ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಆಧರಿಸಿ ಪರಿಹಾರ ನೀಡಲು ಆಗ್ರಹ

Last Updated 3 ಜೂನ್ 2020, 13:39 IST
ಅಕ್ಷರ ಗಾತ್ರ

ಹನುಮಸಾಗರ (ಕೊಪ್ಪಳ): ‘ಕೃಷಿ ಇಲಾಖೆ ನಡೆಸಿದ ತರಕಾರಿ ಬೆಳೆ ಹಾನಿ ಸಮೀಕ್ಷೆಯಲ್ಲಿ ಅರ್ಹ ರೈತರಿಗೆ ತೊಂದರೆಯಾಗಿದ್ದು, ಸಮೀಕ್ಷೆಯ ಬದಲು ಸದ್ಯ ಬೆಳೆ ಆಧರಿಸಿ ಪರಿಹಾರ ನೀಡಬೇಕು‘ ಎಂದು ರೈತ ಮುಖಂಡ ಮಲ್ಲಿಕಾರ್ಜುನ ದೋಟಿಹಾಳ ಹಾಗೂ ರೈತ ಬಾಳಪ್ಪ ಆದಾಪೂರ ಬುಧವಾರ ಒತ್ತಾಯಿಸಿದ್ದಾರೆ.

ಫಲಾನುಭವಿಗಳ ಆಯ್ಕೆಯನ್ನು 2019-20ನೇ ಸಾಲಿನಲ್ಲಿ ಕೈಗೊಳ್ಳಲಾದ ಹಿಂಗಾರು, ಮುಂಗಾರು ಬೆಳೆ ಸಮೀಕ್ಷೆಯ ವರದಿಯಂತೆ ಆಯ್ಕೆ ಮಾಡಲಾಗಿದೆ. ಬಾಳೆ, ಪಪ್ಪಾಯ, ದ್ರಾಕ್ಷಿ, ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ ಹಾಗೂ ಟೊಮೆಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಗುಂಬಳ, ಬೂದುಗುಂಬಳ, ಕ್ಯಾರೇಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ ಬೆಳೆಯ ಬೆಳೆಗಾರರಿಗೆ ಸರ್ಕಾರದಿಂದ ಗರಿಷ್ಠ ಪ್ರತಿ ಹೆಕ್ಟೇರ್ ತರಕಾರಿ ಬೆಳೆಗೆ ₹ 15,000 ಪರಿಹಾರಧನ ಹಾಗೂ ಕನಿಷ್ಟ ₹ 2,000 ಪರಿಹಾರ ಧನ ನೀಡಲಾಗುತ್ತಿದೆ. ಮಾರ್ಚ್ ನಾಲ್ಕನೇ ವಾರದ ನಂತರ ನಾಟಿ ಮಾಡಿರುವ ತರಕಾರಿ ಬೆಳೆಗಾರರು ಈ ಯೋಜನೆಯಡಿ ಪರಿಹಾರ ಪಡೆಯಲು ಅರ್ಹರಿರುವುದಿಲ್ಲ ಎಂದು ಸರ್ಕಾರದ ಆದೇಶದಲ್ಲಿ ಇದೆ.

‘ಸಮೀಕ್ಷೆಯ ಸಮಯದಲ್ಲಿ ನಾವು ಬೇರೆ ಬೆಳೆಗಳನ್ನು ಹಾಕಿದ್ದೆವು. ಆದರೆ ಜನವರಿಯಲ್ಲಿ ತರಕಾರಿ ಬೆಳೆಗಳನ್ನು ಹಾಕಿ ಮಾರಾಟವಾಗದೆ ತೊಂದರೆಗೆ ಒಳಗಾಗಿದ್ದೆವು. ಕೃಷಿ ಸಮೀಕ್ಷೆಯಲ್ಲಿ ತರಕಾರಿ ಬೆಳೆಗಳನ್ನು ದಾಖಲಿಸದ ಕಾರಣ ನಾವು ಸರ್ಕಾರದ ನೆರವಿನಿಂದ ವಂಚಿತವಾಗುವಂತಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ವತಃ ಸಮೀಕ್ಷೆ ಮಾಡಿ ನಮಗೆ ನ್ಯಾಯ ಒದಗಿಸಬೇಕು' ಎಂದು ರೈತ ಬಾಳಪ್ಪ ಆದಾಪೂರ ಮನವಿ ಮಾಡಿದರು.

‘ಸರ್ಕಾರದ ಆದೇಶದಂತೆ ಕೃಷಿ ಸಮೀಕ್ಷೆ ಆಧರಿಸಿ ಪರಿಹಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ತರಕಾರಿ ಬೆಳೆದ ಬೆಳೆಗಾರರು ಯಾವುದೇ ಅರ್ಜಿ ಕೊಡುವ ಅಗತ್ಯತೆಯೂ ಇಲ್ಲ. ಸಮೀಕ್ಷೆಯಲ್ಲಿ ಎಲ್ಲ ಮಾಹಿತಿ ಇದೆ. ಹೀಗಿದ್ದೂ ರೈತರು ಈಗ ಅರ್ಜಿ ತೆಗೆದುಕೊಂಡು ಕಚೇರಿಗೆ ಬರುತ್ತಿದ್ದಾರೆ. ನಾವು ತಿದ್ದುಪಡಿ ಮಾಡುವಲ್ಲಿ ನಿಸ್ಸಾಯಕರು. ಅಲ್ಲದೆ ಫೆಬ್ರುವರಿಯಲ್ಲಿ ಮಾಡಿದ ಸಮೀಕ್ಷೆಯ ಕಾಲದಲ್ಲಿ ತಮ್ಮ ಬೆಳೆ ಬದಲಾಗಿದ್ದರೆ 15 ದಿನದೊಳಗಾಗಿ ತಿದ್ದುಪಡಿ ಮಾಡಿಸಲು ರೈತರಿಗೆ ಸಾಧ್ಯವಿತ್ತು‘ ಎಂದು ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ. ರಮೇಶ ಹೇಳಿದರು.

ಕಲ್ಲಂಗಡಿ ಹಾಗೂ ಕರಬೂಜು ಬೆಳೆಗಳನ್ನು ಫೆಬ್ರುವರಿಯಲ್ಲಿ ನಾಟಿ ಮಾಡಿರುವುದರಿಂದ ಅಂತಹ ರೈತರ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡಿ ಪಡೆಯುತ್ತಿದ್ದೇವೆ ಎಂದು ಹೇಳಿದರು.

ರೈತರು ಮುಂದಿನ ಬೆಳೆಗಳನ್ನಾದರೂ ಸರಿಯಾದ ಮಾಹಿತಿಯೊಂದಿಗೆ ಬೆಳೆ ಸಮೀಕ್ಷೆಯಲ್ಲಿ ನೋಂದಾಯಿಸಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT