ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ: ಮೀನಮೇಷ ಬೇಡ-ಸಚಿವ ಕೃಷ್ಣ ಬೈರೇಗೌಡ ಸೂಚನೆ

Last Updated 13 ಮೇ 2019, 13:46 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಕುಡಿಯುವ ನೀರು ಪೂರೈಕೆಯಲ್ಲಿ ಮೀನಮೇಷ ಎಣಿಸದೆ ಜನರಿಗೆ ತೊಂದರೆಯಾಗದಂತೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಸಂಬಂಧ ಇಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ‘ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಅನುದಾನ ಸಮರ್ಪಕವಾಗಿ ಬಳಸಿಕೊಂಡು ಸಮಸ್ಯೆ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.

‘ಈ ಹಿಂದೆ ಖಾಸಗಿ ಟ್ಯಾಂಕರ್‌ ಮಾಲೀಕರು ಸಕಾಲಕ್ಕೆ ಬಿಲ್ ನೀಡದ ಕಾರಣ ಒಂದೇ ಬಾರಿ ಕೋಟಿಗಟ್ಟಲೆ ಹಣ ಪಾವತಿಸಲಾಗಿದೆ. ಅಧಿಕಾರಿಗಳು ಬಿಲ್‌ ತಡೆಹಿಡಿದರೆ ಟ್ಯಾಂಕರ್‌ ಮಾಲೀಕರು ಕಚೇರಿಗೆ ಬಂದು ಕುಳಿತುಕೊಳ್ಳುತ್ತಾರೆ. ಇದಕ್ಕೆ ಅವಕಾಶ ನೀಡದೆ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಬಿಲ್‌ ಪಾವತಿಸಿ’ ಎಂದು ಆದೇಶಿಸಿದರು.

‘ಸಕಾಲಕ್ಕೆ ಬಿಲ್ ಮಂಜೂರು ಮಾಡದಿದ್ದರೆ ನಕಲಿ ಬಿಲ್ ಸೃಷ್ಟಿಗೆ ಅವಕಾಶ ನೀಡಿದಂತಾಗುತ್ತದೆ. ಟ್ಯಾಂಕರ್‌ ಮಾಲೀಕರು ನೀರು ಸೋರಿಕೆ ಮಾಡಿಯೂ ಬಿಲ್ ನೀಡುತ್ತಾರೆ. ಆದ ಕಾರಣ 15 ದಿನಕ್ಕೊಮ್ಮೆ ಬಿಲ್ ಪಾವತಿಸದಿದ್ದರೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳಿಗೆ ತರಾಟೆ: ನೀರಿನ ಬಿಲ್ ಪಾವತಿ ಸಂಬಂಧ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮಾಹಿತಿ ನೀಡಬೇಕೆಂದು ಸಚಿವರು ಸೂಚಿಸಿದರು. ಆದರೆ, ಬಂಗಾರಪೇಟೆ ಮತ್ತು ಶ್ರೀನಿವಾಸಪುರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳು ಮಾಹಿತಿ ನೀಡಲು ತಡಬಡಾಯಿಸಿದರು.

ಇದರಿಂದ ಅಸಮಾಧಾನಗೊಂಡ ಸಚಿವರು, ‘ನೀವು ಹೇಳುವ ಕಟ್ಟು ಕಥೆ ಕೇಳಲು ಇಲ್ಲಿಗೆ ಬಂದಿಲ್ಲ. ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡರು.

‘ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾದರೆ 24 ತಾಸಿನಲ್ಲಿ ಪರಿಹರಿಸಬೇಕು. ನೀರಿನ ಸೌಕರ್ಯಕ್ಕಾಗಿ ಜಿಲ್ಲಾ ಪಂಚಾಯಿತಿಗೆ ₹ 38 ಕೋಟಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ₹ 18 ಕೋಟಿ ನೀಡಲಾಗಿದೆ. ಜತೆಗೆ ಕಾರ್ಯಪಡೆ ಅಡಿ ನಗರಕ್ಕೆ ₹ 4 ಕೋಟಿ ಹಾಗೂ ಗ್ರಾಮೀಣ ಭಾಗಕ್ಕೆ ₹ 7.50 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯ 113 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 74 ಹಳ್ಳಿಗೆ ಟ್ಯಾಂಕರ್ ಮೂಲಕ ಪ್ರತಿನಿತ್ಯ 198 ಲೋಡ್‌ ಹಾಗೂ 39 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

‘ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದವರಿಗೆ 15 ದಿನಕ್ಕೊಮ್ಮೆ ಬಿಲ್ ಪಾವತಿಸಲಾಗುತ್ತಿದೆ. ಹೊಸದಾಗಿ ಕೊಳವೆ ಬಾವಿ ಕೊರೆಸಲು ನೀರಿನ ಇಳುವರಿ ದೊರೆಯುತ್ತಿಲ್ಲ. ಹೀಗಾಗಿ ಆದ್ಯತೆ ಮೇರೆಗೆ ಕೊಳವೆ ಬಾವಿ ಕೊರೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 2018ರ ಅಕ್ಟೋಬರ್ ತಿಂಗಳಿಂದ 379 ಕೊಳವೆ ಬಾವಿ ಕೊರೆಸಿದ್ದು, ಈ ಪೈಕಿ 262ರಲ್ಲಿ ನೀರು ಸಿಕ್ಕಿದೆ. ಈ ವರ್ಷ ಮಾರ್ಚ್ ತಿಂಗಳಿನಿಂದ ಈವರೆಗೆ 213 ಕೊಳವೆ ಬಾವಿ ಕೊರೆಸಿದ್ದು, 136ರಲ್ಲಿ ನೀರು ಸಿಕ್ಕಿದೆ. 102 ಕೊಳವೆ ಬಾವಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲೇ ಪ್ರಥಮ: ‘ನರೇಗಾ ಅಡಿ ಈ ಬಾರಿ 22 ಲಕ್ಷ ಮಾನವ ದಿನ ಸೃಜನೆ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ 40 ಲಕ್ಷ ಮಾನವ ದಿನ ಸೃಜಿಸಲಾಗಿದೆ. ನರೇಗಾ ಅಡಿ ರೈತರಿಗೆ ಕೆಲಸ ನೀಡಲು ಕೆರೆಗಳಲ್ಲಿ ಹೂಳು ತೆಗೆಯುವ ಯೋಜನೆ ಹಾಕಿಕೊಂಡಿದ್ದು, ಪ್ರತಿನಿತ್ಯ ಕೆಲಸ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಒಳ್ಳೆಯ ಸ್ಪಂದನೆ ದೊರೆತಿದೆ. ರೇಷ್ಮೆ ಇಲಾಖೆಯು ಯೋಜನೆ ಕಾರ್ಯಗತಗೊಳಿಸುವಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ’ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯಲ್ಲೂ ಮಾನವ ದಿನ ಹೆಚ್ಚಿಸಲು ಅವಕಾಶವಿತ್ತು. ಆದರೆ, ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಈ ಇಲಾಖೆಗಳ ಅಧಿಕಾರಿಗಳಿಗೆ ಏನು ಸಮಸ್ಯೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳಿಗೆ ಜನರ ಸಮಸ್ಯೆಗೆ ಸ್ಪಂದಿಸುವ ಮನೋಭಾವ ಇರಬೇಕು. ಯಾವ ಕಾರಣಕ್ಕೆ ಸಭೆಗೆ ಬರುತ್ತಿದ್ದೀರಿ ಎಂಬ ಪರಿವೇ ಇಲ್ಲ. ಏನಾದರೂ ಕೇಳಿದರೆ ದೊಡ್ಡ ಭಾಷಣ ಮಾಡುತ್ತೀರಿ. ಇನ್ನು ಮುಂದೆ ಇದೆಲ್ಲಾ ನಡೆಯುವುದಿಲ್ಲ. ಸಾರ್ವಜನಿಕರಿಂದ ದೂರು ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT