ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌: ಶ್ರೀನಿವಾಸಪುರ ರೈಲ್ವೆ ವರ್ಕ್‌ಶಾಪ್‌ ಕನಸು ಈಡೇರುವುದೇ?

Published 1 ಫೆಬ್ರುವರಿ 2024, 5:02 IST
Last Updated 1 ಫೆಬ್ರುವರಿ 2024, 5:02 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ವರ್ಕ್‌ಶಾಪ್‌ ಸ್ಥಾಪಿಸುವ ಘೋಷಣೆ ಹಲವು ವರ್ಷಗಳಿಂದ ಕನಸಾಗಿಯೇ ಉಳಿದಿದ್ದು, ಕೇಂದ್ರ ಸರ್ಕಾರದ ಮತ್ತೊಂದು ಬಜೆಟ್ ಗುರುವಾರ ಮಂಡನೆಯಾಗುತ್ತಿದೆ.

ಈ ಬಜೆಟ್‌ನಲ್ಲಾದರೂ ರೈಲ್ವೆ ವರ್ಕ್‌ಶಾಪ್‌ ಸ್ಥಾಪನೆಗೆ ಅನುದಾನ ಬಿಡುಗಡೆ, ಕೋಲಾರ–ಬೆಂಗಳೂರು ನೇರ ರೈಲು ಮಾರ್ಗ ಯೋಜನೆ ಘೋಷಣೆ ಆಗುವುದೇ ಎಂಬುದನ್ನು ಜಿಲ್ಲೆಯ ಜನರು ಕಾದು ನೋಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್‌ ಇದಾಗಿದೆ. ಬಳಿಕ ಲೋಕಸಭೆ ಚುನಾವಣೆ ನಡೆಯಲಿದೆ. ಹತ್ತು ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಲಾರಕ್ಕೆಂದೇ ವಿಶೇಷ ಯೋಜನೆ ಬಂದಿಲ್ಲ.

ಎಸ್‌.ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾದಾಗಿನಿಂದ ಪದೇಪದೇ ಪ್ರಸ್ತಾಪ ಮಾಡುತ್ತಿದ್ದರೂ ಯೋಜನೆ ಪ್ರಗತಿ ಕಂಡಿಲ್ಲ. ಅನುದಾನ ಬಿಡುಗಡೆ ಸಂಬಂಧ ಪಿಂಕ್‌ ಬುಕ್‌ನಲ್ಲಿಯೂ ನಮೂದಾಗಿಲ್ಲ. ವರ್ಕ್‌ಶಾಪ್‌ ಸ್ಥಾಪನೆಗೆ ಜಾಗ ವಿಚಾರದಲ್ಲಿ ರಾಜ್ಯ ಸರ್ಕಾರವೂ ಸ್ಪಂದಿಸಿಲ್ಲ.

ಯುಪಿಎ ಸರ್ಕಾರದ ಅವಧಿಯ ಕೊನೆಯ ಕೇಂದ್ರ ಬಜೆಟ್‌ನಲ್ಲಿ ‘ರೈಲ್ವೆ ಕೋಚ್‌ ಫ್ಯಾಕ್ಟರಿ’ ನಿರ್ಮಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. 2014ರ ಲೋಕಸಭೆ ಚುನಾವಣೆಗೆ ಮುನ್ನ ಜಾಗ ಗುರುತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶಂಕುಸ್ಥಾಪನೆ ಕೂಡ ನೆರವೇರಿಸಲಾಗಿತ್ತು. ಜಿಲ್ಲೆಯ ಸಾವಿರಾರು ಮಂದಿಗೆ ಉದ್ಯೋಗ ಸಿಗಬಹುದೆಂದು ಅಂದಾಜಿಸಲಾಗಿತ್ತು.

2020–21ನೇ ಸಾಲಿನ ಬಜೆಟ್‌ನಲ್ಲಿ ಕೋಚ್‌ ಫ್ಯಾಕ್ಟರಿ ಹೋಗಿ 400 ಎಕರೆ ಜಾಗದಲ್ಲಿ ₹ 495 ಕೋಟಿ ವೆಚ್ಚದಲ್ಲಿ ‘ರೈಲ್ವೆ ವರ್ಕ್‌ಶಾಪ್‌’ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಲಾಯಿತು. ಅದೂ ಈಡೇರಿಲ್ಲ.

ಇನ್ನು ಕೋಲಾರ ನಗರದಿಂದ ಬೆಂಗಳೂರಿಗೆ ಸರಿಯಾಗಿ ರೈಲಿನ ವ್ಯವಸ್ಥೆ ಇಲ್ಲ. ಹಿಂದೆ ಘೋಷಿಸಿದ್ದ ಯೋಜನೆಗಳು ಜಾರಿ ಆಗಿಲ್ಲ. ಹೆಚ್ಚುವರಿ ರೈಲು ಸಂಚಾರಕ್ಕೆ ಆಗ್ರಹ ವ್ಯಕ್ತವಾಗುತ್ತಿದ್ದರೂ ಈ ವರೆಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಸದ್ಯ ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ಎರಡು ರೈಲುಗಳು ಸಂಚರಿಸುತ್ತಿವೆ. ಇದರಿಂದ ಪ್ರಯಾಣ ವಿಳಂಬವಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುತ್ತಿಲ್ಲ. ಚಿಕ್ಕಬಳ್ಳಾಪುರಕ್ಕೆ ಸಂಚರಿಸುತ್ತಿರುವ ಹೆಚ್ಚುವರಿ ರೈಲುಗಳನ್ನು ಕೋಲಾರಕ್ಕೂ ವಿಸ್ತರಿಸಬೇಕು, ಕೋಲಾರ–ಬೆಂಗಳೂರು ನೇರ ರೈಲು ಮಾರ್ಗ ನಿರ್ಮಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ. 

ಮುಳಬಾಗಿಲಿಗೆ ರೈಲಿನ ವ್ಯವಸ್ಥೆಯೇ ಇಲ್ಲ. ಸರ್ವೇ ಮಾಡಿದ್ದು, ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಂಸದರು ಗಮನ ಹರಿಸಬೇಕೆಂಬ ಒತ್ತಡ ಆ ಭಾಗದ ಜನರದ್ದು.

ಅಂತರರಾಜ್ಯ ಸಂಪರ್ಕ ಕಲ್ಪಿಸುವ ಬಂಗಾರಪೇಟೆ ರೈಲು ನಿಲ್ದಾಣದ ಅಭಿವೃದ್ಧಿಗೆ ಅನುದಾನ ಲಭಿಸಿದೆ. ಬೆಂಗಳೂರು–ಮಾಲೂರು–ಬಂಗಾರಪೇಟೆ–ಕೆಜಿಎಫ್‌ ನಡುವೆ ಉತ್ತಮ ರೈಲಿನ ವ್ಯವಸ್ಥೆಯೂ ಇದೆ. ಇನ್ನುಳಿದ ಕಡೇ ಅದರ ಕಾಲೂ ಭಾಗ ವ್ಯವಸ್ಥೆಯೂ ಇಲ್ಲ ಎಂಬುದು ಪ್ರಯಾಣಿಕರ ದೂರು. 

ಅನುದಾನ ಬಿಡುಗಡೆ ಮಾಡುವರೇ? ‘ರೈಲ್ವೆ ಕೋಚ್‌ ಫ್ಯಾಕ್ಟರಿ’ಯೂ ಇಲ್ಲ, ರೈಲ್ವೆ ವರ್ಕ್‌ಶಾಪ್‌ ಕೂಡ ಬರಲಿಲ್ಲ! ಮುಳಬಾಗಿಲಿಗೆ ರೈಲು ವ್ಯವಸ್ಥೆಯೇ ಇಲ್ಲ‌
ಇಎಸ್‌ಐ ಆಸ್ಪತ್ರೆ ಸ್ಥಾಪನೆ ಯಾವಾಗ?
ನರಸಾಪುರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪಿಸುವ ಯೋಜನೆ ಇದೆ. ಆದರೆ ಅನುದಾನ ಬಿಡುಗಡೆ ಹಾಗೂ ನಂತರದ ಪ್ರಕ್ರಿಯೆ ನಡೆದಿಲ್ಲ. ‌ನರಸಾಪುರ ಹಾಗೂ ವೇಮಗಲ್‌ನಲ್ಲಿ ಕೈಗಾರಿಕೆಗಳು ಹೆಚ್ಚು ಇರುವುದರಿಂದ 50 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಸುಮಾರು 80 ಸಾವಿರ ಕಾರ್ಮಿಕರಿಗೆ ಉಪಯೋಗವಾಗಲಿದೆ ಎಂದು ಅಂದಾಜಿಸಲಾಗಿದೆ.
‘ಕೃಷ್ಣ–ಪೆನ್ನಾರ್‌ ಜೋಡಣೆ ಮಾಡಲಿ’ ದಕ್ಷಿಣ ಭಾರತದ ನದಿ ಜೋಡಣೆಯ ಕಾರ್ಯಸಾಧ್ಯತೆಯು ಕೇಂದ್ರ ಸರ್ಕಾರದ ಮುಂದಿದೆ. ಕೃಷ್ಣ–ಪೆನ್ನಾರ್‌ ನದಿ ಜೋಡಣೆ ಮಾಡಿ ರಾಜ್ಯದ ಪೆನ್ನಾರ್‌ ನದಿಪಾತ್ರದ ರೈತರಿಗೆ ನೀರು ಕೊಡಬೇಕು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌
ಅಭಿಪ್ರಾಯ… ಬಹಳ ಹಿಂದೆ ಭೇಟಿಯಾಗಿ ಮನವಿ ಮಾಡಿದ್ದೆವು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ. ಕುಡಿಯುವ ನೀರಿಗೆ ಬಳಸುತ್ತಿರುವ ಕೊಳವೆ ಬಾವಿ ನೀರಿನಲ್ಲಿ ಅಪಾಯಕಾರಿ ಯುರೇನಿಯಂ ಪತ್ತೆಯಾಗಿದೆ. ಈ ಬಜೆಟ್‌ನಲ್ಲಾದರೂ ನೀರಾವರಿ ಯೋಜನೆಗೆ ಒತ್ತು ಕೊಡಬೇಕು. ಜಿಲ್ಲೆಯ ಎಲ್ಲಾ ಕೆರೆ ಹಾಗೂ ಕೆರೆ ಜೋಡಿಸುವ ಕಾಲುವೆ ಜಾಲ ಅಭಿವೃದ್ಧಿಗೆ ಪ್ಯಾಕೇಜ್‌ ಘೋಷಿಸಬೇಕು
–ಆರ್‌.ಆಂಜನೇಯ ರೆಡ್ಡಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
ಟೊಮೆಟೊ ಮಾವು ಸಾಗಣೆಗೆ ವ್ಯವಸ್ಥೆ ಮಾಡಿ ಕೋಲಾರದಿಂದ ಟೊಮೆಟೊ ತರಕಾರಿ ಹೂವು ಶ್ರೀನಿವಾಸಪುರದಿಂದ ಮಾವು ಸಾಗಿಸಲು ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲವಾಗಿದೆ. ಈ ಬಜೆಟ್‌ನಲ್ಲಾದರೂ ಹೆಚ್ಚುವರಿ ರೈಲು ಗೂಡ್ಸ್‌ ರೈಲು ಕಲ್ಪಿಸಿ ರೈತರಿಗೆ ಅನುಕೂಲ ಮಾಡಬೇಕು. ‌ಬೇಗನೇ ಹಾಳಾಗುವ ಟೊಮೆಟೊ ಹಾಗೂ ಮಾವು ಸಾಗಿಸಲು ಗೂಡ್ಸ್‌ ರೈಲಿನ ವ್ಯವಸ್ಥೆ ಇದ್ದರೆ ಉತ್ತರ ಭಾರತ ಹಾಗೂ ಇನ್ನಿತರ ಕಡೆಗೆ ತ್ವರಿತವಾಗಿ ಸಾಗಿಸಬಹುದು
–ನಳಿನಿಗೌಡ ರೈತ ಮುಖಂಡೆ ಕೋಲಾರ
‘ನೇರ ರೈಲು ಸಂಪರ್ಕ ಕಲ್ಪಿಸಿ’ ಕೋಲಾರ ನಗರದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ ಸ್ಥಾಪಿಸಬೇಕು. ಇದರಿಂದ ಜಿಲ್ಲೆಯ ಪ್ರಯಾಣಿಕರಿಗೆ ಹಾಗೂ ರೈತರು ಬೆಳೆದ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗುತ್ತದೆ. ಕೋಲಾರ ನಗರವೂ ಅಭಿವೃದ್ಧಿಯಾಗುತ್ತದೆ
–ಕುರುಬರಪೇಟೆ ವೆಂಕಟೇಶ್‌ ನಾಗರಿಕ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT