ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ಬಳಕೆಯಾಗದ ಬಾಲ ಭವನ ಕಟ್ಟಡ

ನಿರುಪಯುಕ್ತವಾದ ಕಟ್ಟಡ: ಸಂಬಂಧಿಸಿದ ಇಲಾಖೆಗೆ ಹಸ್ತಾಂತರವಿಲ್ಲ
Published 13 ಮೇ 2024, 4:51 IST
Last Updated 13 ಮೇ 2024, 4:51 IST
ಅಕ್ಷರ ಗಾತ್ರ

ಕುಕನೂರು: ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಲು ಸಂಗೀತ, ನೃತ್ಯ ,ಚಿತ್ರಕಲೆ, ಕಂಪ್ಯೂಟರ್ ಜ್ಞಾನ, ವಿಜ್ಞಾನ ಸೇರಿದಂತೆ ಪಠ್ಯೇತರ ಚಟುವಟಿಕೆಗಳನ್ನು ಬೆಳೆಸಿಕೊಳ್ಳಲು ಬಳಕೆಯಾಗಬೇಕಾದ ಬಾಲ ಭವನ ಕಟ್ಟಡ 7 ವರ್ಷಗಳಿಂದ ನಿರುಪಯುಕ್ತವಾಗಿದೆ.

ಪಟ್ಟಣದ 18ನೇ ವಾರ್ಡಿನ ಸಂಗೊಳ್ಳಿ ರಾಯಣ್ಣ ನಗರದಲ್ಲಿ 2017-18 ನೇ ಸಾಲಿನ ಖನಿಜ ಪ್ರತಿಷ್ಠಾನ ನಿಧಿ ಯೋಜನೆ ಅಡಿಯಲ್ಲಿ ₹1 ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡ ಅಂದಿನಿಂದ ಇಂದಿನವರೆಗೂ ಬಳಕೆಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಗಿ ಉಳಿದಿರುವುದು ಜನಪ್ರತಿನಿಧಿಗಳ ಬೇಜಾಬ್ದಾರಿತನಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಬೇಸಿಗೆ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆರರಿಂದ ಹದಿನಾರು ವರ್ಷ ವಯಸ್ಸಿನ ಮಕ್ಕಳಿಗೆ ವಿಶೇಷ ತರಬೇತಿ ಶಿಬಿರಗಳಾದ ಸಂಗೀತ, ನೃತ್ಯ ,ಚಿತ್ರಕಲೆ, ಕಂಪ್ಯೂಟರ್ ಜ್ಞಾನ, ವಿಜ್ಞಾನ, ಒಳ ಆಟಗಳು, ಮಕ್ಕಳ ಮನರಂಜನಾ ಕಾರ್ಯಕ್ರಮಗಳು ಸೇರಿದಂತೆ ಅಂಗನವಾಡಿಯ ಆಶಾ ಕಾರ್ಯಕರ್ತೆಯರಿಗೆ ಸಭೆ ಮತ್ತು ಸಮಾರಂಭಗಳನ್ನು ಆಯೋಜಿಸಲು ಹಾಗೂ ಚಿಕ್ಕ ಮಕ್ಕಳ ಬೌದ್ಧಿಕ ಬೆಳವಣಿಗೆ ಆಗಲಿ ಎಂಬ ಉದ್ದೇಶದೊಂದಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಕಟ್ಟಡಗಳನ್ನೇನೋ ನಿರ್ಮಿಸುತ್ತಿದೆ. ಆದರೆ ಅದರ ಉದ್ದೇಶ ಸಾಕಾರಗೊಳ್ಳದೆ ಬಾಲ ಭವನದ ಕಟ್ಟಡ ಬಳಕೆ ಇಲ್ಲದೆ ಕಟ್ಟಡಕ್ಕೆ ಬೀಗ ಜಡಿದಿರುವುದು ವಿಪರ್ಯಾಸ.

ನೂತನ ತಾಲ್ಲೂಕು ಕೇಂದ್ರವಾಗಿರುವುದರಿಂದ ಸರ್ಕಾರಿ ಕಚೇರಿಗಳಿಗೆ ಕಟ್ಟಡಗಳ ಕೊರತೆ ಉಂಟಾಗುತ್ತಿದೆ. ತಹಶೀಲ್ದಾರ್ ಕಚೇರಿಯೇ ತಾತ್ಕಾಲಿಕವಾಗಿ ಸಮುದಾಯ ಭವನದ ಕಟ್ಟಡಗಳಲ್ಲಿ ನಡೆಯುತ್ತಿವೆ. ಆದರೆ ಇಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾದರೂ ವರ್ಷಗಳಿಂದ ಬಳಕೆಯಾಗದೆ ಉಳಿದಿದೆ.

ಈಗಿನ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಅವರ ಹಿಂದಿನ ಶಾಸಕತ್ವದ ಅವಧಿಯಲ್ಲಿ ಮಂಜೂರಾಗಿ  ಈ ಕಟ್ಟಡ ನಿರ್ಮಾಣವಾಗಿದೆ. ಪ್ರಸ್ತುತ ಶಾಸಕರೂ ಆಗಿರುವ ರಾಯರಡ್ಡಿ ಅವರು ಇತ್ತ ಕಡೆ ಗಮನಹರಿಸಿ ಸಂಬಂಧಿಸಿದ ಇಲಾಖೆಯವರಿಗೆ ಹಸ್ತಾಂತರಿಸಿ, ಸುಸಜ್ಜಿತ ಕಟ್ಟಡವನ್ನು ಸದುದ್ದೇಶಕ್ಕೆ ಬಳಕೆಯಾಗುವಂತೆ ಕ್ರಮ ವಹಿಸಲಿ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

ಕಟ್ಟಡವನ್ನು ನಮಗೆ ಹಸ್ತಾಂತರ ಮಾಡುತ್ತೇವೆ ಎಂದು ಕೆಆರ್‌ಡಿಎಲ್ ಅಧಿಕಾರಿ ತಿಳಿಸಿದ್ದಾರೆ. ಬಾಲ ಭವನ ಕಟ್ಟಡ ನಮಗೆ ಹಸ್ತಾಂತರವಾದರೆ ಬೇಸಿಗೆ ಸಮಯದಲ್ಲಿ ಮಕ್ಕಳಿಗೆ ವಿಶೇಷ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು.

–ಬೆಟದಪ್ಪ ಮಾಳೆಕೊಪ್ಪ ತಾಲ್ಲೂಕು ಸಿಡಿಪಿಒ

ಕಟ್ಟಡಕ್ಕೆ ಎರಡನೇ ಅಂತಸ್ತಿಗೆ ಅನುದಾನವನ್ನು ನೀಡುತ್ತೇನೆ ಎಂದು ಶಾಸಕರು ಹೇಳಿದ್ದರು. ಹಾಗಾಗಿ ಕಟ್ಟಡದ ಹಸ್ತಾಂತರ ತಡವಾಗಿದೆ. ಸದ್ಯದಲ್ಲೇ ಬಾಲ ಭವನ ಕಟ್ಟಡವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯವರಿಗೆ ಹಸ್ತಾಂತರಿಸಲಾಗುವುದು

ಎಂ. ಚಿಂಚೂಳ್ಳಿಕರ್ ಕೆಆರ್‌ಡಿಎಲ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT