ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 3ನೇ ಅಲೆ ಭೀತಿ; ಪೋಷಕರ ನಿದ್ದೆಗೆಡಿಸಿದ ವೈರಾಣು ಜ್ವರ

ಅನಾರೋಗ್ಯಪೀಡಿತ ಮಕ್ಕಳ ಸಂಖ್ಯೆ ಏರುಗತಿ: ಸರ್ಕಾರಿ–ಖಾಸಗಿ ಆಸ್ಪತ್ರೆಗಳು ಭರ್ತಿ
Last Updated 17 ಸೆಪ್ಟೆಂಬರ್ 2021, 16:12 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ 3ನೇ ಅಲೆ ಭೀತಿ ನಡುವೆ ಜಿಲ್ಲೆಯ ಮಕ್ಕಳಲ್ಲಿ ಕಾಣಿಸಿಕೊಂಡಿರುವ ವೈರಾಣು ಜ್ವರವು ಪೋಷಕರ ಹಾಗೂ ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.

ದಿನದಿಂದ ದಿನಕ್ಕೆ ಅನಾರೋಗ್ಯಪೀಡಿತ ಮಕ್ಕಳ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಹಾಸಿಗೆ ಕೊರತೆ ಕಾಡಲಾರಂಭಿಸಿದೆ. ಜಿಲ್ಲೆಯ ಜತೆಗೆ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಿಂದಲೂ ಮಕ್ಕಳನ್ನು ಚಿಕಿತ್ಸೆಗಾಗಿ ಜಿಲ್ಲೆಯ ಆಸ್ಪತ್ರೆಗಳಿಗೆ ಕರೆತರಲಾಗುತ್ತಿದೆ.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಹವಾಮಾನದಲ್ಲಿ ಆದ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಕೆಲ ಮಕ್ಕಳಲ್ಲಿ ಕಫಾ ಪ್ರಮಾಣ ಹೆಚ್ಚಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಮುಖ್ಯವಾಗಿ 3 ವರ್ಷದೊಳಗಿನ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಪೋಷಕರಲ್ಲಿ ಕೋವಿಡ್‌ 3ನೇ ಅಲೆಯ ಆತಂಕ ಮನೆ ಮಾಡಿದೆ.

ಸೆ.1ರಿಂದ ಸೆ.9ರವರೆಗೆ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ 127 ಮಕ್ಕಳು ಜ್ವರದ ಕಾರಣಕ್ಕೆ ಒಳ ರೋಗಿಗಳಾಗಿ ದಾಖಲಾಗಿದ್ದರು. ಸೆ.10ರಿಂದ ಏಳು ದಿನದ ಅಂತರದಲ್ಲಿ 104 ಮಕ್ಕಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಾರೆ ಕಳೆದ 17 ದಿನದಲ್ಲಿ 231 ಮಕ್ಕಳು ವೈರಾಣು ಜ್ವರದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಎಲ್ಲಾ ಮಕ್ಕಳಿಗೂ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ.

ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳಲ್ಲೂ ಒಳ ರೋಗಿಗಳಾಗಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಜುಲೈ ತಿಂಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಳವಾಗಿದೆ. ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸಂಖ್ಯೆಯೂ ದ್ವಿಗುಣವಾಗಿದೆ. ಬಹುತೇಕ ಮಕ್ಕಳಲ್ಲಿ ವಿಷಮ ಶೀತ ಜ್ವರ, ಡೆಂಗಿ ಮಾದರಿಯ ಜ್ವರ ಕಾಣಿಸಿಕೊಳ್ಳುತ್ತಿದೆ.

6 ಲಕ್ಷ ಮಕ್ಕಳು: ಜಿಲ್ಲೆಯಲ್ಲಿ 18 ವರ್ಷದೊಳಗಿನ ಸುಮಾರು 6 ಲಕ್ಷ ಮಕ್ಕಳಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟಾರೆ ಸುಮಾರು 40 ಮಂದಿ ಮಕ್ಕಳ ತಜ್ಞರಿದ್ದಾರೆ. ಎಸ್‌ಎನ್‌ಆರ್‌ ಆಸ್ಪತ್ರೆಯ ಮಕ್ಕಳ ವಾರ್ಡ್‌ನ ತೀವ್ರ ನಿಗಾ ಘಟಕವು (ಐಸಿಯು) 6 ಹಾಸಿಗೆ ಸಾಮರ್ಥ್ಯ ಹೊಂದಿದೆ. ಜತೆಗೆ ಮಕ್ಕಳ ವಾರ್ಡ್‌ನಲ್ಲಿ ವೈದ್ಯಕೀಯ ಆಮ್ಲಜನಕ ಸಂಪರ್ಕವುಳ್ಳ 30 ಬೆಡ್‌ಗಳು ಮತ್ತು 12 ಸಾಮಾನ್ಯ ಬೆಡ್‌ಗಳು ಇವೆ.

ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿರುವ ಮಕ್ಕಳ ದೇಹಸ್ಥಿತಿ ಗಂಭೀರವಾಗುತ್ತಿದ್ದು, ಈ ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಬಹುತೇಕ ಬೆಡ್‌ಗಳು ಭರ್ತಿಯಾಗಿದ್ದು, ಗುಣಮುಖರಾದ ಮಕ್ಕಳು ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ಮತ್ತೊಬ್ಬರಿಗೆ ಬೆಡ್ ನೀಡಲಾಗುತ್ತಿದೆ. ಉಸಿರಾಟ ಸಮಸ್ಯೆಯಿರುವ ಮಕ್ಕಳನ್ನು ವೈದ್ಯಕೀಯ ಆಮ್ಲಜನಕ ಸಂಪರ್ಕವುಳ್ಳ ಬೆಡ್‌ಗಳಿಗೆ ದಾಖಲಿಸಲಾಗಿದೆ. ವಾರದಿಂದ ಈಚೆಗೆ ವೈದ್ಯಕೀಯ ಆಮ್ಲಜನಕ ಬಳಕೆ ಪ್ರಮಾಣ ದಿಢೀರ್‌ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT