ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಬೇಡಿಕೆಗೆ ಸ್ಪಂದಿಸದ ಶಾಸಕರು

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಸಮಾಧಾನ
Last Updated 26 ಜನವರಿ 2022, 11:48 IST
ಅಕ್ಷರ ಗಾತ್ರ

ಕುಷ್ಟಗಿ: ‘ಕಲ್ಯಾಣ ಕರ್ನಾಟಕ ಭಾಗದ ವಿವಿಧ ಪ್ರಕಾರಗಳ ಕಲಾವಿದರ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನಸೆಳೆಯುವಲ್ಲಿ ಈ ಭಾಗದ ಶಾಸಕರು ಪ್ರಯತ್ನಿಸಿಲ್ಲ’ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಆರೋಪಿಸಿದೆ.

ಈ ವಿಷಯದ ಕುರಿತಂತೆ ಈ ಭಾಗದ ಕಲಾವಿದರ ಸಮಸ್ಯೆಗಳು ಮತ್ತು ವಿವಿಧ ರಾಜ್ಯಗಳ ಮಾದರಿಯಲ್ಲಿ ಸರ್ಕಾರದಿಂದ ದೊರೆಯಬೇಕಿರುವ ಸೌಲಭ್ಯಗಳ ಕುರಿತ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಕಳೆದ ಆ.15ರಂದು ಇಲ್ಲಿಯ ಶಾಸಕ ಅಮರೇಗೌಡ ಬಯ್ಯಾಪುರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ 41 ಶಾಸಕರಿಗೆ ಸಲ್ಲಿಸಲಾಗಿತ್ತು. ಆದರೆ ತಮ್ಮ ಸಮಸ್ಯೆಯ ಬಗ್ಗೆ ಒಬ್ಬ ಶಾಸಕರೂ ದನಿ ಎತ್ತಿಲ್ಲ ಎಂದು ಒಕ್ಕೂಟದ ಪರವಾಗಿ ಬುಧವಾರ ಇಲ್ಲಿ ಪುನಃ ಶಾಸಕ ಅಮರೇಗೌಡ ಬಯ್ಯಾಪುರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗಣರಾಜ್ಯೋತ್ಸವ ವೇದಿಕೆಯಲ್ಲಿ ಮಾತನಾಡಿದ ಒಕ್ಕೂಟದ ಉಪಾಧ್ಯಕ್ಷ ಶರಣಪ್ಪ ವಡಗೇರಿ,‘ಕಲ್ಯಾಣ ಕರ್ನಾಟಕ ಭಾಗದ ಶಾಸಕರು ತಮ್ಮ ಬೇಡಿಕೆಗೆ ಸ್ಪಂದಿಸಿಲ್ಲ’ ಎಂದು ಶಾಸಕ ಬಯ್ಯಾಪುರ ಸಮ್ಮುಖದಲ್ಲಿಯೇ ತಮ್ಮ ಅತೃಪ್ತಿ ಹೊರಹಾಕಿದರು.

ಕೊಪ್ಪಳದಲ್ಲಿ ಡಾ.ಸಿದ್ದಯ್ಯ ಪುರಾಣಿಕ ಹೆಸರಿನಲ್ಲಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಧಕ ಕಲಾವಿದರ ಹೆಸರಿನಲ್ಲಿ ಟ್ರಸ್ಟ್‌, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಹಾಗೂ ಹೆಸರಾಂತ ತತ್ವಪದಕಾರ ಕಡಕೋಳ ಮಡಿವಾಳಪ್ಪ ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಬೇಕು. ಕಲಾವಿದರಿಗೆ ಸರ್ಕಾರ ಗುರುತಿನ ಚೀಟಿ ನೀಡಬೇಕು. ತೆಲಂಗಾಣದ ಮಾದರಿಯಲ್ಲಿ ಕಲಾವಿದರಿಗೆ ಪ್ರಶಸ್ತಿ ವಿತರಣೆ ಹಾಗೂ ₹10 ಸಾವಿರ ಮಾಸಾಶನ ನೀಡಬೇಕು ಮತ್ತು ನಿಗದಿತ ವಯೋಮಿತಿಯನ್ನು 58 ರಿಂದ 50ಕ್ಕೆ ಇಳಿಸುವುದು, ಬಸ್‌ಪಾಸ್‌, ವಿಮೆ ಯೋಜನೆ ಸೇರಿದಂತೆ ಅನೇಕ ಪ್ರಮುಖ ಬೇಡಿಕೆಗಳು ಮನವಿಯಲ್ಲಿದ್ದವು.

ಮನವಿ ಸ್ವೀಕರಿಸಿದ ಶಾಸಕ ಬಯ್ಯಾಪುರ ಈ ಕುರಿತು ಸರ್ಕಾರದ ಮಟ್ಟದಲ್ಲಿ ಗಮನೆಸೆಳೆಯುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಾನಪದ ಅಕಾಡೆಮಿ ಸದಸ್ಯ ಲಿಂಗದಳ್ಳಿ ಚಂದ್ರಶೇಖರ, ಕಲಾವಿದರಾದ ಎಸ್.ಎಸ್. ಹಿರೇಮಠ, ದೇವೇಂದ್ರಪ್ಪ ಕಮ್ಮಾರ, ಶುಕಮುನಿ ಗಡಿಗಿ, ವೆಂಕಟೇಶ ಹೊಸಮನಿ, ಗ್ಯಾನಪ್ಪ ತಳವಾರ, ಲಲಿತಮ್ಮ ಹಿರೇಮಠ, ಸಿದ್ದಪ್ಪ ಕಲಾಲಬಂಡಿ, ಕಳಕಪ್ಪ ಗೊಂಗಡಶೆಟ್ಟರ ಹಾಗೂ ಚನ್ನಪ್ಪ ಭಾವಿಮನಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT