ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗನವಾಡಿ ನಿರ್ವಹಣೆಗೆ ‘ಪೋಷಣ ಟ್ರ್ಯಾಕರ್‌’ ಆ್ಯಪ್‌ ವ್ಯವಸ್ಥೆ

ಅಪೌಷ್ಠಿಕತೆ ನಿವಾರಣೆ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರದ ಕ್ರಮ
Published 19 ಜೂನ್ 2024, 15:32 IST
Last Updated 19 ಜೂನ್ 2024, 15:32 IST
ಅಕ್ಷರ ಗಾತ್ರ

ಕುಷ್ಟಗಿ: ‘ಪೋಷಣ ಮೊಬೈಲ್‌ ಟ್ರ್ಯಾಕರ್‌’ ಆ್ಯಪ್‌ ಹೊಂದಿರುವ ಸುಧಾರಿತ ತಂತ್ರಾಂಶ ಮತ್ತು ತಂತ್ರಜ್ಞಾನದ ಮೊಬೈಲ್‌ಗಳನ್ನು ತಾಲ್ಲೂಕಿನ 403 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು 15 ಮೇಲ್ವಿಚಾರಕರಿಗೆ ವಿತರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ.

ಈ ಹಿಂದೆ ನೀಡಲಾಗಿದ್ದ ಹಳೆಯ ಮಾದರಿ ಮೊಬೈಲ್‌ಗಳಲ್ಲಿ ಆ್ಯಪ್‌ ತಂತ್ರಾಂಶ ಹೊಂದಾಣಿಕೆಯಾಗದ ಕಾರಣ ನಿರ್ವಹಣೆಯಲ್ಲಿ ತೊಡಕುಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಬಹಳಷ್ಟು ಅಪಸ್ವರಗಳು ಕೇಳಿ ಬಂದಿದ್ದವು. ಈಗ ಹೊಸ ನಿರ್ವಹಣೆ ಮೊಬೈಲ್‌ಗಳನ್ನು ನೀಡಲಾಗಿದೆ. ಪ್ರತಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಪೋಷಣ ಟ್ರ್ಯಾಕರ್ ಆ್ಯಪ್‌ ಲಾಗಿನ್‌ ಆಗಲು ಪ್ರತ್ಯೇಕ ಪಾಸವರ್ಡ್ ನಿಡಲಾಗಿದೆ.

ನಿರ್ವಹಣೆ ಹೀಗಿದೆ: ಸ್ಮಾರ್ಟ್ ಫೋನ್ ಮೊಬೈಲ್‌ ಆ್ಯಪ್‌ ಬಳಕೆ ಕಡ್ಡಾಯವಾಗಿದ್ದು ಅಂಗನವಾಡಿ ಕಚೇರಿ ಅವಧಿಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಕಾರ್ಯಕರ್ತೆ ಆ್ಯಪ್‌ ಮೂಲಕ ಲಾಗಿನ್‌ ಆಗಬೇಕು. ಒಂದೊಮ್ಮೆ ಲಾಗಿನ್‌ ಆಗದಿದ್ದರೆ ಕೇಂದ್ರ ಬಾಗಿಲು ಮುಚ್ಚಿದೆ ಎಂದೇ ಅರ್ಥ ಅದಕ್ಕೆ ಮೇಲಿನ ಅಧಿಕಾರಿಗಳು ಕಾರ್ಯಕರ್ತೆಯರಿಂದ ಕಾರಣ ಕೇಳಲೂಬಹುದು.

ಪೋಷಣ ಟ್ರ್ಯಾಕರ್ ಆ್ಯಪ್‌ನಲ್ಲಿ ಕೇಂದ್ರಗಳ ದೈನಂದಿನ ಚಟುವಟಿಕೆ, ಗರ್ಭಿಣಿ, ಬಾಣಂತಿ, ಮಕ್ಕಳ ದಾಖಲಾತಿ ಹಾಗೂ ಹಾಜರಾತಿ, ಬೆಳಗಿನ ಅವಧಿಯ ಉಪಹಾರ, ಮಧ್ಯಾಹ್ನದ ಬಿಸಿಯೂಟ, ವೈಯಕ್ತಿಕ ನೈರ್ಮಲ್ಯ ಮತ್ತು ಮನೆಗಳಿಗೆ ಭೇಟಿ ನೀಡಿದ ವಿವರಗಳನ್ನು ನಿತ್ಯವೂ ಅಳವಡಿಸುವುದು ಕಡ್ಡಾಯ.

ಅದೇ ರೀತಿ ಪ್ರತಿ ತಿಂಗಳ ಮೊದಲನೇ ಮತ್ತು 2ನೇ ಶುಕ್ರವಾರ ಸಮುದಾಯ ಆಧಾರಿತ ಚಟುವಟಿಕೆಗಳಾದ ಅನ್ನಪ್ರಾಶನ, ಸೀಮಂತ ಕಾರ್ಯ, ಸುಪೋಷಣಾ ದಿವಸ, ಶಾಲಾ ಪೂರ್ವ ಶಿಕ್ಷಣ ಇತರೆ ಕಾರ್ಯಕ್ರಮಗಳನ್ನು ಫಲನುಭವಿಗಳೊಂದಿಗೆ ನಡೆಸಿದ ಬಗ್ಗೆಯೂ ಅದೇ ದಿನ ಪೋಷಣ ಟ್ರ್ಯಾಕರ್ ಆ್ಯಪ್‌ನಲ್ಲಿ ಅಳವಡಿಸಬೇಕಿದೆ. ನಂತರ ಅಂಗನವಾಡಿ ಮೇಲ್ವಿಚಾರಕರು ಈ ಎಲ್ಲ ಮಾಹಿತಿಯನ್ನು ಪರಿಶೀಲಿಸಿ ಯೋಜನೆಯಲ್ಲಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತೆಯರಿಗೆ ಅಗತ್ಯ ಸಲಹೆ, ಕಟ್ಟುನಿಟ್ಟಿನ ಸೂಚನೆ ನೀಡಲೂ ಅನುಕೂಲವಾಗುತ್ತದೆ’ ಎಂದು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಯಲ್ಲಮ್ಮ ಹಂಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT