ಕುಕನೂರು: ಉತ್ತರ ಕರ್ನಾಟಕದ ಭಾಗದಲ್ಲಿ ಭಾದ್ರಪದ ಮಾಸದ ಸಂದರ್ಭದಲ್ಲಿ ಏಳು ದಿನಗಳ ಕಾಲ ಆಚರಿಸಲಾಗುವ ಜೋಕುಮಾರಸ್ವಾಮಿ ಹಬ್ಬವು ಎಲ್ಲೆಡೆ ಆರಂಭವಾಗಿದೆ.
ಈ ಹಬ್ಬದ ಅಂಗವಾಗಿ ಗಂಗಾಮತಸ್ಥ ಸಮಾಜದ ಜನರು ಏಳು ದಿನಗಳ ಕಾಲ ಜೋಕುಮಾರನನ್ನು ಬುಟ್ಟಿಯಲ್ಲಿ ಹಾಕಿಕೊಂಡು ಮನೆ–ಮನೆಗೆ ತೆರಳಿ ಅಡ್ಡಡ್ಡ ಮಳೆ ಬಂದ... ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ...... ಎಂದು ತಮ್ಮ ಗಾನಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತಾ ಜೋಕುಮಾರರನ್ನು ಆರಾಧಿಸುವ ಹಬ್ಬ ಹಳ್ಳಿಗಳಲ್ಲಿ ಶುರುವಾಗಿದೆ.
ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಜೋಕುಮಾರ ಹುಟ್ಟುತ್ತಾನೆ. ಮಣ್ಣಿನಿಂದ ತಯಾರಿಸಲಾದ ಜೋಕುಮಾರ ಮೂರ್ತಿಗೆ ಬೇವಿನ ಎಸಳುಗಳ ಉಡುಗೆಯೊಂದಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಅಲಂಕೃತ ಮೂರ್ತಿಯನ್ನು ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಆತನಿಗೆ ಸಂಬಂಧಿಸಿದ ಕತೆ-ಹಾಡುಗಳನ್ನು ಹಾಡುತ್ತ ಸಂಚರಿಸುತ್ತಾರೆ.
7 ದಿನಗಳ ಕಾಲ ಸಂಭ್ರಮದಿಂದ ಆಚರಿಸುವ ಜೋಕುಮಾರನನ್ನು, ಗ್ರಾಮಗಳಲ್ಲಿ ಕಾಲ್ನಡಿಗೆಯಲ್ಲಿಯೆ ಸಂಚರಿಸಬೇಕೆಂಬುದು ಆರಾಧಕರು ಹಾಕಿಕೊಂಡಿರುವ ಸಂಪ್ರದಾಯ. ಮನೆಮನೆಗೆ ತೆರಳಿದಾಗ ಭಕ್ತರು ನೀಡುವ ಜೋಳಕ್ಕೆ ಪ್ರತಿಯಾಗಿ ಜೋಕುಮಾರನ ಅರ್ಚಕರು ಕರಿಮಸಿ ಬೆರೆತ ಬೇವಿನ ಸೊಪ್ಪು, ಜೋಳ ಇತ್ಯಾದಿಗಳನ್ನು ಪ್ರತಿಯಾಗಿ ಕೊಡುತ್ತಾರೆ. ಇದನ್ನು ಮಾರನೇ ದಿನ ಬೆಳಗಿನಜಾವ ಜೋಳದ ಪೈರಿಗೆ ಮಜ್ಜಿಗೆಯಲ್ಲಿ ಬೆರೆಸಿಕೊಂಡು ಚರಗ ಚೆಲ್ಲುತ್ತಾರೆ. ಹೀಗೆ ಮಾಡುವುದರಿಂದ ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ.
ಜೋಕುಮಾರಸ್ವಾಮಿ ಜನಪದೀಯ ಸಂಸ್ಕೃತಿಯ ವಿಶಿಷ್ಟ ಆಚರಣೆಯ ಹಬ್ಬ. ಜೋಕುಮಾರನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ, ಮಳೆ-ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆ ಕೃಷಿಕ ಜನರಲ್ಲಿ ಹಾಸುಹೊಕ್ಕಿದೆ. ಗಣೇಶ ಶಿಷ್ಟ ಸಂಸ್ಕೃತಿಯ ವಾರಸುದಾರನಾದರೆ, ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ ಪ್ರತೀಕ. ಒಂದು ವಾರಗಳ ಕಾಲ, ಕಾಯಿ-ಕಡುಬಿನ ಭರ್ಜರಿ ಭೂರಿಜೋಜನ ಸವಿದ ಗಣೇಶ, ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆ-ತಾಯಿ; ಶಿವ-ಪಾರ್ವತಿಗೆ ವರದಿ ಒಪ್ಪಿಸಿದರೆ, ಜಾನಪದ ಸಂಸ್ಕೃತಿಯ ವಾರಸುದಾರನಾದ ಜೋಕುಮಾರ ಸ್ವಾಮಿ `ಭೂಲೋಕದಲ್ಲಿ ಮಳೆ ಇಲ್ಲದೆ, ನರಮನುಷ್ಯ ಸಂಕಷ್ಟದಲ್ಲಿದ್ದಾನೆ. ಹನಿ ನೀರಿಗಾಗಿ ಪ್ರಾಣಿ-ಪಕ್ಷಿಗಳು ಪರಿತಪಿಸುತ್ತಿವೆ. ಮಳೆ ಸುರಿಯದೇ ಹೋದರೆ ಭೂಲೋಕ ನರಕಕೂಪವಾಗುತ್ತದೆ ಎಂದು ಜನರ ಕಷ್ಟಕಾರ್ಪಣ್ಯಗಳ ವರದಿ ಒಪ್ಪಿಸಿ ಮಳೆಗಾಗಿ ವಿನಂತಿಸುತ್ತಾನೆ ಎಂಬುದು ಜಾನಪದ ವಿದ್ವಾಂಸರ ಅಭಿಪ್ರಾಯವಾಗಿದೆ.
ಪುರಾತನ ಕಾಲದಿಂದ ಗಂಗಾಮತಸ್ಥ ಸಮುದಾಯದವರು ಈ ಜೋಕುಮಾರ ಸ್ವಾಮಿಯನ್ನು ಹೊತ್ತು ಮನೆಮನೆಗೆ ತೆರಳಿ ಹಾಡನ್ನು ಹಾಡುವ ಮೂಲಕ ಮಳೆ ಬೆಳೆ ಚೆನ್ನಾಗಿ ಬೆಳೆಯಲಿ ರೈತನ ಮೊಗ ಹರ್ಷವಾಗಲಿ ಎಂದು ಈ ಹಬ್ಬ ಆಚರಿಸುತ್ತೇವೆ.ಶಂಕ್ರಮ್ಮ ಬಾರಕೇರ್ ಕುಕನೂರು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.