಸಿದ್ದರು. ಇದರಿಂದ ಪಾಳು ಬಿದ್ದ ಶೌಚಾಲಯಕ್ಕಿಂತ ಬಯಲು ಶೌಚಾಲಯವೇ ವಾಸಿ ಎನ್ನುತ್ತಾರೆ ವಿದ್ಯಾರ್ಥಿಗಳು.

ಶಾಲೆಯ ಶಿಕ್ಷಕರು ಮನಸ್ಸು ಮಾಡಿದರೆ ಪೊದೆಗಳನ್ನು ತೆಗೆಸಬಹುದು. ಆದರೆ ಅವರು ಕೂಡ ನಿರ್ಲಿಪ್ತರಾಗಿದ್ದಾರೆ. ಶಾಲೆ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎನ್ನುತ್ತಾರೆ ಪೋಷಕರು.

ತಡೆಗೋಡೆ ಇಲ್ಲ, ಕಿಡಿಗೇಡಿಗಳ ಕಾಟ
ಶಾಲೆ ಮುಂಭಾಗ ತಡೆಗೋಡೆ ಇದೆ. ಆದರೆ ಹಿಂಭಾಗ ತಡೆಗೋಡೆ ಇಲ್ಲ. ಇದರಿಂದ ಈ ಹಿಂದೆ ನಿರ್ಮಿಸಲಾಗಿದ್ದ ಶೌಚಾಲಯ ಮತ್ತು ಉಪಕರಣಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದರು. ಇದರಿಂದ ಶೌಚಾಲಯಕ್ಕೆ ಉಪಯೋಗಕ್ಕೆ ಬಾರದಂತೆ ಆಯಿತು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಾಲೆಗೆ ಹೊಸ ಶೌಚಾಲಯ ನಿರ್ಮಿಸುವ ಜತೆಗೆ ತಡೆಗೋಡೆ ನಿರ್ಮಿಸಿಕೊಡಬೇಕು ಎನ್ನುವುದು ಪ್ರಭಾರ ಮುಖ್ಯಶಿಕ್ಷಕಿ ಪ್ರೀತಿ ಅವರ ಮನವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು