ಶನಿವಾರ, ಡಿಸೆಂಬರ್ 3, 2022
19 °C
ಮೈಸೂರಿನ ಶಿವಯೋಗಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

'ನಮ್ಮನ್ನಾಳುವವರು ಪೆನ್ನಿನ ಭಾರತವನ್ನು ಗನ್ನಿನ ಭಾರತ ಮಾಡಲು ಹೊರಟಿದ್ದಾರೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ‘ಭಾರತವೆಂದರೆ ಕೇವಲ ಕಲ್ಲು ಮಣ್ಣು ಗುಡ್ಡಗಳಲ್ಲ. ಸರ್ವ ಜನಾಂಗಗಳ ಮನಸ್ಸುಗಳ ಸಮ್ಮಿಲನವಾಗಿದೆ’ ಎಂದು ಮೈಸೂರಿನ ಶಿವಯೋಗಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಮುಸ್ಲಿಂ ಯುವ ಸಮಿತಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಭಾರತದ ಆಜಾದಿ ಉಳಿಸಲು ಮತ ಮಾರಾಟವಾಗಬಾರದು. ಭಾರತ ಬದಲಾಗಲು ಮತಗಳೇ ಆಧಾರ. ಆಯುಧಗಳಿಂದ ದೇಶದ ಇತಿಹಾಸ ಬದಲಿಸಲು ಸಾಧ್ಯವಿಲ್ಲ. ಪೆನ್ನಿನ ಮೂಲಕ ದೇಶದ ಇತಿಹಾಸ ಬದಲಾಯಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್‌. ನಮ್ಮನ್ನಾಳುವವರು ಪೆನ್ನಿನ ಭಾರತವನ್ನು ಗನ್ನಿನ ಭಾರತ ಮಾಡಲು ಹೊರಟಿದ್ದಾರೆ. ಇದನ್ನು ಅಹಿಂದ ವರ್ಗ ಅರಿತುಕೊಳ್ಳಬೇಕು. ಹುಲಿಗಳ ಜಯಂತಿಯನ್ನು ಹುಲಿಗಳೇ ಮಾಡಬೇಕು ಹೊರತು ಇಲಿಗಳಲ್ಲ, ಇಲಿ ಬಿಲದಲ್ಲಿ ಇರುತ್ತವೆ’ ಎಂದರು.

ಜವಾಹರ್ ರಸ್ತೆಯ ಯೂಸೂಫಿಯಾ ಮಸೀದಿಯ ಮೌಲಾನಾ ಮುಫ್ತಿ ನಜೀರ್ ಅಹ್ಮದ್, ನಮ್ಮೆಲ್ಲರ ನೆಮ್ಮದಿಯ ಬದುಕಿಗಾಗಿ ಅನೇಕರು ತಮ್ಮ ಬದುಕು ಹಾಗೂ ಕುಟುಂಬವನ್ನು ತ್ಯಾಗ ಮಾಡಿದ್ದಾರೆ. ಅವರ ಶ್ರಮದಿಂದ ನಾವಿಂದು ಸುಖವಾಗಿ ಬದುಕುತ್ತಿದ್ದೇವೆ ಎಂದರು.

ಸಾಮಾಜಿಕ ಚಿಂತಕ ನಿಕೇತರಾಜ್ ಮೌರ್ಯ ಮಾತನಾಡಿ ‘ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದ್ದರಿಂದ ಸ್ವಾತಂತ್ರ್ಯ ಸಿಕ್ಕಿದೆಯೇ ಹೊರತು ಈಗಿರುವ ಅನೇಕ ಸುಳ್ಳು ಇತಿಹಾಸಗಳಿಂದ ಅಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನವೇ ನಮ್ಮನ್ನು ಉಳಿಸಿದೆ ಎಂಬುದನ್ನು ಮರೆಯದೇ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡದಿದ್ದರೆ ಎಲ್ಲರೂ ಸರ್ವನಾಶವಾಗುವುದರಲ್ಲಿ ಅನುಮಾನವಿಲ್ಲ’ ಎಂದರು.

‘ಭಾರತದ ಇತಿಹಾಸ ನೋಡುವುದಾದರೆ ಗಾಂಧಿ ನೆಹರೂಗಿಂತ ಹೆಚ್ಚು ಜೈಲುವಾಸ ಅನುಭವಿಸಿದ್ದಾರೆ. ನಿಜವಾದ ಇತಿಹಾಸ ಮಾತ್ರ ಓದಬೇಕು, ಅದನ್ನು ಮಾತ್ರ ಕಲಿಸಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸುವದನ್ನು ಕಲಿಸಬೇಕಿದೆ. ನಮ್ಮಲ್ಲಿರುವ ಒಡಕನ್ನು ಬಳಸಿಕೊಂಡು ದೇಶವನ್ನು ಮುನ್ನೂರು ವರ್ಷ ಆಳಿದ್ದಾರೆ ಎಂಬುದನ್ನು ಮರೆಯಬಾರದು’ ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮುಖಂಡರಾದ ಕೆ.ಎಂ. ಸೈಯದ್‌, ಕಾಟನ್ ಪಾಶಾ, ಗುರುರಾಜ ಹಲಗೇರಿ, ಶಿವರಡ್ಡಿ ಭೂಮಕ್ಕನವರ, ರಾಜು ನಾಯಕ್, ಸಾಧಿಕ್ ಅತ್ತಾರ, ಎಂ. ಸಾಧಿಕ್ ಅಲಿ, ಕತೀಬ್ ಭಾಷಾ, ಮಾನವಿ ಪಾಶಾ, ನಗರಸಭೆ ಸದಸ್ಯ ಹಾಗೂ ಸಮಿತಿ ಅಧ್ಯಕ್ಷ ಅಮ್ಜದ್ ಪಟೇಲ್, ಸಂಘಟಕ ಸಲೀಂ ಮಂಡಲಗೇರಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು