ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಕೋವಿಡ್ ಪರೀಕ್ಷೆ ಹೆಚ್ಚಿಸಿ: ಸಂಸದ ಸಂಗಣ್ಣ ಕರಡಿ

ಕೋವಿಡ್ ನಿಯಂತ್ರಣ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆ
Last Updated 16 ಜುಲೈ 2020, 17:06 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಸೋಂಕು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ನಿತ್ಯ ಸರಾಸರಿ ಸಾವಿರ ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು, ಜಿಲ್ಲಾಧಿಕಾರಿಸುರಳ್ಕರ್‌ ವಿಕಾಸ್‌ ಕಿಶೋರ್‌ಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಜಿಲ್ಲೆಯಲ್ಲಿ 29 ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳಿದ್ದು, ಅವುಗಳನ್ನು 50ಕ್ಕೆ ಹೆಚ್ಚಿಸಿ. ಶೀಘ್ರ ಫಲಿತಾಂಶವನ್ನು ಪಡೆಯಬೇಕು. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಬೇಗ ಪತ್ತೆ ಹಚ್ಚಿ, ಸೋಂಕು ಹರಡುವಿಕೆ ನಿಯಂತ್ರಿಸಬೇಕು. ಕೋವಿಡ್ ನಿಯಂತ್ರಣ ಕಾರ್ಯಪಡೆಯಲ್ಲಿರುವ ಅಧಿಕಾರಿಗಳು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಸೀಲ್‌ಡೌನ್ ಪ್ರದೇಶದಲ್ಲಿ ರ‍್ಯಾಪಿಡ್ ಟೆಸ್ಟ್ ಮಾಡಿ. ಶೀತಜ್ವರ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು ಎಂದು ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಮಾಹಿತಿ ಪಡೆದು, ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಇದರಿಂದ ಸೋಂಕು ಪತ್ತೆ ಹಚ್ಚುವಿಕೆ ಮತ್ತು ಹರಡುವಿಕೆ ತಡೆಯಲು ಅನುಕೂಲವಾಗುತ್ತದೆ. ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಎಲ್ಲ ವೈದ್ಯಕೀಯ ಸಲಕರಣೆ, ಔಷಧಗಳನ್ನು ಲಭ್ಯವಿರುವಂತೆ ಮುಂಜಾಗ್ರತೆ ವಹಿಸಿ ಎಂದರು.

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ಕೋವಿಡ್ ಕೇರ್ ಕೇಂದ್ರಗಳಲ್ಲಿರುವವರಿಗೆ ಆರೋಗ್ಯಕರ ಆಹಾರವನ್ನು ಒದಗಿಸಬೇಕು ಎಂದು ಸೂಚಿಸಿದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ರ‍್ಯಾಂಡಮ್ ಚೆಕ್ ಮಾಡಲು ಆ್ಯಂಟಿಜೆನ್ ಕಿಟ್‌ಗಳನ್ನು ಹೆಚ್ಚು ತರಿಸಿಕೊಳ್ಳಿ. ಲಾಕ್‌ಡೌನ್‌ನಿಂದ ಸೋಂಕು ಹರಡುವಿಕೆ ನಿಯಂತ್ರಣ ಸಾಧ್ಯತೆ ಇರುವುದರಿಂದ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟಿಗೆ ಸಮಯವನ್ನು ನಿರ್ದಿಷ್ಟ ಪಡಿಸಿ, ಭಾಗಶಃ ಲಾಕ್‌ಡೌನ್‌ಗೆ ಕ್ರಮ ಕೈಗೊಳ್ಳಬಹುದು ಎಂದರು.

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿ, ಐಸಿಯುನಲ್ಲಿರುವ ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಔಷಧಗಳನ್ನು ಸರಬರಾಜು ಮಾಡುವಂತೆ ಆರೋಗ್ಯ ಇಲಾಖೆ ಆಯುಕ್ತರೊಂದಿಗೆ ಮನವಿ ಸಲ್ಲಿಸಿ. ಜಿಲ್ಲಾಸ್ಪತ್ರೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವಾಗಿರುವ ಎಲ್ಲ ಔಷಧಗಳು ಸಂಗ್ರಹದಲ್ಲಿರಬೇಕು ಎಂದರು.

ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಸೀಲ್‌ಡೌನ್ ಪ್ರದೇಶದಲ್ಲಿ ಮೊಬೈಲ್ ಸ್ಯಾಂಪಲ್ ಕಲೆಕ್ಟಿಂಗ್ ವೆಹಿಕಲ್ ಬಳಸಿ, ಮಾದರಿ ಸಂಗ್ರಹಕ್ಕೆ ಯೋಜಿಸಲಾಗಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೂ 368 ಸೋಂಕಿತರು, 2,343 ಪ್ರಾಥಮಿಕ ಸಂಪರ್ಕಿತರು, 3,000 ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ಸೋಂಕಿನ ಲಕ್ಷಣಗಳಿರುವವರಿಗೆ ಕೋವಿಡ್-19 ಟೆಸ್ಟ್ ಮಾಡಲು ಆದ್ಯತೆ ನೀಡಲಾಗುತ್ತಿದೆ. ಉಳಿದಂತೆ ಸೋಂಕಿನ ಲಕ್ಷಣವಿಲ್ಲದವರ ಪರೀಕ್ಷೆ ಮಾಡಲಾಗುತ್ತದೆ. ಪ್ರಕರಣಗಳಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುವುದು ವಿಳಂಬವಾಗುತ್ತಿದೆ. ಇದರಿಂದ ಸೋಂಕು ಪತ್ತೆಗೆ ತಡವಾಗುತ್ತಿದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೌಲಭ್ಯ ಒದಗಿಸುವ ಕುರಿತು ಖಾಸಗಿ ಆಸ್ಪತ್ರೆಯವರೊಂದಿಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಕ್ಸಿಜನ್ ಹೊಂದಿರುವ ಬೆಡ್‌ಗಳನ್ನು ಕೋವಿಡ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಇತರ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ. ಜಿಲ್ಲೆಯ ಖಾಸಗಿ ವೈದ್ಯರಿಗೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ನೋಟಿಸ್ ನೀಡಲಾಗಿದ್ದು, ಅಗತ್ಯ ಬಿದ್ದಲ್ಲಿ ಅವರು ಸೇವೆಗೆ ಹಾಜರಾಗಬೇಕು. ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಆಕ್ಸಿಮೇಟರ್, ಥರ್ಮಲ್ ಸ್ಕ್ಯಾನರ್ ಕಿಟ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಿಂಗರಾಜು ಟಿ., ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರೆಡ್ಡಿ, ಕಿಮ್ಸ್ ನಿರ್ದೇಶಕ ವಿಜಯನಾಥ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT