ಕೊಪ್ಪಳ: ‘ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಒಂದು ಕೋಟಿ ಜನಸಂಖ್ಯೆ ಹೊಂದಿದ್ದರೂ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ. ಸರ್ಕಾರ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಬೇಕು. ಆಡಳಿತ ನಡೆಸಿದ ಎಲ್ಲ ಸರ್ಕಾರಗಳಿಂದ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಕಲಬುರಗಿ ಹೇಳಿದರು.
ಇಲ್ಲಿನ ಹಜರತ್ ಮರ್ದಾನೆ ಗೈಬಾ ದರ್ಗಾ ಆವರಣದಲ್ಲಿ ಸಂಘಟನೆಯ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ’ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಮರುಸ್ಥಾಪಿಸಿ ಮೀಸಲಾತಿಯನ್ನು ಶೇ 4ರಿಂದ ಶೇ 8ಕ್ಕೆ ಹೆಚ್ಚಳ ಮಾಡಬೇಕು. ಈ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲು ರ್‍ಯಾಲಿ ನಡೆಸಲಾಗುವುದು’ ಎಂದು ತಿಳಿಸಿದರು.
‘ಮುಸ್ಲಿಮರು ಸಾಮಾಜಿಕ, ಆರ್ಥಿಕ, ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಎಲ್ಲಾ ಸರ್ಕಾರಗಳು ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಯ ಯೋಜನೆ ರೂಪಿಸುತ್ತಿಲ್ಲ. ಅದಕ್ಕೆ ತಕ್ಕಂತೆ ಬಜೆಟ್‌ನಲ್ಲಿ ಅನುದಾನ ಘೋಷಿಸುತ್ತಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆಯಾ ಪಕ್ಷಗಳ ಯೋಗ್ಯತೆಗೆ ತಕ್ಕಂತೆ ಸಾಮಾಜಿಕ ನ್ಯಾಯ ಕಲ್ಪಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ವಕ್ಸ್ ಮಂಡಳಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ವಕ್ಫ್‌ನ ಹಕ್ಕು ಮತ್ತು ಸ್ವತಂತ್ರ ಮೊಟಕುಗೊಳಿಸಲು ಕೇಂದ್ರ ಸರ್ಕಾರ ಹೊಸ ವಕ್ಸ್ ತಿದ್ದುಪಡಿ ಕಾಯ್ದೆ ತರಲು ಮುಂದಾಗಿದೆ. ಇದನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಮೀಸಲಾತಿ ನೀಡುವಂತೆ ಆಗ್ರಹಿಸಿ ಸಂಘಟನೆ ಕೆಲ ದಿನಗಳಲ್ಲಿ ರ್‍ಯಾಲಿ ನಡೆಸಲಿದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಮುಸ್ಲಿಂ ಧರ್ಮಗುರು ಮೌಲಾನ ಮೊಹಮ್ಮದ್ ಮುಸ್ತಫಾ ಕಮಲ್ ಪಾಶಾ ಖಾದ್ರಿ ತಸ್ಕಿನಿ, ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ವಕೀಲ ಎಸ್. ಆಸೀಫ್ ಅಲಿ, ಸಮಾಜದ ಮುಖಂಡ ಕೆ.ಎಂ. ಸೈಯದ್, ಸಂಘಟನೆ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಲಾನ್ ಕಿಲ್ಲೇದಾರ್, ಕಿತ್ತೂರು ಕರ್ನಾಟಕ ಭಾಗದ ಸಂಚಾಲಕ ಮೆಹಬೂಬ ಸರಖಾವಸ್, ರಾಜ್ಯ ಯುವ ಘಟಕದ ಅಧ್ಯಕ್ಷ ಎಂ.ನೂರ ಅಹ್ಮದ್, ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಡಿ. ಆಸೀಫ್ ಕರ್ಕಿಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
‘ಸಂದರ್ಭ ಬಂದರೆ ದೃಢ ಹೆಜ್ಜೆ’
ಕೊಪ್ಪಳ: ‘ಎಲ್ಲ ರಾಜಕೀಯ ಪಕ್ಷಗಳಿಂದಲೂ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದ್ದು ಸಂದರ್ಭ ಬಂದರೆ ಪರ್ಯಾಯ ಮಾರ್ಗದತ್ತ ಹೆಜ್ಜೆ ಹಾಕುತ್ತೇವೆ. ನಿರ್ದಿಷ್ಟ ಪಕ್ಷವನ್ನು ನೆಚ್ಚಿಕೊಂಡಿದ್ದರಿಂದ ಈಗ ಈ ಪರಿಸ್ಥಿತಿ ಎದುರಾಗಿದೆ’ ಎಂದು ಅಬ್ದುಲ್ ಜಬ್ಬಾರ್ ಕಲಬುರಗಿ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಒಬಿಸಿಯ ಒಟ್ಟು ಮೀಸಲಾತಿಯಲ್ಲಿ ಎಲ್ಲ ಜಾತಿಗಳಿಗೆ ಪ್ರತ್ಯೇಕ ಒಳಮೀಸಲಾತಿಗಾಗಿ ಕಾನೂನು ತಿದ್ದುಪಡಿ ತರಬೇಕು. ಅಲ್ಪಸಂಖ್ಯಾತ ಸಮುದಾಯದ ಆಡಳಿತ ಮಂಡಳಿ ನಡೆಸುತ್ತಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.