ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಕಾರಾಗೃಹದಲ್ಲಿ ‘ಪರಿವರ್ತನೆಯ ಪಾಠ’

ನಿಜ ಜೀವನದ ಮುನ್ನಾಭಾಯಿ ಗಾಂಧಿವಾದಿ ಲಕ್ಷ್ಮಣ್‌ ಗೋಲೆ ಪ್ರೇರಣೆಯ ಮಾತು
Published 31 ಜನವರಿ 2024, 5:09 IST
Last Updated 31 ಜನವರಿ 2024, 5:09 IST
ಅಕ್ಷರ ಗಾತ್ರ

ಕೊಪ್ಪಳ: ಬದುಕಿನಲ್ಲಿ ಮಾಡಿದ ಅಪರಾಧ ಚಟುವಟಿಕೆಗಳ ಪರಿಣಾಮವಾಗಿ ಇಲ್ಲಿಯ ಕಾರಾಗೃಹದಲ್ಲಿ ಬಂದಿಯಾಗಿರುವ ಕೈದಿಗಳ ಪಾಲಿಗೆ ಸೋಮವಾರ ’ಪ್ರೇರಣಾದಾಯಕ ದಿನವಾಗಿತ್ತು’. ಮಾಡಿದ ತಪ್ಪಿಗಾಗಿ ಪರಿತಪಿಸುತ್ತ ಜೀವನ ಕಳೆಯುತ್ತಿದ್ದ ಅವರಲ್ಲಿ ಬದಲಾವಣೆಯ ಹೊಸ ಬೆಳಕು ಮೂಡಿಸುವ ಪ್ರಯತ್ನ ನಡೆಯಿತು.

ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಸನ್ಮಾನಿತರಾಗಿ ಬಂದಿದ್ದ ಮುಂಬೈನ ಲಕ್ಷ್ಮಣ ಗೋಲೆ ಕಾರಾಗೃಹದಲ್ಲಿ ಕೈದಿಗಳಿಗೆ ಸ್ಫೂರ್ತಿ ತುಂಬಿದರು. ತಮ್ಮ ಬದುಕಿನಲ್ಲಿ ಮಾಡಿದ ತಪ್ಪುಗಳು, ಅವುಗಳಿಂದ ಕಲಿತ ಪಾಠ, ಬದುಕು ಬದಲಿಸಿಕೊಂಡ ರೀತಿ, ಸಕಾರಾತ್ಮಕ ಬದುಕಿನ ಸಂಕಲ್ಪ ಮಾಡಿದರೆ ಜೀವನದಲ್ಲಿ ಕಹಿ ಮರೆತು ಸಿಹಿ ಕಂಡುಕೊಳ್ಳುವುದು ಹೇಗೆ? ಎನ್ನುವ ವಿಚಾರಗಳನ್ನು ಅವರು ಹಂಚಿಕೊಂಡರು.

ಬದುಕಿನ ಕೆಟ್ಟ ಗಳಿಗೆಯಲ್ಲಿ ನಾನೂ ತಪ್ಪು ಮಾಡಿದವನೇ. ಮಾಡಿದ ತಪ್ಪುಗಳನ್ನು ತಿದ್ದುಕೊಳ್ಳಲು ತೆಗೆದುಕೊಂಡ ಸಮಯವ ಸಾಕಷ್ಟು ಎಂದರು. ಆ ಸಂದರ್ಭದಲ್ಲಿ ಸಮಾಜ ನಮ್ಮನ್ನು ನೋಡುವ ರೀತಿಯ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಬದಲಾವಣೆಗೆ ಗಾಂಧಿ ಮಾರ್ಗವಷ್ಟೇ ಅಲ್ಲ; ನಮ್ಮನ್ನು ನಾವು ಬದಲಿಸಿಕೊಂಡರೆ ಅದೇ ದೊಡ್ಡ ಸಾಧನೆ. ನಮ್ಮ ಬದುಕು ಸುಂದರ ಮಾಡಿಕೊಳ್ಳಲು ನಮ್ಮದೇ ಮಾರ್ಗವನ್ನೂ ಹುಡುಕಿಕೊಳ್ಳಬೇಕು ಎನ್ನುವುದನ್ನು ಮನದಟ್ಟಾಗುವಂತೆ ಹಂಚಿಕೊಂಡರು.   

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ, ಪ್ಯಾನ್ ಇಂಡಿಯಾ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆ ಮತ್ತು ಪುರ್ನವಸತಿ ಅಭಿಯಾನ ಹಾಗೂ ಬಂದಿಗಳಿಗೆ ಮನಃ ಪರಿವರ್ತನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್,  ಕಾರಾಗೃಹದ ಅಧೀಕ್ಷಕ ವಿ.ಡಿ.ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸನ್ಮಾನ: ಬದುಕಿನಲ್ಲಿ ಬದಲಾವಣೆ ಮಾಡಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಲಕ್ಷ್ಮಣ್ ಅವರನ್ನು ಗವಿಮಠದ ಜಾತ್ರೆಯ ಕೈಲಾಸ ಮಂಟಪದಲ್ಲಿ ಸೋಮವಾರ ರಾತ್ರಿ ನಡೆದ ಭಕ್ತ ಹಿತಚಿಂತನಾ ಸಭೆಯಲ್ಲಿ ಸನ್ಮಾನಿಸಲಾಯಿತು.

ಲಕ್ಷ್ಮಣ್‌ ಬದುಕಿನ ಕೆಟ್ಟ ಗಳಿಗೆಯ ಕಥೆಯನ್ನು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳುತ್ತಿದ್ದರೆ; ಪ್ರೇಕ್ಷಕರು ತದೇಕ ಚಿತ್ತದಿಂದ ಆಲಿಸುತ್ತಿದ್ದರು. ಬಳಿಕ ಪರಿವರ್ತನೆಯ ಮಾರ್ಗ ಹಂಚಿಕೊಂಡಾಗ ಚಪ್ಪಾಳೆ ತಟ್ಟಿ ಖುಷಿಪಟ್ಟರು.

ಗವಿಸಿದ್ದೇಶ್ವರ ಸ್ವಾಮೀಜಿ
ಗವಿಸಿದ್ದೇಶ್ವರ ಸ್ವಾಮೀಜಿ

ಬದಲಾಗಬೇಕು ಸಮಾಜಮುಖಿಯಾಗಿ ಬದುಕಬೇಕು ಎನ್ನುವ ಒಂದು ಒಂದು ಸಂಕಲ್ಪವೇ ಸಾಕು. ಎಂಥವರನ್ನಾದರೂ ಉತ್ತಮರನ್ನಾಗಿ ಮಾಡುತ್ತದೆ ಎನ್ನುವುದಕ್ಕೆ ಲಕ್ಷ್ಮಣ್ ಗೋಲೆ ಸಾಕ್ಷಿ.

-ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ

ಯಾರು ಈ ಲಕ್ಷ್ಮಣ ಗೋಲೆ?

ಲಕ್ಷ್ಮಣ್‌ ಗೋಲೆ ಅವರನ್ನು ನಿಜ ಜೀವನದ ಮುನ್ನಾಭಾಯಿ ಎಂದು ಕರೆಯಲಾಗುತ್ತದೆ. ಹಿಂದಿ ಚಲನಚಿತ್ರ ‘ಲಕ್ಷ್ಮಣ್ ಗೋಲ್ ಗೋಲ್’ ಅವರ ಜೀವನ ಕಥೆ ಆಧರಿಸಿದೆ. ಯವ್ವನದಲ್ಲಿ ಮಾಡಿದ ಅಪರಾಧ ಬದುಕಿಗೆ ಕೆಟ್ಟ ಹೆಸರು ತಂದುಕೊಟ್ಟಿತು. ಮುಂಬೈನ್‌ ಡಾನ್‌ಗಳ ಜೊತೆ ನಿಕಟ ಸಂಬಂಧ ಹೊಂದಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರು. ಲಕ್ಷ್ಮಣ್‌ ವಿರುದ್ಧ 19 ಪ್ರಕರಣಗಳು ದಾಖಲಾಗಿದ್ದವು. ಹಲ್ಲೆ ಕೊಲೆಯ ಪ್ರಯುತ್ನ ಸುಲಿಗೆಗಾಗಿ ಜೈಲುವಾಸ ಅನುಭವಿಸಿದರು. ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ನಾಸಿಕ್ ಜೈಲಿನಲ್ಲಿ ಲಕ್ಷ್ಮಣ್‌ ಬಂಧಿತರಾಗಿದ್ದಾಗ ಗಾಂಧಿಯವರ ಆತ್ಮಚರಿತ್ರೆ ‘ದಿ ಸ್ಟೋರಿ ಆಫ್ ಮೈ ಎಕ್ಸ್‌ಪಿರೀಮೆಂಟ್ಸ್ ವಿತ್ ಟ್ರುತ್’ ಓದಿ ಪ್ರಭಾವಿತರಾದರು. ಶಿಕ್ಷೆ ಪೂರ್ಣಗೊಳಿಸಿ ಬದುಕು ಬದಲಿಸಿಕೊಂಡರು. ಗಾಂಧಿಯವರ ತತ್ತ್ವಶಾಸ್ತ್ರವನ್ನು ಓದಿ ಮಾಂಸ ಹಾಗೂ ಮದ್ಯ ಸೇವನೆ ತ್ಯಜಿಸಿದರು.  ಈಗ ಕೈದಿಗಳಾಗಿ ಜೈಲಿನಲ್ಲಿರುವ ಪುನರ್‌ ಬದುಕಿಗೆ ಹಾಗೂ ಮನಪರಿವರ್ತನೆಗಾಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT