ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹಾನಿ ಸಮೀಕ್ಷೆ ವೇಗವಾಗಿ ಮುಗಿಸಿ: ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆಹಾನಿ ಪರಿಶೀಲನೆ
Last Updated 22 ನವೆಂಬರ್ 2021, 13:59 IST
ಅಕ್ಷರ ಗಾತ್ರ

ಗಂಗಾವತಿ: ‘ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಭತ್ತದ ಬೆಳೆ ಹಾಗೂ ಮನೆಗಳ ಸಮೀಕ್ಷೆ ಮಾಡಿಸಿ, ಕೂಡಲೇ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ತಿಳಿಸಿದರು.

ತಾಲ್ಲೂಕಿನ ಹನುಮಹಳ್ಳಿ, ಚಿಕ್ಕರಾಂಪುರ, ರಾಂಪುರ ಹಾಗೂ ಮಲ್ಲಾಪುರ ಗ್ರಾಮಗಳಲ್ಲಿ ಬೆಳೆಹಾನಿ ಪರಿಶೀಲಿಸಿ ಮಾತನಾಡಿದರು.

ಈಗಾಗಲೇ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ, ಕೃಷಿ, ತೋಟಗಾರಿಕೆ ಸೇರಿ ಇತರ ಎಲ್ಲ ಇಲಾಖೆಗಳ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆಯಲ್ಲಿ ನಿರತರಾಗಿ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಮೊದಲ ಹಂತದ ಬೆಳೆ ಹಾನಿ ಸಮೀಕ್ಷೆ ನಡೆಸಲಾಗಿದೆ. ಒಟ್ಟು 2757 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದೆ. ಎರಡನೇ ಹಂತದ ಬೆಳೆ ಹಾನಿ ಸಮೀಕ್ಷೆ ನಡೆಸುವ ಗ್ರಾಮ ಲೆಕ್ಕಾಧಿಕಾರಿಗಳು, ಹಾನಿಯಾದ ಯಾವ ಬೆಳೆಯನ್ನು ತಪ್ಪಿಸುವಂತಿಲ್ಲ ಎಂದು ಎಚ್ಚರಿಸಿದರು.

ಬೆಳೆ ಹಾನಿ ಸಮೀಕ್ಷೆ ವೇಳೆಯಲ್ಲಿ ರೈತರು ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸುವ ಜತೆಗೆ ಸಮರ್ಪಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕೋರಿದರು. ಕೆಲ ರೈತರು ಬೆಳೆ ವಿಮೆ ಪಾವತಿ ಮಾಡಲಾಗಿದ್ದು, ಈ ಕುರಿತು ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.

ಸರ್ಕಾರದ ಎನ್‌ಡಿಆರ್‌ಎಫ್‌ ನಿಯಮದಡಿ ಒಂದು ಹೆಕ್ಟೇರ್ ಭತ್ತಕ್ಕೆ ₹13,500, ತೊಗರಿಗೆ ₹6,800, ನವಣೆಗೆ ₹6,800, ಮೆಕ್ಕೆಜೋಳ ₹6,800, ದಾಳಿಂಬೆ, ದ್ರಾಕ್ಷಿ ಬೆಳೆಗೆ ₹18,000, ಮೆಣಸಿನಕಾಯಿ ಬೆಳೆಗೆ ₹13,500 ಪರಿಹಾರ ನೀಡಲಾಗುತ್ತದೆ ಎಂದರು.

ಅದರಂತೆ ಮಳೆಯಿಂದ ಹಾನಿಗೊಳಗಾದ ಮನೆಗಳಿಗೂ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿದ್ದು, ಎ ಗ್ರೇಡ್ ಪ್ರಮಾಣದಲ್ಲಿ ಮನೆ ಹಾನಿಯಾದರೆ ₹5 ಲಕ್ಷ, ಬಿ ಗ್ರೇಡ್ ಮನೆ ಹಾನಿಗೆ ₹1 ಲಕ್ಷ, ಸಿ ಗ್ರೇಡ್ ಮನೆ ಹಾನಿಗೆ ₹50 ಸಾವಿರ ಪರಿಹಾರ ಧನ ನೀಡಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕು ಆಡಳಿತದ ಅಧಿಕಾರಿಗಳು ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ, ಮನೆ ಹಾನಿ ಕುರಿತು ಮಾಹಿತಿ, ಪಡೆದು, ಅತಿ ಶೀಘ್ರವಾಗಿ ವರದಿ ಸಲ್ಲಿಸಬೇಕು. ಈ ತಿಂಗಳ ಕೊನೆಯ ದಿನಾಂಕದ ಒಳಗಾಗಿ ವರದಿ ಸಲ್ಲಿಸಿದರೆ, ಡಿಸೆಂಬರ್ 1 ರಿಂದ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ ಸಿಇಒ ಫೌಜೀಯಾ ತರುನ್ನುಮ್, ತಹಶೀಲ್ದಾರ್ ಯು.ನಾಗರಾಜ, ತಾ‌.ಪಂ. ಇಒ ಡಾ.ಡಿ.ಮೋಹನ್, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಸಿಡಿಪಿಒ ಗಂಗಪ್ಪ, ಬಿಇಒ ಸೋಮಶೇಖರಗೌಡ, ಆನೆಗೊಂದಿ ಪಿಡಿಒ ಕೃಷ್ಣಪ್ಪ, ಸಾಣಪುರ ಪಿಡಿಒ ಬಸವರಾಜಗೌಡ, ಗ್ರಾಮಲೆಕ್ಕಿಗ ಅಮರೇಶ, ಕಂದಾಯ ಇಲಾಖೆಯ ಮಂಜುನಾಥ ಸೇರಿ ಇತರೆ ಅಧಿಕಾರಿಗಳು ಹಾಗೂ ರೈತರು ಇದ್ದರು.

ಕಳೆದ ಬಾರಿ ಇದೆ ತರಹ ಬೆಳೆ ಹಾನಿಯಾಗಿತ್ತು. ಆಗ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಒಬ್ಬರಿಗೆ ಬಂದ್ರೆ, ಇನ್ನೊಬ್ಬರಿಗೆ ಬಂದಿರಲ್ಲ ಎಂದು ರೈತರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT