ಸೋಮವಾರ, ಏಪ್ರಿಲ್ 19, 2021
23 °C

ಆಗ ಅಮಾನತು, ಈಗ ಸನ್ಮಾನಿಸಿ ಕರ್ತವ್ಯಕ್ಕೆ ನಿಯೋಜನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕರ್ತವ್ಯ ಲೋಪದ ಆರೋಪದ ಮೇರೆಗೆ ಮೂರು ತಿಂಗಳ ಹಿಂದೆ ಅಮಾನತಾಗಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ಘಟಕದ ಚಾಲಕ ಕಂ ನಿರ್ವಾಹಕ ಮುತ್ತುರಾಜ ಕುಲಕರ್ಣಿ ಅವರ ಅಮಾನತು ರದ್ದುಪಡಿಸಿದ ಅಧಿಕಾರಿಗಳು, ಅವರನ್ನು ಸನ್ಮಾನಿಸಿ ಕೆಲಸಕ್ಕೆ ನಿಯೋಜಿಸಿದರು.

‘ಅಮಾನತು ಆದೇಶ ವಾಪಸ್‌ ಪಡೆದು ಕೆಲಸಕ್ಕೆ ನಿಯೋಜಿಸುವಂತೆ ಎರಡು ತಿಂಗಳಿನಿಂದ ಕಚೇರಿಗೆ ಅಲೆದರೂ ಪ್ರಯೋಜನವಾಗಿರಲಿಲ್ಲ. ಆದರೆ, ಮಂಗಳವಾರ ಕೆಲಸಕ್ಕೆ ಹಾಜರಾದರೆ ಅಮಾನತು ಆದೇಶ ರದ್ದುಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದರಿಂದ ಕೆಲಸಕ್ಕೆ ಹಾಜರಾಗಿದ್ದೇನೆ’ ಎಂದು ಮುತ್ತುರಾಜ ಪ್ರತಿಕ್ರಿಯಿಸಿದರು.

ಹೊಸಪೇಟೆ ಮಾರ್ಗದ ಬಸ್‌ನಲ್ಲಿ ಮುತ್ತುರಾಜ ಕಾರ್ಯನಿರ್ವಹಿಸಿದರು.

 ‘6ನೇ ವೇತನ ಆಯೋಗದ ಶಿಫಾರಸು ಜಾರಿ ಇಲ್ಲ’
ರಾಮನಗರ:
ಕೆಎಸ್‌ಆರ್‌ಟಿಸಿ ನೌಕರರಿಗೆ ಆರನೇ ವೇತನ ಆಯೋಗದಂತೆ ವೇತನ ನೀಡಲು ಆಗದು. ಶೇ 8ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಕೆಎಸ್ಆರ್‌ಟಿಸಿ ಒಂದು ಸ್ವಾಯತ್ತ ಸಂಸ್ಥೆ. ಹೀಗಾಗಿ ಅವುಗಳ ಆದಾಯ ಆಧರಿಸಿ ವೇತನ ನೀಡಲು ಸಾಧ್ಯ’ ಎಂದರು.

ಕೆಎಸ್‌ಆರ್‌ಟಿಸಿ ಖಾಸಗೀಕರಣ ಇಲ್ಲ: ‘ಸಂಸ್ಥೆ ಲಾಭದಲ್ಲಿ ನಡೆದರೆ ಕಾರ್ಮಿಕರಿಗೆ ಅನುಕೂಲ ಆಗಲಿದೆ. ಕೆಎಸ್‌ಆರ್‌ಟಿಸಿಯನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿಲ್ಲ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದರು.

‘‌ಸಂಬಳ ಸಾಕಾಗದಿದ್ದರೆ ಕೆಲಸ ಬಿಡಲಿ’
ತಿಪಟೂರು: ಸಾರಿಗೆ ನೌಕರರ ಮುಷ್ಕರದಿಂದ ಬಸ್‌ ಇಲ್ಲ ಎಂದು ಕರೆ ಮಾಡಿದ ಪ್ರಯಾಣಿಕನಿಗೆ ‘ಸಾರಿಗೆ ನೌಕರರಿಗೆ ಸಂಬಳ ಸಾಕಾಗದಿದ್ದರೆ ಕೆಲಸ ಬಿಡಲಿ’ ಎಂದು ತಿಪಟೂರು ಶಾಸಕ ಬಿ.ಸಿ.ನಾಗೇಶ್ ಹೇಳಿರುವ ಆಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಯಾಣಿಕರೊಬ್ಬರು ತಿಪಟೂರಿನಿಂದ ಚನ್ನರಾಯಪಟ್ಟಣಕ್ಕೆ ತೆರಳಲು ಬಸ್‍ ಇಲ್ಲ ಎಂದು ಕರೆ ಮಾಡಿದಾಗ, ‘ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡುತ್ತಿರುವ ಕಂಡಕ್ಟರನ್ನು ಹಿಡಿದು ಹೊಡೆಯಿರಿ’ ಎಂದು ಹೇಳಿದ್ದಾರೆ.

‘ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿದ್ದವರಿಗೆ ಸಂಬಳ ಕೊಡಲಾಗಿದೆ. ಚುನಾವಣೆ ನಂತರ ಸಂಬಳ ಏರಿಕೆ ಮಾಡುವುದಾಗಿ ತಿಳಿಸಿದ್ದರೂ ಪ್ರತಿಭಟನೆ ಮಾಡಿದರೆ ಏನು ಮಾಡುವುದು. ಕೆಲಸ ಬಿಟ್ಟರೆ ಇತರರಿಗಾದರೂ ಕೆಲಸ ಸಿಗುತ್ತದೆ’ ಎಂದು ಹೇಳಿರುವುದು ಆಡಿಯೊದಲ್ಲಿದೆ.

21 ನೌಕರರ ವಿರುದ್ಧ ಎಫ್‌ಐಆರ್
ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿದ್ದಕ್ಕೆ ಮುಂಜಾಗ್ರತಾ ಕ್ರಮವಾಗಿ ಮತ್ತು ಶಾಂತಿ ಪಾಲನೆಗಾಗಿ ಕುಷ್ಟಗಿ ಸಾರಿಗೆ ಘಟಕದ 21 ನೌಕರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನೌಕರರನ್ನು ತಾಲ್ಲೂಕು ದಂಡಾಧಿಕಾರಿ ಎದುರು ಹಾಜರುಪಡಿಸಿ, ನಂತರ ಬಿಡಲಾಗಿದೆ ಎಂದು ಕುಷ್ಟಗಿ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ತಿಮ್ಮಣ್ಣ ನಾಯಕ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಎಂ.ಸಿದ್ದೇಶ, ‘ಕೆಲ ನೌಕರರನ್ನು ಪೊಲೀಸರು ಹಾಜರುಪಡಿಸಿದ್ದರು. ಅವರು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಒಪ್ಪಿದ್ದರಿಂದ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿಲ್ಲ’ ಎಂದರು.

‘ಒಬ್ಬರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರೆ, ಉಳಿದವರು ಗೈರಾಗಿದ್ದರು’ ಎಂದು ಘಟಕ ವ್ಯವಸ್ಥಾಪಕ ಸಂತೋಷ್‌ಕುಮಾರ್ ಶೆಟ್ಟಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.