ಮಂಗಳವಾರ, ಆಗಸ್ಟ್ 16, 2022
30 °C
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಗತಿಪರ ಸಂಘಟನೆಗಳ ಸದಸ್ಯರ ಪ್ರತಿಭಟನೆ

ವಿಸ್ಟ್ರಾನ್‌: ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ವಿಸ್ಟ್ರಾನ್ ಕಂಪನಿ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಸದಸ್ಯರು ಇಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ವಿಸ್ಟ್ರಾನ್‌ ಕಂಪನಿಯಲ್ಲಿನ ದಾಂದಲೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಸಂಚು ನಡೆದಿದೆ. ಪ್ರಕರಣದಲ್ಲಿ ಎಸ್‌ಎಫ್ಐ ಸಂಘಟನೆಯ ಹೆಸರು ಎಳೆದು ತಂದು ಅನಗತ್ಯ ಗೊಂದಲ ಸೃಷ್ಟಿಸಲಾಗಿದೆ. ಸರ್ಕಾರದ ಕೈಗೊಂಬೆಯಾಗಿರುವ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕಂಪನಿ ಆಡಳಿತ ಮಂಡಳಿ ಕಾರ್ಮಿಕರನ್ನು ನಿರ್ಲಕ್ಷಿಸಿದೆ. ಜತೆಗೆ ಸಕಾಲಕ್ಕೆ ಸಂಬಳ ಕೊಡದೆ ಕಾರ್ಮಿಕ ಕಾನೂನು ಉಲ್ಲಂಘಿಸಿದೆ. ಅಲ್ಲದೇ, ಹೆಚ್ಚಿನ ಅವಧಿವರೆಗೆ ಕೆಲಸ ಮಾಡಿಸಿ ಕಾರ್ಮಿಕರನ್ನು ಶೋಷಿಸಲಾಗಿದೆ. ಕಾರ್ಮಿಕರ ಹಿತ ಕಾಯುವಲ್ಲಿ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ವಿಫಲವಾಗಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ದೂರಿದರು.

‘ದೇಶದಲ್ಲಿ ಸಾಮಾನ್ಯ ನಾಗರೀಕ ಸಮಾಜದ ಉಳಿವಿಗಾಗಿ ಕೆಂಪು, ಹಸಿರು ಮತ್ತು ನೀಲಿ ಬಣ್ಣದ ಬಾವುಟಗಳ ಮೂಲಕ ನ್ಯಾಯ ಕೇಳುತ್ತಿದ್ದೇವೆ. ಬಂಡವಾಳಶಾಹಿ ವ್ಯವಸ್ಥೆಯ ಪರವಾಗಿರುವ ಮೋದಿ ಸರ್ಕಾರ ನಮ್ಮನ್ನು ಭಯೋತ್ಪಾದಕರ ರೀತಿ ನೋಡುತ್ತಿದೆ. ಹೋರಾಟಗಾರರನ್ನು ಮೇಲೆ ಸುಳ್ಳು ಆರೋಪ ಮಾಡಿ ಹೋರಾಟದ ಧ್ವನಿ ಅಡಗಿಸುವುದು ಬಿಜೆಪಿಯ ಅಜೆಂಡಾ’ ಎಂದು ಗುಡುಗಿದರು.

‘ವಿಸ್ಟ್ರಾನ್‌ ಕಂಪನಿಗೆ ಭೂಮಿ ಕೊಟ್ಟ ರೈತರ ಮಕ್ಕಳ ಕೆಲಸ ಕಾಯಂ ಮಾಡಿಲ್ಲ. ಕಾರ್ಮಿಕರು ತಪ್ಪು ಮಾಡಿದ್ದಾರೆ ಎಂದು ಅವರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ. ಕಾರ್ಮಿಕರ ಕಾನೂನು ಉಲ್ಲಂಘಿಸಿರುವ ಕಂಪನಿ ವಿರುದ್ಧ ಜಿಲ್ಲಾಡಳಿತ ಈವರೆಗೆ ಕ್ರಮ ಜರುಗಿಸಿಲ್ಲ. ಆದರೆ, ದುಡಿಮೆಯ ಸಂಬಳ ಕೇಳಿದ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾರತಮ್ಯ ಸರಿಯಲ್ಲ: ‘ಕಾರ್ಮಿಕರೇ ಕಾರ್ಖಾನೆಗಳ ಆಧಾರ ಸ್ತಂಭ. ಕಾರ್ಮಿಕರನ್ನು ಕಾಯಂ ನೌಕರರೆಂದು ಪರಿಗಣಿಸದೆ ಮತ್ತು ಅವರಿಗೆ ಮೂಲಸೌಕರ್ಯ ಕಲ್ಪಿಸದೆ ನಿಕೃಷ್ಟವಾಗಿ ನಡೆಸಿಕೊಳ್ಳಲಾಗಿದೆ. ಕಂಪನಿಯಲ್ಲಿನ ಗುತ್ತಿಗೆ ಕಾರ್ಮಿಕರು ಮತ್ತು ಕಾಯಂ ನೌಕರರ ನಡುವೆ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಸರ್ಕಾರ ಬಂಡವಾಳಶಾಹಿಗಳ ಗುಲಾಮರಂತೆ ವರ್ತಿಸುವುದನ್ನು ಬಿಡಬೇಕು. ವಿಸ್ಟ್ರಾನ್‌ ಕಂಪನಿ ಘಟನೆಯ ಸಂಪೂರ್ಣ ಹೊಣೆ ಸರ್ಕಾರವೇ ಹೊರಬೇಕು. ಘಟನೆ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಬೇಕು. ಅಮಾಯಕ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಬಾರದು’ ಎಂದು ಆಗ್ರಹಿಸಿದರು.

ಕಾರ್ಮಿಕರ ಬೆಂಬಲಿಸಿ: ‘ದೇಶದ ಆಸ್ತಿಯಾದ ಕಾರ್ಮಿಕರನ್ನು ಬೆಂಬಲಿಸಬೇಕು. ಕಂಪನಿ ಪುನರಾರಂಭಿಸಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಬಾಕಿ ವೇತನ ನೀಡಬೇಕು. ಕಾರ್ಮಿಕರ ಕಾನೂನು ಉಲ್ಲಂಘಿಸಿರುವ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು. ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ಭೀಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ, ಡಿಎಸ್‌ಎಸ್‌ ಮುಖಂಡ ರಾಜಪ್ಪ, ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಎಸ್‌ಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು