ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಕೊಳವೆಬಾವಿಗಳಲ್ಲಿ ಹೆಚ್ಚಿದ ನೀರು, ರೈತರಲ್ಲಿ ಭರವಸೆ ತಂದ ಶೇಂಗಾ

ಸ್ಪ್ರಿಂಕ್ಲರ್‌ಗೆ ಹೆಚ್ಚಿದ ಬೇಡಿಕೆ
Last Updated 26 ಜನವರಿ 2022, 3:48 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನಲ್ಲಿ ಈ ಬಾರಿ ಹಿಂಗಾರು ಹಂಗಾಮಿನ ಬೇಸಿಗೆ ಅವಧಿಯಲ್ಲಿ ಬೆಳೆದಿರುವ ಶೇಂಗಾ ಬೆಳೆ ಉತ್ತಮ ರೀತಿಯಲ್ಲಿದ್ದು ರೈತರಲ್ಲಿ ಆಶಾ ಭಾವನೆ ಮೂಡಿಸಿದೆ.

ಶೇಂಗಾ ಬೆಳೆಯನ್ನು ರೈತರು ಮುಖ್ಯವಾಗಿ ಜಾನುವಾರುಗಳಿಗೆ ಉತ್ತಮ ಹೊಟ್ಟು ದೊರೆಯುತ್ತದೆ ಎಂಬ ಕಾರಣಕ್ಕೆ ಬೆಳೆಯುದು ಸಾಮಾನ್ಯ. ಅಲ್ಲದೆ ಒಂದಷ್ಟು ಹಣ ಕೈಗೆ ಬರಲಿ ಎಂಬ ಆಶಯ ಹೊಂದಿರುತ್ತಾರೆ. ಆದರೆ ಜಡಿಮಳೆಯಿಂದಾಗಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ನಡೆಸಲಾಗಿದ್ದ ಗೆಜ್ಜಿಶೇಂಗಾ ಕೈಕೊಟ್ಟಿದ್ದು ಬಳ್ಳಿ ಕೊಳೆತು ಹೊಟ್ಟು ಬರಲಿಲ್ಲಿ ಇಳುವರಿಯಲ್ಲಿಯೂ ಕೈಕೊಟ್ಟಿತು. ಇದರಿಂದ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುವಂತಾಯಿತು ಎಂಬುದು ರೈತರ ಅನುಭವ. ಈಗ ಬೇಸಿಗೆಯಲ್ಲಿ ಬೆಳೆದಿರುವ ಗೆಜ್ಜೆಶೇಂಗಾ ಸದ್ಯ ಉತ್ತಮ ಬೆಳವಣಿಗೆ ಹೊಂದುತ್ತಿದೆ. ಇದೇ ರೀತಿ ಕೊಯಿಲು ಆಗುವವರೆಗೂ ಬೆಳೆ ಗುಣಮಟ್ಟದಿಂದ ಇದ್ದರೆ ಜಾನುವಾರು ಕುರಿ ಮೇಕೆಗಳಿಗೆ ಒಳ್ಳೆಯ ಹೊಟ್ಟು ದೊರಕುವುದರ ಜೊತೆಗೆ ಉತ್ತಮ ಬೆಲೆ ಕೈಗೆಟಕಿದರೆ ಆರ್ಥಿಕ ಅನುಕೂಲ ಆಗುತ್ತದೆ ಎಂದು ಹಿರೇಮನ್ನಾಪುರದ ರೈತ ಬಸನಗೌಡ ಅವರು
ಹೇಳಿದರು.

ಅಂತರ್ಜಲ ಕೊರತೆಯಿಂದಾಗಿ ಕೆಲ ವರ್ಷಗಳ ಹಿಂದೆ ಬಿತ್ತನೆ ಪ್ರದೇಶ ಕಡಿಮೆ ಇತ್ತು ಈ ಬಾರಿ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಹೆಚ್ಚಿದೆ, ಬತ್ತಿದ ಬಾವಿಗಳಲ್ಲಿಯೂ ನೀರು ಬಂದಿದ್ದರಿಂದ ಬೇಸಿಗೆ ಶೇಂಗಾ ಬೆಳೆ ಪ್ರದೇಶ ವಿಸ್ತಾರಗೊಂಡಿದೆ ಎಂದು ತಿಳಿಸಲಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಸುಮಾರು 4 ಸಾವಿರ ಹೆಕ್ಟರ್‌ ಬಿತ್ತನೆಯಾಗಬಹುದು ಎಂಬ ಗುರಿ ಹೊಂದಲಾಗಿತ್ತಾದರೂ ಅಂದಾಜು ಮೂರೂವರೆ ಸಾವಿರ ಹೆಕ್ಟರ್‌ದಲ್ಲಿ ಬಿತ್ತನೆ ನಡೆಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಅವರು
ಹೇಳಿದರು.

ಸ್ಪ್ರಿಂಕ್ಲರ್‌ಗೆ ಬೇಡಿಕೆ: ಈ ಮಧ್ಯೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದಂತೆ ರೈತರು ಸರ್ಕಾರದ ಸಹಾಯಧನದಲ್ಲಿ ದೊರೆಯುವ ತುಂತುರು ನೀರಾವರಿ ಸಲಕರಣೆ (ಸ್ಪ್ರಿಂಕ್ಲರ್)ಗೆ ಹೆಚ್ಚಿನ ಬೇಡಿಕೆ ಸಲ್ಲಿಸಿರುವುದು ಕಂಡುಬಂದಿದೆ. ಸುಮಾರು 3 ಸಾವಿರ ಅರ್ಜಿಗಳು ಬಂದಿದ್ದು ಇಲ್ಲಿಯವರೆಗೆ ಸುಮಾರು 1,200 ರೈತರಿಗೆ ತುಂತುರು ನೀರಾವರಿ ಸಲಕರಣೆಗಳನ್ನು ಒದಗಿಸಲಾಗಿದೆ. ಅನುದಾನ ಬಿಡುಗಡೆಯಾದರೆ ಮುಂದಿನ ವರ್ಷ ಉಳಿದ ರೈತರಿಗೆ ಹಂತ ಹಂತವಾಗಿ ವಿತರಿಸಲಾಗುತ್ತದೆ ಎಂದು ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT