ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಬರಿದಾಗುತ್ತಿರುವ ನಿಡಶೇಸಿ ಕೆರೆಯ ಒಡಲು

Published 21 ಆಗಸ್ಟ್ 2024, 4:29 IST
Last Updated 21 ಆಗಸ್ಟ್ 2024, 4:29 IST
ಅಕ್ಷರ ಗಾತ್ರ

ಕುಷ್ಟಗಿ: ‘ತುಂಗಭದ್ರಾ ಜಲಾಶಯದ ಗೇಟ್‌ ಮುರಿದು ನೀರು ಪೋಲಾದ ಘಟನೆ ಈಗಷ್ಟ ನಡೆದಿದೆ. ಅದೇ ಮಾದರಿಯಲ್ಲಿ ತಾಲ್ಲೂಕಿನ ನಿಡಶೇಸಿ ಕೆರೆಯ ಗೇಟ್‌ ನಿರ್ವಹಣೆಯಿಲ್ಲದೆ ಹಾಳಾಗಿದೆ. ಇದರಿಂದಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ.

ಗೇಟ್‌ ಮೂಲಕ ನೀರು ಹರಿಯುತ್ತಿರುವುದನ್ನು ಕೆಲ ರೈತರು ಗಮನಿಸಿದ್ದಾರೆ. ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ನೀರು ಹಾಳಾಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದರು.

‘ಈವರೆಗೂ ಕೆರೆಯಲ್ಲಿ ನೀರು ಇರಲಿಲ್ಲ. ನಿಡಶೇಸಿ ಕೆರೆಗೆ ಯಲಬುರ್ಗಾ ತಾಲ್ಲೂಕಿನ ಹಳ್ಳಿಗಳು ಜಲಾನಯನ ಪ್ರದೇಶಗಳಾಗಿವೆ. ಶನಿವಾರ ಬೆಳಗಿನ ಜಾವ ಹಿರೇಅರಳಿಹಳ್ಳಿ, ಮಾಟರಾಗಿ, ಕಲಕಬಂಡಿ ಸೇರಿ ಸುತ್ತಲಿನ ಪ್ರದೇಶದಲ್ಲಿ ಸುಮಾರು 145 ಮಿ.ಮೀನಷ್ಟು ಧಾರಾಕಾರ ಮಳೆ ಸುರಿದಿತ್ತು. ಇದರಿಂದ ಹಳ್ಳಗಳಿಗೆ ಪ್ರವಾಹದ ನೀರು ಕೆರೆ ಒಡಲು ಸೇರಿತ್ತು. ಅಲ್ಲದೆ ಇನ್ನೂ ನೀರಿನ ಹರಿವು ಮುಂದುವರಿದಿದೆ. ಆದರೆ, ರೈತರು ಇನ್ನೇನು ಕೆರೆ ತುಂಬಲಿದೆ ಎಂಬ ಆಶಾಭಾವನೆ ಹೊಂದಿರುವಾಗಲೇ ತೆರೆದುಕೊಂಡಿರುವ ಕೆರೆಯ ಮುಖ್ಯಗೇಟ್ ಮೂಲಕ ನೀರು ಹರಿದು ಹೋಗುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಎರಡು ದಿನದಲ್ಲಿ ಕೆರೆ ಖಾಲಿಯಾಗುತ್ತದೆ ಎಂಬ ಆತಂಕ ರೈತರಲ್ಲಿದೆ.

ಆಗಿದ್ದೇನು: ಕಳೆದ ಬೇಸಿಗೆಯಲ್ಲಿ ಕೆರೆ ತಳ ಕಂಡಿತ್ತು. ಅಂಥ ಸಂದರ್ಭದಲ್ಲಿ ಸಣ್ಣಪುಟ್ಟ ದುರಸ್ತಿ, ಗೇಟ್‌ ನಿರ್ವಹಣೆ ಕೆಲಸ ಪೂರೈಸಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಸಣ್ಣ ನೀರಾವರಿ ಇಲಾಖೆಯ ಯಾರೊಬ್ಬರೂ ಇತ್ತ ಕಾಲಿಟ್ಟಿಲ್ಲ. ಕೆರೆ ಏರಿಯಗುಂಟ ಬೃಹತ್‌ ಪ್ರಮಾಣದಲ್ಲಿ ಮುಳ್ಳುಕಂಟಿಗಳು ಬೆಳೆದಿವೆ. ಎಲ್ಲೆಂದರಲ್ಲಿ ಬಿಲಗಳು ಕಾಣಿಸಿಕೊಂಡಿವೆ. ಗೇಟ್‌ ತುಕ್ಕು ಹಿಡಿದು ಹಾಳಾಗಿದ್ದರೂ ದುರಸ್ತಿ ಮಾಡದಿರುವುದು ಇಲಾಖೆ ಬೇಜವಾಬ್ದಾರಿತನದ ಪರಮಾವಧಿ ಎಂದೆ ರೈತರು, ಸಾರ್ವಜನಿಕರು ಆರೋಪಿಸಿದ್ದಾರೆ.

ತುಕ್ಕುಹಿಡಿದು ಹಾಳಾಗಿರುವ ಮುಖ್ಯ ಗೇಟ್
ತುಕ್ಕುಹಿಡಿದು ಹಾಳಾಗಿರುವ ಮುಖ್ಯ ಗೇಟ್
ಎಂಜಿನಿಯರ್‌ಗಳ ಬೇಜವಾಬ್ದಾರಿ ಮಿತಿಮೀರಿದೆ. ನೀರು ಪೋಲಾಗುತ್ತಿದೆ ಎಂಬ ಮಾಹಿತಿ ನೀಡಬೇಕೆಂಬೇಕೆಂದು ಸಹಾಯಕ ಎಂಜಿನಿಯರ್‌ಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ
ಹನುಮಂತ ಮದಲಗಟ್ಟಿ ರೈತ
ಇಲಾಖೆಯಲ್ಲಿ ಎಂಜಿನಿಯರ್‌ಗಳ ಕೊರತೆಯಿದೆ. ಬೇರೆಯವರನ್ನು ಕರೆಯಿಸಿ ನೀರು ಪೋಲಾಗದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಭೇಟಿ ನೀಡುವಂತೆ ಎಕ್ಷಿಕ್ಯೂಟಿವ್ ಎಂಜಿನಿಯರ್‌ಗೆ ಸೂಚಿಸಿದ್ದೇನೆ
- ದೊಡ್ಡನಗೌಡ ಪಾಟೀಲ ಶಾಸಕ

ದಾಖಲೆಯಲ್ಲಷ್ಟೇ ಕೆರೆ ನಿರ್ವಹಣೆ

ಕೆರೆಯ ಸ್ಥಿತಿಗತಿ ಕುರಿತು ಎಂಜಿನಿಯರ್‌ಗಳು ಒಂದು ಬಾರಿಯೂ ಪರಿಶೀಲನೆ ನಡೆಸಿಲ್ಲ. ಆದರೆ ಪ್ರತಿವರ್ಷ ನಿರ್ವಹಣೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ದಾಖಲೆಯಲ್ಲಿ ಖರ್ಚಾಗುತ್ತದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ‘ಪ್ರಜಾವಾಣಿ’ ಸಣ್ಣ ನೀರಾವರಿ ಇಲಾಖೆ ಎಇಇ ಜಿ.ಲೋಕೇಶ್‌ ಅವರನ್ನು ಸಂಪರ್ಕಿಸಿದಾಗ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸಹಾಯಕ ಎಂಜಿನಿಯರ್‌ ಮಹೇಶ್‌ ಎಂಬುವವರಿಗೆ ಸೂಚಿಸಿದ್ದೇನೆ ಎಂದಷ್ಟೇ ಹೇಳಿದರು. ಆದರೆ ತಮಗೆ ಯಾವ ಮಾಹಿತಿಯೂ ಬಂದಿಲ್ಲ ಎಂದೆ ಮಹೇಶ ‘ಪ್ರಜಾವಾಣಿ’ಗೆ ಹೇಳಿದರು.

ಗವಿಶ್ರೀ ಆಶಯಕ್ಕೆ ಪೆಟ್ಟು ನಿರ್ವಹಣೆಯೇ ಇಲ್ಲದೆ ಹಾಳು ಬಿದ್ದಿದ್ದ ಕೆರೆಯನ್ನು ಕೆಲ ವರ್ಷಗಳ ಹಿಂದೆ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕೆಲಸಕಾರ್ಯಗಳೊಂದಿಗೆ ಪುನಃಶ್ಚೇತನಗೊಳಿಸಲಾಗಿತ್ತು. ಕೆರೆಗಳು ಅಭಿವೃದ್ಧಿಗೊಂಡರೆ ರೈತರ ಬಾಳು ಹಸನಾಗುತ್ತದೆ ಎಂಬ ಗವಿಶ್ರೀಗಳು ಕೆರೆ ಅಭಿವೃದ್ಧಿ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದ್ದರು. ಆದರೆ ಅವರ ಆಶಯಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ ಎಂಬ ಅಸಮಾಧಾನ ರೈತರಲ್ಲಿದೆ. ಕೆರೆ ಭರ್ತಿಯಾದರೆ ಸುತ್ತಲಿನ ಹತ್ತಾರು ಕಿ.ಮೀ ವ್ಯಾಪ್ತಿಯಲ್ಲಿನ ಸಹಸ್ರ ಸಂಖ್ಯೆ ಕೊಳವೆಬಾವಿಗಳ ಅಂತರ್ಜಲ ಹೆಚ್ಚಳವಾಗುತ್ತದೆ. ಅರ್ಧ ಮಳೆಗಾಲ ಮುಗಿದರೂ ಕೆರೆ ಬತ್ತಿಹೋಗಿತ್ತು. ಈಗ ಸುದೈವದಿಂದ ಅಪಾರ ನೀರು ಬಂದರೂ ವ್ಯರ್ಥವಾಗುತ್ತಿದೆ. ನೀರು ನಿಲ್ಲಿಸುವುದಕ್ಕೆ ಎಂಜಿನಿಯರ್‌ಗಳು ತಕ್ಷಣ ಮುಂದಾಗಬೇಕು ಎಂದು ರೈತರಾದ ಹನುಮಗೌಡ ಬ್ಯಾಲಿಹಾಳ ವಿರೂಪಾಕ್ಷಪ್ಪ ಇತರರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT