ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ ನೀರು ಹರಿಸಿ ತೀರುತ್ತೇವೆ

ಕೆ.ಸಿ ವ್ಯಾಲಿ ಪಂಪ್‌ಹೌಸ್‌ ಉದ್ಘಾಟನೆ ವೇಳೆ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಹೇಳಿಕೆ
Last Updated 8 ಡಿಸೆಂಬರ್ 2018, 12:45 IST
ಅಕ್ಷರ ಗಾತ್ರ

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಗೆ ಅಡ್ಡಗಾಲು ಹಾಕಿದಂತೆ ಕೆಲವರು ಎತ್ತಿನಹೊಳೆ ಯೋಜನೆಗೂಅಡ್ಡಿಪಡಿಸುತ್ತಿದ್ದಾರೆ. ಯಾರು ಏನೇ ಮಾಡಿದರೂ ಮೂರೂವರೆ ವರ್ಷದಲ್ಲಿ ಎತ್ತಿನಹೊಳೆ ನೀರನ್ನು ಜಿಲ್ಲೆಗೆ ಹರಿಸಿಯೇ ತೀರುತ್ತೇವೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಸವಾಲು ಹಾಕಿದರು.

ತಾಲ್ಲೂಕಿನ ನರಸಾಪುರ ಕೆರೆ ಸಮೀಪ ನಿರ್ಮಿಸಿರುವ ಕೆ.ಸಿ ವ್ಯಾಲಿ ಯೋಜನೆಯ 3ನೇ ಎತ್ತುವಳಿ ಪಂಪ್‌ಹೌಸ್‌ಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ‘ಚಿಕ್ಕಬಳ್ಳಾಪುರದ ಆಂಜನೇಯರೆಡ್ಡಿ ಸೇರಿದಂತೆ ಅನೇಕರು ಕೆ.ಸಿ ವ್ಯಾಲಿ ಯೋಜನೆ ವಿರುದ್ಧ ಸಿಡಿದೆದ್ದು, ನನ್ನ ಕಣ್ಣಲ್ಲಿ ನೀರು ತರಿಸಿದ್ದಾರೆ. ಅವರಿಗೆಲ್ಲಾ ದೊಡ್ಡ ನಮಸ್ಕಾರ’ ಎಂದು ಭಾವುಕರಾದರು.

‘ಕೆ.ಸಿ ವ್ಯಾಲಿ ಯೋಜನೆ ಕೊನೆಗೂ ಅನುಷ್ಠಾನ ಆಗಿದೆ. ರೈತರಿಗೆ ತೊಂದರೆ ಮಾಡಿದ ಮಹನೀಯರಿಗೆ ದೇವರು ಒಳ್ಳೆಯದು ಮಾಡಲಿ. ರೈತರಿಗೆ ಹಾಗೂ ಸೈನಿಕರಿಗೆ ತೊಂದರೆ ಮಾಡುವ ವ್ಯಕ್ತಿಗೆ ಸಮಾಜದಲ್ಲಿ ಉಳಿಗಾಲವಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಅಜ್ಜಿಗೆ ಅರಿವೆ ಚಿಂತೆಯಾದರೆ ಬೇರೆಯವರಿಗೆ ಮತ್ತೇನೂ ಚಿಂತೆ. ಆದರೆ, ನನಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಚಿಂತೆ. ಕೆ.ಸಿ ವ್ಯಾಲಿ ನೀರು ಬಂದಿದೆ, ಎತ್ತಿನಹೊಳೆಯ ನೀರು ಬಂದೇ ಬರುತ್ತದೆ, ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ, ನೀಲಗಿರಿ ನಾಶವಾಗುತ್ತಿದೆ, ಜಿಲ್ಲೆಯ ಎಲ್ಲಾ ಕೆರೆಗಳ ಜೀರ್ಣೋದ್ಧಾರ ಆಗಲಿದೆ’ ಎಂದು ಭರವಸೆ ನೀಡಿದರು.

ಋಣದಲ್ಲಿದೆ: ‘ಕೆ.ಸಿ ವ್ಯಾಲಿ ಯೋಜನೆ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದಾಗ ಉತ್ತರ ಪ್ರದೇಶದ ಕೂಲಿ ಕಾರ್ಮಿಕರಿಬ್ಬರು ಮಣ್ಣು ಕುಸಿದು ಮೃತಪಟ್ಟರು. ಇಡೀ ಕಾಮಗಾರಿ ವೇಗವಾಗಿ ನಡೆಯಲು ಕಾರಣರಾದ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್ ಯೋಜನೆ ಪೂರ್ಣಗೊಂಡ ನಂತರ ಹೃದಯಾಘಾತದಿಂದ ಮೃತಪಟ್ಟರು. ಇಡೀ ಜಿಲ್ಲೆ ಈ ಮೂವರ ಕುಟುಂಬಗಳ ಋಣದಲ್ಲಿದೆ’ ಎಂದು ಸ್ಮರಿಸಿದರು.

ವದಂತಿ ನಿಲ್ಲಿಸಿ: ‘ಕೆ.ಸಿ ವ್ಯಾಲಿ ಯೋಜನೆಯ ಆರಂಭದಲ್ಲಿ ಕೆಲ ಮಂದಿಗೆ ವದಂತಿ ಹಬ್ಬಿಸುವುದೇ ಕೆಲಸವಾಗಿತ್ತು. ಈಗ ಜಿಲ್ಲೆಗೆ ನೀರು ಹರಿಯುತ್ತಿದ್ದು, ಯಾವುದೇ ಅನಾಹುತ ಆಗಿಲ್ಲ. ಇನ್ನಾದರೂ ಅವರು ವದಂತಿ ಹಬ್ಬಿಸುವುದನ್ನು ನಿಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಾಕೀತು ಮಾಡಿದರು.

‘ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಯಲುಸೀಮೆ ಜಿಲ್ಲೆಯ ಕೆರೆಗಳಿಗೆ ಹರಿಸಿದರೆ ಅನುಕೂಲವಾಗುತ್ತದೆ ಎಂದು ಐಎಎಸ್‌ ಅಧಿಕಾರಿ ದಿವಂಗತ ಡಿ.ಕೆ.ರವಿ ಕೆ.ಸಿ ವ್ಯಾಲಿ ಯೋಜನೆ ಪರಿಚಯಿಸಿದರು. ಆ ನಂತರ ಜಿಲ್ಲೆಯ ಶಾಸಕರೆಲ್ಲಾ ಒಟ್ಟಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ಯೋಜನೆಗೆ ಅನುಮೋದನೆ ಕೊಡಿಸಿದರು’ ಎಂದರು.

480 ಎಂಎಲ್‌ಡಿ ನೀರು: ‘2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, 7 ಕೆರೆಗಳು ಕೋಡಿ ಹರಿದಿವೆ. ಅವಿಭಜಿತ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ತುಂಬಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಇನ್ನು ಹೆಚ್ಚುವರಿಯಾಗಿ 200 ಕೆರೆಗಳಿಗೆ ನೀರು ಹರಿಸಲು ಚಿಂತಿಸಲಾಗಿದೆ. ಈ ಯೋಜನೆಯಿಂದ 480 ಎಂಎಲ್‌ಡಿ ನೀರು ಲಭ್ಯವಾಗುತ್ತದೆ’ ಎಂದು ವಿವರಿಸಿದರು.

‘ಜಿಲ್ಲೆಯ ಜನ್ನಘಟ್ಟ, ಶಿವಾರಪಟ್ಟಣ, ಹೊಳಲಿ ಕೆರೆಗಳ ಬಳಿ ಪಂಪ್‌ಹೌಸ್‌ ನಿರ್ಮಾಣವಾಗುತ್ತಿವೆ. ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಬೇಕೆಂದು ಆಲೋಚಿಸಿದ್ದೇವೆ. ಮಳೆಗಾಲದಲ್ಲೂ ಯಾವುದೇ ತೊಂದರೆ ಎದುರಾಗದಂತೆ ಮುನ್ನೆಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಸಹಕಾರವಿದೆ: ‘ಯೋಜನೆ ಅನುಷ್ಠಾನಕ್ಕೆ ಎಷ್ಟೆಲ್ಲಾ ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತು. ಯೋಜನೆ ಅನುಷ್ಠಾನಕ್ಕೆ ಎದುರಾದ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಇದರ ಹಿಂದೆ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಜನಪ್ರತಿನಿಧಿಗಳ ಸಹಕಾರವಿದೆ’ ಎಂದು ಹೇಳಿದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ನಸೀರ್‌ ಅಹಮ್ಮದ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ಸಿ.ಎಸ್.ವೆಂಕಟೇಶ್, ಅರುಣ್‌ಪ್ರಸಾದ್, ರೂಪಶ್ರೀ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿ.ಪಂ ಸಿಇಒ ಜಿ.ಜಗದೀಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಜ್ ಸೆಪಟ್, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT