ಬುಧವಾರ, ಏಪ್ರಿಲ್ 21, 2021
23 °C

ಸಾವಿರ ಶಾಲೆಗೆ ನೀರಿನ ಘಟಕ: ನಾರಾಯಣಸ್ವಾಮಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ 1 ಸಾವಿರ ಸರ್ಕಾರಿ ಶಾಲೆಗಳಿಗೆ ₹ 20 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನೀಡಲಾಗುತ್ತಿದ್ದು, ಈಗಾಗಲೇ 150 ಶಾಲೆಗಳಿಗೆ ಘಟಕ ಮಂಜೂರು ಮಾಡಲಾಗಿದೆ’ ಎಂದು ವಿಧಾನ ಪರಿಷತ್ ಶಾಸಕ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಶನಿವಾರ ನಡೆದ ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ 32 ತಾಲ್ಲೂಕುಗಳಿದ್ದು, ಶಾಸಕರ ನಿಧಿಯ ಹಣ ಸಾಕಾಗುತ್ತಿಲ್ಲ. ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಘಟಕ ಒದಗಿಸುವ ಸಂಕಲ್ಪ ಮಾಡಿದ್ದೇವೆ’ ಎಂದರು.

‘ಈ ಬಾರಿ ಅತ್ಯುತ್ತಮ ವರ್ಗಾವಣೆ ನೀತಿ ಜಾರಿ ಮಾಡಲಾಗಿದ್ದು, ಅರ್ಜಿ ಹಾಕಿರುವ 72 ಸಾವಿರ ಶಿಕ್ಷಕರಲ್ಲಿ 55 ಸಾವಿರ ಮಂದಿಗೆ ವರ್ಗಾವಣೆ ಸಿಗಬೇಕಿತ್ತು. ಆದರೆ, ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ವರ್ಗಾವಣೆ ವಿಳಂಬವಾಗಿದೆ. ತಡೆಯಾಜ್ಞೆ ತೆರವಿಗೆ ಇಲಾಖೆ ಮನವಿ ಮಾಡಿದ್ದು, ಸದ್ಯದಲ್ಲೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಹೊಸ ಶಿಕ್ಷಣ ನೀತಿಗೆ ಪೂರಕವಾಗಿ ಶಿಕ್ಷಕರು ಸಿದ್ಧರಾಗಬೇಕು. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಶಾಸಕರು ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುತ್ತೇವೆ. ರಾಜಕಾರಣ ಇಂದು ಜಾತಿಕಾರಣವಾಗುತ್ತಿದೆ. ರಾಜಕಾರಣಿಗೆ ಎಲ್ಲವನ್ನೂ ಸ್ವೀಕರಿಸುವ ಸಮಚಿತ್ತ ಮನಸ್ಥಿತಿ, ಹೃದಯ ವೈಶಾಲ್ಯತೆ ಇರಬೇಕು. ಸಮಾಜ ರಾಜಕಾರಣಿಗಳ ನಡವಳಿಕೆ ಗಮನಿಸುತ್ತಿರುತ್ತದೆ. ಮತ ನೀಡಿದವರ ಋಣ ಮರೆಯಲಾಗದು’ ಎಂದರು.

ದಾರಿದೀಪ: ‘ವಿಧಾನ ಪರಿಷತ್ ಚುನಾವಣಾ ಯುದ್ಧದಲ್ಲಿ ನಾನು ಅರ್ಜುನನಾಗಿದ್ದೆ ಅಷ್ಟೇ. ವೈ.ಎ.ನಾರಾಯಣಸ್ವಾಮಿ ಅವರು ಕೃಷ್ಣನಾಗಿ ಪಾತ್ರ ನಿರ್ವಹಿಸಿ ನನ್ನನ್ನು ಗೆಲ್ಲಿಸಿದ್ದಾರೆ. ಟಿಕೆಟ್ ಕೊಡಿಸುವುದರಿಂದ ಗೆಲುವು ದಾಖಲಿಸುವವರೆಗೂ ಅವರೇ ನನಗೆ ದಾರಿದೀಪವಾದರು. ಅವರೊಂದಿಗೆ ಕೈಜೋಡಿಸಿ ಮತ ನೀಡಿದ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ’ ಎಂದು ಚಿದಾನಂದ ಎಂ.ಗೌಡ ಭರವಸೆ ನೀಡಿದರು.

‘ಕೋಲಾರ ಜಿಲ್ಲಾ ಕೇಂದ್ರದಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳಿಗೆ ಅಗತ್ಯವಾದ ಸ್ಪರ್ಧಾ ಭವನವನ್ನು ಅರ್ಧ ಎಕರೆ ಜಾಗದಲ್ಲಿ ನಿರ್ಮಿಸುವ ಗುರಿಯಿದೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡುವ ₹ 23 ಸಾವಿರ ಕೋಟಿ ಸಾಲದು. ಅನುದಾನ ದುಪ್ಪಟ್ಟು ಆಗಬೇಕು’ ಎಂದು ಸಲಹೆ ನೀಡಿದರು.

₹ 10 ಲಕ್ಷ ಭರವಸೆ: ‘ಶಿಕ್ಷಕರ ಸಮಸ್ಯೆ ಪರಿಹರಿಸುವಲ್ಲಿ ವೈ.ಎ.ನಾರಾಯಣಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಅವರ ನೌಕರ ಮತ್ತು ಶಿಕ್ಷಕ ಸ್ನೇಹಿಯಾಗಿದ್ದಾರೆ. ಜಿಲ್ಲೆಯ ನೌಕರರನ್ನು ಪ್ರತಿನಿಧಿಸುವ ಸಂಘಕ್ಕೆ ಇರುವ ಭವನ ಸಾಕಾಗುತ್ತಿಲ್ಲ. ಭವನದ ನವೀಕರಣಕ್ಕೆ ಅನುದಾನ ನೀಡಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ವೈ.ಎ.ನಾರಾಯಣಸ್ವಾಮಿ ಹಾಗೂ ಚಿದಾನಂದಗೌಡ ಅವರು ತಲಾ ₹ 10 ಲಕ್ಷ ಕೊಡುವುದಾಗಿ ಭರವಸೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್‌ ಸದಸ್ಯ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಉದಯಕುಮಾರ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್,ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲ ಜಿ.ವಿ.ಕೃಷ್ಣಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌, ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು