ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಆತ್ಮರಕ್ಷಣೆಗೆ ದಿಟ್ಟತನ ರೂಢಿಸಿಕೊಳ್ಳಿ: ಜಿಲ್ಲಾಧಿಕಾರಿ ಸೆಲ್ವಮಣಿ

ಅಸ್ತಿತ್ವ ಉಳಿಸಿಕೊಳ್ಳಿ: ಜಿಲ್ಲಾಧಿಕಾರಿ ಸೆಲ್ವಮಣಿ ಕಿವಿಮಾತು
Last Updated 23 ಅಕ್ಟೋಬರ್ 2021, 14:51 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರ ಸಾಕಷ್ಟು ಸೌಲಭ್ಯ, ಮೀಸಲಾತಿ ಕಲ್ಪಿಸಿದ್ದರೂ ಮಹಿಳೆಯರು ದೇಶದಲ್ಲಿ ಇಂದಿಗೂ ಹಿಂದುಳಿದಿರುವುದು ವಿಷಾದನೀಯ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ವಿಷಾದಿಸಿದರು.

ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಮಾತನಾಡಿ, ‘ಸರ್ಕಾರ ಮಹಿಳೆಯರಿಗೆ ನಾನಾ ಯೋಜನೆಗಳಡಿ ಸಾಕಷ್ಟು ಸೌಲಭ್ಯ ಕಲ್ಪಿಸಿದೆ. ಶೇ 50ರಷ್ಟು ಮೀಸಲಾತಿ ಸಹ ನೀಡಿದೆ. ಆದರೂ ಮಹಿಳೆಯರು ಹಿಂದುಳಿದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನರು. ಮಹಿಳೆಯರಲ್ಲೂ ಸಾಕಷ್ಟು ಮಂದಿ ಪ್ರತಿಭಾವಂತರಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮದುವೆಯು ಸಂಪ್ರದಾಯದ ಒಂದು ಭಾಗವಷ್ಟೇ. ಆದರೆ, ಸಾಕಷ್ಟು ಹೆಣ್ಣು ಮಕ್ಕಳು ಮದುವೆ ನಂತರ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಲವು ಮಹಿಳೆಯರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಹೆಣ್ಣು ಮಕ್ಕಳು ಕಿತ್ತೂರು ರಾಣಿ ಚೆನ್ನಮ್ಮನಂತಹ ಸಾಧಕಿಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪುರುಷರು ಮಹಿಳೆಯರನ್ನು ಕಡೆಗಣಿಸದೆ ಸಮಾನ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ಚೆನ್ನಮ್ಮ 17ನೇ ಶತಮಾನದಲ್ಲೇ ಕ್ರಾಂತಿಯ ಕಿಡಿ ಹೊತ್ತಿಸಿದ ವೀರ ಮಹಿಳೆ. ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರಿಗೆ ಆದರ್ಶ. ಯುವಕ ಯುವತಿಯರಲ್ಲಿ ದೇಶಭಕ್ತಿ ಮೂಡಬೇಕಿದ್ದು, ಮೌಢ್ಯ ಕಿತ್ತೊಗೆಯಬೇಕು. ಹೆಣ್ಣು ಮಕ್ಕಳು ಚೆನ್ನಮ್ಮನಂತೆ ಆತ್ಮರಕ್ಷಣೆಗೆ ದಿಟ್ಟತನ ರೂಢಿಸಿಕೊಳ್ಳಬೇಕು’ ಎಂದು ಆಶಿಸಿದರು.

ಹೋರಾಟದ ಪ್ರತೀಕ: ‘ಕಿತ್ತೂರು ರಾಣಿ ಚೆನ್ನಮ್ಮ ಹೋರಾಟದ ಪ್ರತೀಕ. ಆಕೆ ಬ್ರಿಟೀಷರು ಜಾರಿಗೆ ತಂದ ದತ್ತು ಪುತ್ರರಿಗೆ ಹಕ್ಕಿಲ್ಲ ಕಾಯಿದೆ ವಿರುದ್ಧ ಹೋರಾಡಿ ದಿಟ್ಟ ಉತ್ತರ ನೀಡಿದ ಧೀರ ಮಹಿಳೆ. ಅಲ್ಲದೇ, ಹೋರಾಟಕ್ಕೆ ಮಾತ್ರ ಸೀಮಿತವಾಗದೆ ಜನರನ್ನು ಅತ್ಯಂತ ಪ್ರೀತಿಯಿಂದ ಕಾಣುವ ಮನೋಭಾವನೆ ಹೊಂದಿದ್ದಳು’ ಎಂದು ಬಣ್ಣಿಸಿದರು.

‘ಚೆನ್ನಮ್ಮ ಪ್ರಥಮವಾಗಿ ಆಯುಧಗಳೊಂದಿಗೆ ಬ್ರಿಟೀಷರ ವಿರುದ್ಧ ಹೋರಾಡಿ ಜಯಭೇರಿ ಬಾರಿಸಿದರು.  ಚೆನ್ನಮ್ಮ ವೀರಮಾತೆ ಜತೆಗೆ ಸ್ವಾಭಿಮಾನಿಯೂ ಆಗಿದ್ದರು. ಕಪ್ಪ ಕಾಣಿಕೆ ಯಾಕೆ ಕೊಡಬೇಕು ಎಂದು ಅಂದಿನ ಬ್ರಿಟೀಷ್ ಕಮೀಷನರ್‌ಗೆ ನೇರ ಪತ್ರ ಬರೆದಿದ್ದರು. ಅವರು ಸ್ವಾತಂತ್ರಕ್ಕಾಗಿ ಹೋರಾಡಿದ್ದಾರೆ ಎಂಬುದಕ್ಕೆ ಈಗಲೂ ದಾಖಲೆಗಳು ಲಭ್ಯವಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT