ಬುಧವಾರ, ಜುಲೈ 28, 2021
25 °C

ರಾಜಕೀಯಕ್ಕೆ ತಾ.ಪಂ–ಜಿ.ಪಂ ಚುನಾವಣೆ ಅಡಿಪಾಯ: ಶಾಸಕ ಕೆ.ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜಕೀಯವಾಗಿ ಬೆಳೆಯಲು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯು ಅಡಿಪಾಯ. ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಗೊಂದಲ ಮಾಡಿಕೊಳ್ಳಬೇಡಿ. ಆಯಾ ಕ್ಷೇತ್ರದಲ್ಲೇ ಕಾರ್ಯಕರ್ತರ ಸಭೆ ನಡೆಸಿ ಸ್ಥಳದಲ್ಲೇ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಜಿ.ಪಂ ಮತ್ತು ತಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಶನಿವಾರ ನಡೆದ ತಾಲ್ಲೂಕಿನ ಕಸಬಾ, ಹುತ್ತೂರು, ಹೋಳೂರು, ವಕ್ಕಲೇರಿ, ನರಸಾಪುರ, ವೇಮಗಲ್ ಹಾಗೂ ಸುಗಟೂರು ಹೋಬಳಿ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ರಾಜಕೀಯ ವ್ಯವಸ್ಥೆ ಸಂಪೂರ್ಣ ಕಲುಷಿತಗೊಂಡಿದೆ. ಹಣವಂತರಿಗೆ ಮಾತ್ರ ರಾಜಕಾರಣವೆಂಬ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜಕಾರಣದಲ್ಲಿ ಸೋಲು ಗೆಲುವು ಸಾಮಾನ್ಯ. ಈಗ ಚುನಾವಣೆಗಳು ಹಣ ಬಲದ ಮಾತ್ರ ನಡೆಯುತ್ತವೆ. ಹಣವಿಲ್ಲದೆ ಚುನಾವಣೆ ನಡೆಸುವುದು ತುಂಬಾ ಕಷ್ಟ. ಜಿ.ಪಂ ಮತ್ತು ತಾ.ಪಂ ಚುನಾವಣಾ ದಿನಾಂಕ ಪ್ರಕಟಗೊಂಡ ಬಳಿಕ ಹೋಬಳಿವಾರು ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಅಸ್ತಿತ್ವ ಮತ್ತು ಸ್ವಾಭಿಮಾನ ಉಳಿಯಬೇಕು. ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಗ್ಗೂಡಿ ಶ್ರಮಿಸೋಣ. ಮುಖಂಡರು ಮತ್ತು ಕಾರ್ಯಕರ್ತರು ಸಣ್ಣಪುಟ್ಟು ಭಿನ್ನಾಭಿಪ್ರಾಯ ಮರೆತು ಪಕ್ಷಕ್ಕಾಗಿ ದುಡಿಯೋಣ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಕಿವಿಮಾತು ಹೇಳಿದರು.

ವಿಫಲರಾಗಿದ್ದೇವೆ: ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ ₹ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಈ ಸಾಧನೆಯನ್ನು ಜನರಿಗೆ ತಲುಪಿಸುವಲ್ಲಿ ನಾವು ವಿಫಲರಾಗಿದ್ದೇವೆ. ಜೆಡಿಎಸ್‌ ಪಕ್ಷ ಎಂದಿಗೂ ಒಂದೇ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಬದಲಿಗೆ ರಾಜಕೀಯವಾಗಿ ಎಲ್ಲರಿಗೂ ಅವಕಾಶ ನೀಡುತ್ತಾ ಬಂದಿದೆ’ ಎಂದು ತಿಳಿಸಿದರು.

‘ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಗೆ ಸ್ಪರ್ಧಿಸಲು ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಎಲ್ಲಾ ಆಕಾಂಕ್ಷಿಗಳಿಗೂ ಅವಕಾಶ ಸಿಗುವುದಿಲ್ಲ. ಪಕ್ಷ ಗುರುತಿಸಿದವರ ಗೆಲುವಿಗೆ ಶ್ರಮಿಸಬೇಕು. ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರೇ ತೀರ್ಮಾನ ತೆಗೆದುಕೊಂಡು ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ. ಪಕ್ಷದ ಸಮನ್ವಯ ಸಮಿತಿಯ ಪಟ್ಟಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಮೀಸಲಾತಿ ಪಟ್ಟಿ ಪ್ರಕಾರ ಎಲ್ಲಾ ಸಮುದಾಯದವರಿಗೆ ಅವಕಾಶ ಸಿಗುತ್ತದೆ. ಅವಕಾಶ ಸಿಕ್ಕಿರುವ ಸಮುದಾಯದವರಲ್ಲಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿ ಅವರ ಗೆಲುವಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಸಭೆ ನಡೆಸಿ: ‘ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಿ. ಸಮನ್ವಯ ಸಮಿತಿ ಮಾಡಿ ತಿಂಗಳಿಗೆ ಒಂದು ಬಾರಿ ಸಭೆ ನಡೆಸಿ ಪಕ್ಷದ ಆಗುಹೋಗುಗಳ ಬಗ್ಗೆ ಚರ್ಚಿಸಿ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್‌ ತಿಳಿಸಿದರು.
‘ಎಲ್ಲಾ ಕ್ಷೇತ್ರಗಳಲ್ಲೂ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಪಕ್ಷದವರೇ ಇಬ್ಬರು ಮೂವರು ಚುನಾವಣೆಗೆ ಸ್ಪರ್ಧಿಸಿ ಸೋಲುವ ಬದಲು ಪಕ್ಷ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಒಗ್ಗೂಡಿ ಕೆಲಸ ಮಾಡುವುದು ಒಳ್ಳೆಯದು’ ಎಂದು ಜೆಡಿಎಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಅಭಿಪ್ರಾಯಪಟ್ಟರು.

‘ಪಕ್ಷ ನಿಷ್ಠರಿಗೆ ಟಿಕೆಟ್ ಕೊಡಬೇಕು. ಜತೆಗೆ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ಸಿಗಬೇಕು. ಹೋಬಳಿವಾರು ಸಮಿತಿ ರಚಿಸಿ ಅಭ್ಯರ್ಥಿಗಳ ಪಟ್ಟಿ ಆಯ್ಕೆ ಮಾಡಲು ಸಮಿತಿಗಳಿ ಜವಾಬ್ದಾರಿ ನೀಡಿ’ ಎಂದು ಪಕ್ಷದ ಕಾರ್ಯಕರ್ತರು, ಮುಖಂಡರು, ಟಿಕೆಟ್‌ ಆಕಾಂಕ್ಷಿಗಳು ಒತ್ತಾಯಿಸಿದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮಾಜಿ ಸದಸ್ಯ ನಂಜುಂಡಪ್ಪ, ಮುಖಂಡರಾದ ಗೋಪಾಲ್, ರಾಮು, ಅನ್ವರ್‌ ಪಾಷಾ, ವೆಂಕಟೇಶ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.