ಕಾರಟಗಿ: ‘ರೈತರು ಸಾಲ ಬಾಧೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಲು ಸಿದ್ಧವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜುಲೈ 30ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪಟ್ಟಣದ 2ನೇ ವಾರ್ಡ್‌ನ ಉಪ್ಪಾರ ಓಣಿಯ ರೈತ ಯಂಕಪ್ಪ ಉಪ್ಪಾರ ನಿವಾಸಕ್ಕೆ ಶನಿವಾರ ಭೇಟಿ ನೀಡಿ, ಮೃತ ರೈತನ ಪತ್ನಿ ದೇವಮ್ಮ ಉಪ್ಪಾರ ಕುಟುಂಬಕ್ಕೆ ಸಾಂತ್ವನ ಹೇಳಿ, ಮಾತನಾಡಿದರು.
‘ಘಟನೆಯ ವರದಿ ಶೀಘ್ರವೇ ಸಿದ್ಧಪಡಿಸಿ ಕುಟುಂಬಕ್ಕೆ ಪರಿಹಾರ ವಿತರಣೆ ಆಗುವಂತೆ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಎಂ. ಕುಮಾರಸ್ವಾಮಿಗೆ ಸೂಚಿಸಿದರು.
ರೈತರು ಧೈರ್ಯದಿಂದ ಬಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸಾಂತ್ವನ ಹೇಳಿದ ಸಚಿವ ತಂಗಡಗಿ ವೈಯಕ್ತಿಕ ಹಣಕಾಸು ನೆರವು ನೀಡಿದರು.
ಅನುಷ್ಠಾನಕ್ಕೆ ಬದ್ಧ: ಒಳಮೀಸಲಾತಿ ವರ್ಗೀಕರಣಕ್ಕೆ ಸುಪ್ರೀಂ ಕೋಟ್‌ನಿಂದ ಹಸಿರು ನಿಶಾನೆ ದೊರೆತಿದ್ದು, ಅನುಷ್ಠಾನಕ್ಕೆ ಸರ್ಕಾರ ಬದ್ಧ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿದ್ದೇವೆ. ಭೂಮಿ ಪೂಜೆ ನೆರವೇರಿಸಲಾಗಿರುವ ಇಂದಿರಾ ಕ್ಯಾಂಟಿನ್ ಸ್ಥಳ ಸರ್ಕಾರಿ ಜಾಗೆವೇ ಅಥವಾರ ಭೂಮಿ ಖಾಸಗಿಯವರದ್ದೇ ಎಂಬ ದೂರುಗಳನ್ನು ಪರಿಶೀಲಿಸಲಾಗುವುದು ಎಂದರು.
ಪ್ರಮುಖರಾದ ಕೆ. ಸಿದ್ದನಗೌಡ, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾರ, ಉದಯ ಈಡಿಗೇರ, ರೈತ ಮುಖಂಡ ನಾರಾಯಣ ಈಡಿಗೇರ, ಶ್ರೀನಿವಾಸ ಗೋಮರ್ಸಿ ಹಾಜರಿದ್ದರು.