ಭಾನುವಾರ, ಏಪ್ರಿಲ್ 2, 2023
24 °C
ನೊಣ, ಸೊಳ್ಳೆಗಳಿಂದ ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಚರ್ಮಗಂಟು ರೋಗ

ಕೊಪ್ಪಳ | ಒಂಬತ್ತು ದಿನಗಳಲ್ಲಿ 845 ಜಾನುವಾರಿಗೆ ಚರ್ಮಗಂಟು ರೋಗದ ಸೋಂಕು

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಾನುವಾರುಗಳಿಗೆ ಚರ್ಮಗಂಟು ರೋಗದ (ಲಂಪಿ ಸ್ಕಿನ್‌ ಡಿಸೀಜ್‌) ಸೋಂಕು ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿದ್ದು ಒಂಬತ್ತು ದಿನಗಳ ಅವಧಿಯಲ್ಲಿ 845 ಪ್ರಾಣಿಗಳಲ್ಲಿ ಈ ರೋಗ ಪತ್ತೆಯಾಗಿದೆ.

ಸೆಪ್ಟೆಂಬರ್‌ 21ರಂದು ಜಿಲ್ಲೆಯಲ್ಲಿ ಚರ್ಮಗಂಟು ರೋಗದ ಮೊದಲ ಪ್ರಕರಣ ಪತ್ತೆಯಾಗಿತ್ತು. ಗುರುವಾರದ ಅಂತ್ಯಕ್ಕೆ ಕೊಪ್ಪಳ ತಾಲ್ಲೂಕಿನ 51 ಮತ್ತು ಕುಕನೂರು ತಾಲ್ಲೂಕಿನ 11 ಗ್ರಾಮಗಳ ಜಾನುವಾರುಗಳಲ್ಲಿ ಇದು ಕಂಡುಬಂದಿದೆ. ಇದರಲ್ಲಿ 345 ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿವೆ. ಐದು ಜಾನುವಾರುಗಳು ಮೃತಪಟ್ಟಿವೆ.

ಈ ರೋಗ ಸಾಂಕ್ರಾಮಿಕವಾಗಿರುವ ಕಾರಣ ಸೋಂಕು ತಗುಲಿದ ಜಾನುವಾರು ಆರೋಗ್ಯವಂತ ಜಾನುವಾರುವನ್ನು ಸ್ಪರ್ಶಿಸಿದರೂ ಸೋಂಕು ಹರಡುತ್ತಿದೆ.

ಜಾನುವಾರುಗಳಲ್ಲಿ ಅತಿಯಾದ ಜ್ಷರ, ಕಣ್ಣುಗಳಿಂದ ನೀರು ಸೋರುವುದು, ನಿಶ್ಯಕ್ತಿ, ಕಾಲುಗಳಲ್ಲಿ ಬಾವು, ಕುಂಟುವಿಕೆ, ಜಾನುವಾರುಗಳ ಚರ್ಮದ ಮೇಲೆ 2ರಿಂದ 5 ಸೆಂ.ಮೀ.ನಷ್ಟು ಅಗಲವಿರುವ ಗಂಟುಗಳು ಅಥವಾ ಗುಳ್ಳೆಗಳು ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುವುದು ಚರ್ಮಗಂಟು ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗ ಸೊಳ್ಳೆ, ಉಣ್ಣೆ, ನೊಣ, ಕಚ್ಚುವ ಕೀಟಗಳಿಂದ, ಕಲುಷಿತಗೊಂಡ ನೀರು ಮತ್ತು ಆಹಾರದ ಸೇವನೆಯಿಂದ ಹರಡುತ್ತದೆ.

ಇದು ಹೊಸ ಮಾದರಿಯ ರೋಗವಾದ ಕಾರಣ ನಿರ್ದಿಷ್ಟ ಚಿಕಿತ್ಸೆ ಎನ್ನುವುದು ಸದ್ಯಕ್ಕೆ ಇಲ್ಲ. ಜಿಲ್ಲೆಯಲ್ಲಿ ಮೇಲಿಂದ ಮೇಲೆ ಮಳೆಯಾಗುತ್ತಿರುವ ಕಾರಣ ಸೊಳ್ಳೆ ಮತ್ತು ನೊಣಗಳ ಹಾವಳಿ ಹೆಚ್ಚಾಗಿದ್ದು, ಇವುಗಳನ್ನು ಕಡಿಮೆ ಮಾಡಲು ಫಾಗಿಂಗ್‌ ಕಡ್ಡಾಯವಾಗಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. 

ಬಳ್ಳಾರಿಯಲ್ಲಿರುವ ಪ್ರಾದೇಶಿಕ ಪ್ರಾಣಿ ಸಂಶೋಧನಾ ಕೇಂದ್ರ ಮತ್ತು ಅಖಿಲ ಭಾರತ ಮಟ್ಟದ ನಿವೇದಿ ಸಂಸ್ಥೆಯ ವಿಜ್ಞಾನಿಗಳಿಗೆ ಜಿಲ್ಲೆಯ ಜಾನುವಾರುಗಳಲ್ಲಿನ ರೋಗ ಪತ್ತೆಗೆ ಮಾದರಿ ಕಳುಹಿಸಲಾಗಿದೆ. ಸೋಂಕಿತ ಜಾನುವಾರುಗಳಿಗೆ ತಾತ್ಕಾಲಿಕವಾಗಿ ಮೇಕೆ ಸಿಡುಬಿನ ಲಸಿಕೆ ಬಳಸಲು ಸರ್ಕಾರ ಅನುಮತಿ ಕೊಟ್ಟಿದೆ. ಜಿಲ್ಲೆಯಲ್ಲಿ ಸಂಗ್ರಹವಿದ್ದ 3,000 ಲಸಿಕೆಯ ಡೋಸ್‌ಗಳನ್ನು ಈಗಾಗಲೇ ಬಳಕೆ ಮಾಡಲಾಗಿದ್ದು, ಮುಂದಿನ ವಾರ ಇನ್ನಷ್ಟು ಲಸಿಕೆ ಬರುವ ನಿರೀಕ್ಷೆಯಲ್ಲಿ ಇಲ್ಲಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಇದ್ದಾರೆ.

ಚರ್ಮಗಂಟು ರೋಗಕ್ಕೆ ತುತ್ತಾದ ಜಾನುವಾರುಗಳಿಗೆ ಸರಿಯಾಗಿ ಮೇವು ತಿನ್ನಲು ಆಗುವುದಿಲ್ಲ. ಕಾಲುಗಳು ಬಾವು ಬರುವುದರಿಂದ ಮಲಗಲೂ ಆಗುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ನಾಲ್ಕು ಕಡೆ ಪ್ರತಿ ವಾರ ನಡೆಯುತ್ತಿದ್ದ ಜಾನುವಾರು ಸಂತೆಗಳನ್ನು ನಿಷೇಧಿಸಿ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ.

‘ಹಾಲಿನಿಂದ ಅಪಾಯವಿಲ್ಲ’
ಕೊಪ್ಪಳ:
ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಿರುವುದರಿಂದ ಎಮ್ಮೆ ಅಥವಾ ಆಕಳಿನ ಹಾಲು ಕುಡಿದರೆ ಮನುಷ್ಯನಿಗೂ ರೋಗ ಅಂಟುವುದಿಲ್ಲ. ಹಾಲು ಕೆಎಂಎಫ್‌ ಮೂಲಕ ಸಂಪೂರ್ಣವಾಗಿ ಪಾಶ್ಚೀಕರಿಸಿಯೇ ಬರುವುದರಿಂದ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಎಚ್. ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಪ್ರಾಣಿ ಜನ್ಯ ರೋಗವಾಗಿರುವ ಕಾರಣ ಮನುಷ್ಯನಿಗೆ ಹರಡುವುದಿಲ್ಲ. ಎಮ್ಮೆಗಳ ಹಾಲು ಕರುಗಳಿಗೆ ಕುಡಿಸಿದರೆ ಸೋಂಕು ಹರಡುವ ಅಪಾಯವಿರುತ್ತದೆ. ಸ್ವಚ್ಛತೆ ಕಾಯ್ದುಕೊಂಡು ಎಚ್ಚರ ವಹಿಸಿದರೆ ರೋಗ ಬಾರದಂತೆ ತಡೆಯಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು