ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಪಿಗಳನ್ನು ಬಂಧಿಸಿಯೇ ಪರಮೇಶ್ವರ್‌ ಗ್ರಾಮಕ್ಕೆ ಬರಲಿ: ನಾರಾಯಣಸ್ವಾಮಿ ಆಗ್ರಹ

Published 6 ಆಗಸ್ಟ್ 2024, 11:29 IST
Last Updated 6 ಆಗಸ್ಟ್ 2024, 11:29 IST
ಅಕ್ಷರ ಗಾತ್ರ

ಕಾರಟಗಿ: ‘ಯಾದಗಿರಿಯಲ್ಲಿ ಶಂಕಾಸ್ಪದ ರೀತಿಯಲ್ಲಿ ಪಿಎಸ್‌ಐ ಪರಶುರಾಮ್‌ ಛಲವಾದಿ ಮೃತಪಟ್ಟಿದ್ದು, ಈ ಘಟನೆಯ ಆರೋಪಿಗಳನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ. ಇನ್ನೊಂದೆಡೆ ಗೃಹಸಚಿವ ಜಿ. ಪರಮೇಶ್ವರ್‌ ಆ ಕುಟುಂಬದವರಿಗೆ ಸಾಂತ್ವನ ಹೇಳಲು ಬುಧವಾರ ಬರುತ್ತಿದ್ದಾರೆ. ನಿಜವಾಗಿಯೂ ಆ ಕುಟುಂಬಕ್ಕೆ ನ್ಯಾಯ ಕೊಡಿಸುವ ಕಾಳಜಿ ಇದ್ದರೆ ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಬರಲಿ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿರುವ ಪರಶುರಾಮ್‌ ಮನೆಗೆ ಮಂಗಳವಾರ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಐದನೇ ದಿನದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ಪರಶುರಾಮ ಸದಾ ನನ್ನ ಸಂಪರ್ಕದಲ್ಲಿದ್ದ, ಯಾವ ಕಾರಣಕ್ಕೆ ಮೃತಪಟ್ಟಿದ್ದಾನೆ ಎನ್ನುವುದು ಬಹಿರಂಗವಾಗಬೇಕು, ಆತನ ಸಾವಿಗೆ ನ್ಯಾಯ ಸಿಗಬೇಕು’ ಎಂದು ಒತ್ತಾಯಿಸಿದರು.

‘ಕೂಲಿ ಕೆಲಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಎಂಟು ಸರ್ಕಾರಿ ನೌಕರಿಗಳನ್ನು ಪಡೆದುಕೊಂಡಿದ್ದ. ಐಎಎಸ್‌ ಅಧಿಕಾರಿಯಾಗುವ ಆತನ ಕನಸಿಗೆ ಈಗಿನ ಸಮಾಜ ಅವಕಾಶವೇ ಕೊಡಲಿಲ್ಲ. ಇದು ಸಮಾಜವೇ ತಲೆ ತಗ್ಗಿಸುವ ಘಟನೆಯಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಪರಿಶಿಷ್ಟ ಸಮುದಾಯದ ಅಧಿಕಾರಿಗಳ ಮಾರಣ ಹೋಮ ನಡೆಯುತ್ತಿದೆ. ಯಾದಗಿರಿಯಲ್ಲಿ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ, ಅವರ ಮಗ ಪಂಪನಗೌಡ ದಬ್ಬಾಳಿಕೆ ಮಾಡಿ ಹಣ ಲೂಟಿ ಹೊಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಆರೋಪಿತರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದ್ದರೂ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಗೃಹ ಸಚಿವರು, ಮುಖ್ಯಮಂತ್ರಿ ಏನು ಮಾಡುತ್ತಿದ್ದಾರೆ. ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ? ನಿಮ್ಮೊಂದಿಗೆ ನಾವಿದ್ದೇವೆ ಎಂದು ಸುಳ್ಳು ಭರವಸೆಯನ್ನೂ ಸರ್ಕಾರ ನೀಡುತ್ತಿದೆ. ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಗೃಹಸಚಿವರು ಗ್ರಾಮಕ್ಕೆ ಭೇಟಿ ನೀಡಲಿ’ ಎಂದರು.

’ಭ್ರಷ್ಟಾಚಾರ ಮಾಡುವ ನಾಯಕರಿಗೆ ಎಐಸಿಸಿ ನಾಯಕರು ರಕ್ಷಣೆ ನೀಡುತ್ತಿದ್ದಾರೆ. ನಮ್ಮ ಸಮುದಾಯದ ಹುಡುಗನಿಗೆ ಅನ್ಯಾಯವಾಗಿದ್ದು, ನ್ಯಾಯ ಕೊಡದಿದ್ದರೆ ಹೋರಾಟ ಮಾಡಲಾಗುವುದು. ಮೊದಲು ರಾಜಕಾರಣಿಗಳು ಲಂಚ ಪಡೆಯುವುದನ್ನು ಬಿಡಬೇಕು. ಶಿಫಾರಸು ಪತ್ರಗಳನ್ನು ಕೊಡುವುದು ಬಿಡಲಿ’ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್‌, ಮಾಜಿ ಶಾಸಕ ಬಸವರಾಜ ದಢೇಸೂಗೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT