ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಡಿಡಿ ಸೃಷ್ಟಿ: ಬ್ಯಾಂಕ್‌ಗೆ ₹2 ಕೋಟಿ ವಂಚನೆ

Published 7 ಸೆಪ್ಟೆಂಬರ್ 2023, 18:51 IST
Last Updated 7 ಸೆಪ್ಟೆಂಬರ್ 2023, 18:51 IST
ಅಕ್ಷರ ಗಾತ್ರ

ಕಾರಟಗಿ: ನಕಲಿ ಡಿಮ್ಯಾಂಡ್‌ ಡ್ರಾಫ್ಟ್‌ (ಡಿ.ಡಿ) ಸೃಷ್ಟಿಸಿ ಪಟ್ಟಣದ ಐಸಿಐಸಿಐ ಬ್ಯಾಂಕ್‌ ಶಾಖೆಗೆ ₹2 ಕೋಟಿ ವಂಚಿಸಿರುವ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರಿನ ಉರಕುಂದಿ ಈರಣ್ಣ ಸ್ವಾಮಿ ಟ್ರೇಡರ್ಸ್‌ ಮಾಲೀಕ ವೀರೇಶ ಮತ್ತು ಇತರರು ಸೇರಿ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ವಿಜಯಕೃಷ್ಣ ಕಾರಟಗಿ ಅವರು ದೂರು ನೀಡಿದ್ದಾರೆ.

ವೀರೇಶ ಅವರು, ಪಟ್ಟಣದ ಐಸಿಐಸಿಐ ಬ್ಯಾಂಕ್‌ಗೆ ಸೆ. 4ರಂದು ಬಂದು, ತಲಾ ₹1 ಕೋಟಿಯ ಎರಡು ಡಿ.ಡಿ.ಗಳನ್ನು (ಡಿಡಿ ನಂ.500200, 500201) ಕೊಟ್ಟು ತಮ್ಮ ಖಾತೆಗೆ ಜಮಾ ಮಾಡುವಂತೆ ಕೊಟ್ಟಿದ್ದರು. ಮಹಾರಾಷ್ಟ್ರದ ಚಾರ್ಕೋಪ್‌ ಶಾಖೆಯಿಂದ ಮೆ. ಮೀಡಿಯಾ ಎಂಟರ್‌ಟೈನ್‌ಮೆಂಟ್‌ನಿಂದ ಪಡೆದ ಡಿ.ಡಿಗಳನ್ನು ನೀಡಿದ್ದಾರೆ.

ಸೆ.5ರಂದು ಡಿ.ಡಿಗಳನ್ನು ಬ್ಯಾಂಕ್‌ನ ನಿಯಮಾನುಸಾರ ಪರಿಶೀಲಿಸಿ, ಅವರ ಖಾತೆಗೆ ಹಣವನ್ನು ಜಮಾ ಮಾಡಲಾಯಿತು.

ಅದೇ ದಿನ ಮೆ. ಮೀಡಿಯಾ ಎಂಟರ್‌ಟೈನ್‌ಮೆಂಟ್‌ನ ಪ್ರತಿನಿಧಿ ಚಾರ್ಕೋಪ್‌ ಶಾಖೆಗೆ ಭೇಟಿ ನೀಡಿ, ಡಿ.ಡಿ.ಗಳನ್ನು ರದ್ದುಗೊಳಿಸಬೇಕು. ಮೂಲ ಡಿಡಿಗಳು ತಮ್ಮ ಶಾಖೆಯಲ್ಲಿಯೇ ಇವೆ. ಹೀಗಾಗಿ ಬ್ಯಾಂಕ್‌ ಖಾತೆಯ ಮೊತ್ತ ಹಿಂದಿರುಗಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನು ಗಮನಿಸಿದಾಗ, ವೀರೇಶ ಮತ್ತು ಇತರರು ಸೇರಿ ಬ್ಯಾಂಕ್‌ಗೆ ವಂಚಿಸಲೆಂದೇ ನಕಲಿ ಡಿಡಿಗಳನ್ನು ನೈಜ ಡಿಡಿಗಳಂತೆ ಸೃಷ್ಟಿಸಿ ಹಣ ಜಮಾ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕಿನ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ. 

‘ಇದೊಂದು ದೊಡ್ಡ ವಂಚನೆ ಪ್ರಕರಣವಾಗಿದೆ. ಆರೋಪಿಯು, ಡಿಡಿ ಹಣ ತನ್ನ ಖಾತೆಗೆ ಜಮಾ ಆಗುತ್ತಿದ್ದಂತೆಯೇ ಇತರರಿಗೆ ಚೆಕ್‌ ನೀಡಿ ಹಣ ಪಡೆದಿರುವುದು ವರದಿಯಾಗಿದೆ. ಸಮಗ್ರ ತನಿಖೆಯಿಂದ ನಿಜ ಏನು ಎಂಬುದು ಹೊರ ಬರಲಿದೆ’ ಎಂದು ಕಾರಟಗಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಿದ್ರಾಮಯ್ಯ ಬಿ.ಎಂ. ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT