ಭಾನುವಾರ, ಸೆಪ್ಟೆಂಬರ್ 25, 2022
21 °C
ಈಗಲೂ ಗಟ್ಟಿಮುಟ್ಟಾಗಿರುವ ಕೊಪ್ಪಳ, ಬಹದ್ದೂರ್‌ ಬಂಡಿ ಕೋಟೆ

ಕೊಪ್ಪಳ: ಸ್ವಾತಂತ್ರ್ಯ ಹೋರಾಟದ ಹೆಗ್ಗುರುತು ಕೋಟೆ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯ ಹಲವು ಸ್ಮಾರಕಗಳು ಮತ್ತು ಕೋಟೆಗಳು ಸ್ವಾತಂತ್ರ್ಯೋತ್ಸವದ ಹೋರಾಟಕ್ಕೆ ಸಾಕ್ಷಿಯಂತಿವೆ.

ಅದರಲ್ಲಿ ಕೊಪ್ಪಳದ ಕೋಟೆ (ಕಿಲ್ಲಾ) ಪ್ರಮುಖವಾದದ್ದು. ಈ ಕೋಟೆಯ ಕೆಲ ಭಾಗಗಳು ಎರಡನೇ ಇಬ್ರಾಹಿಂನ ಆದಿಲ್‌ಶಾಹನ ಕಾಲದಲ್ಲಿ ನಿರ್ಮಾಣವಾದವು. ಏಳು ಸುತ್ತಿನ ಕೋಟೆ ಇದಾಗಿದ್ದು, ಮೊದಲ ಸುತ್ತಿನಲ್ಲಿ ಎರಡು ವೃತ್ತಾಕಾರದ ಬುರ್ಜುಗಳಿವೆ. ಬಾವಿ ಮತ್ತು ವಿಶ್ರಾಂತಿಗೆ ಮಂಟಪ ನಿರ್ಮಿಸಿದಂತಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ನೆರವಾದ ಹಿನ್ನೆಲೆ ಹೊಂದಿರುವ ಈ ಕೋಟೆ ಕೊಪ್ಪಳ ನಗರದಿಂದ 4 ಕಿ.ಮೀ. ದೂರದಲ್ಲಿದೆ. ಪ್ರಮುಖ ಆಕರ್ಷಣೆಯ ತಾಣವೂ ಹೌದು.

ಜಿಲ್ಲೆಗೆ ಸಂಬಂಧಿಸಿದ ಕೆಲ ಶಾಸನಗಳಲ್ಲಿ ಕೋಟೆಯ ಮಾಹಿತಿಯಿದ್ದು, ಇಬ್ರಾಹಿಂ ಆದಿಲ್‌ ಶಾ ಅವಧಿಯಲ್ಲಿ ನಿರ್ಮಿತ ಮಂಟಪವನ್ನು ಈ ರಾಜನ ಬಂಟ ಸುಲ್ತಾನ್‌ ಅಲಿ ನವೀಕರಣ ಮಾಡಿದ. ಕ್ರಿ.ಶ. 1609ರ ಅವಧಿಯಲ್ಲಿ ಎರಡನೇ ಇಬ್ರಾಹಿಂ ಆದಿಲ್‌ ಶಾ ಗುಲಾಮರಾದ ಯಕ್ಕೂತ್‌ ಖಾನ್‌ ಮತ್ತು ಫಾಜೀಖಾನ್ ಇಬ್ಬರೂ ಕೊಪ್ಪಳ ಕೋಟೆಯ ಅಧಿಕಾರಿಗಳು ಇದ್ದಂತೆ ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ.

1857ರ ಸ್ವಾತಂತ್ರ್ಯ ಸಂಗ್ರಾಮದ ವೇಳೆ ದಕ್ಷಿಣ ಭಾರತದ ಈ ಕೋಟೆ ಪ್ರದೇಶದಲ್ಲಿ ಜಮೀನ್ದಾರ ವೀರಪ್ಪ ದೇಸಾಯಿ ಅವರು ಹೋರಾಟದ ಕಿಡಿ ಹೊತ್ತಿಸಿದ್ದರು. ಮುಂಡರಗಿಯ ಭೀಮರಾಯ, ಹಮ್ಮಗಿಯ ಕೆಂಚನಗೌಡ ದೇಸಾಯಿ ಅವರು ಬ್ರಿಟಿಷರ ವಿರುದ್ಧ ಸೆಣಸಾಡಿ, ಕೋಟೆ ವಶಪಡಿಸಿಕೊಂಡಿದ್ದರು.

ಬಹದ್ದೂರ್‌ ಬಂಡೆ ಕೋಟೆ: ‌‌‘ಹೈದರ್ ಅಲಿ ಆಳ್ವಿಕೆಯಲ್ಲಿ ಶೇಖ್ ಮಹಮ್ಮದ್‌ ಖಾನ್‌ ಎಂಬ ಮೇಲ್ವಿಚಾರಕನ ಉಸ್ತುವಾರಿಯಲ್ಲಿ ಬಹದ್ದೂರ್‌ ಬಂಡೆ ಕೋಟೆ ನಿರ್ಮಿಸಲಾಯಿತು. 1782ರಲ್ಲಿ ಮರಾಠರು ಮತ್ತು ನಿಜಾಮರು ತಮ್ಮ ಸೈನ್ಯದ ಜೊತೆ ಬಹದ್ದೂರ್‌ ಬಂಡಿ ಕೋಟೆಯ ಮೇಲೆ ದಾಳಿ ನಡೆಸಿದರು.

ಈ ಕೋಟೆಯನ್ನು ಕ್ರಿ.ಶ. 1786ರಲ್ಲಿ ಟಿಪ್ಪು ಸುಲ್ತಾನ ಮುತ್ತಿಗೆ ಹಾಕಿ ವಶಪಡಿಸಿಕೊಂಡ. ಆನಂತರ ಫ್ರೆಂಚ್ ಎಂಜಿನಿಯರ್‌ಗಳ ನೆರವಿನಿಂದ ಕ್ರಿ.ಶ. 1790 ರಲ್ಲಿ ಕೋಟೆ ಉನ್ನತೀಕರಿಸಲಾಯಿತು’ ಎಂದು ಇತಿಹಾಸದ ಪುಟಗಳು ಹೇಳುತ್ತವೆ.

ಸ್ವಾತಂತ್ರ್ಯ ಹೋರಾಟಕ್ಕೆ ನೆರವಾದ ಹಿನ್ನೆಲೆ ಹೊಂದಿರುವ ಈ ಕೋಟೆ ಕೊಪ್ಪಳ ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿದೆ. ಪ್ರಮುಖ ಆಕರ್ಷಣೆಯ ತಾಣವೂ ಆಗಿದೆ.

ಎರಡು ಸುತ್ತಿನಲ್ಲಿ ಕೋಟೆ ಕಟ್ಟಲಾಗಿದೆ. ಚೌಕಾಕಾರದ ದಪ್ಪನೆಯ ಕಲ್ಲುಗಳನ್ನು ಬಳಸಲಾಗಿದೆ. ಬಾಗಿಲಿನ ಪಶ್ಚಿಮದ ಬಂಡೆಯೊಂದರ ಮೇಲೆ ಅರೇಬಿಕ್‌ ಶಾಸನವಿದೆ. ವೈರಿಯ ಕಣ್ಣಿಗೆ ಕಾಣದಂತೆ ಅಡಗಿಕೊಂಡು ಯುದ್ಧ ಮಾಡುವ ತಂತ್ರದ ಕಾರಣಕ್ಕಾಗಿ ‘ನಿಟು’ಗಳನ್ನು ನಿರ್ಮಿಸಲಾಗಿದೆ.

ಕೋಟೆಯಲ್ಲಿ ಕೊಳಗಳು ಇವೆ. ಕೊಪ್ಪಳ ಜಿಲ್ಲೆಯ ಬಹದ್ದೂರ ಬಂಡಿ ಕೋಟೆ ನಿಜಾಮರ ಜತೆಗಿನ ಹೋರಾಟವಷ್ಟೇ ಅಲ್ಲ, ರೈತ ಬಂಡಾಯದ ಮೂಲಕ ನಡೆದ ಸ್ವಾತಂತ್ರ್ಯ ಹೋರಾಟಕ್ಕೂ ಸಾಕ್ಷಿಯಾಗಿ ನಿಂತಿದೆ ಎನ್ನುತ್ತಾರೆ ಇತಿಹಾಸ ತಜ್ಞರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು