ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಒಂದೇ ದಿನ 16 ಜನರಿಗೆ ಸೋಂಕು

ಮಾರುಕಟ್ಟೆಯಲ್ಲಿ ಗಿಜಿಗಿಡುತ್ತಿರುವ ಜನ, ವ್ಯಕ್ತಿಗತ ಅಂತರ ಲೆಕ್ಕಕ್ಕಿಲ್ಲ
Last Updated 13 ಜುಲೈ 2020, 19:01 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಅಗ್ನಿಶಾಮಕ ಠಾಣೆಯ ಓರ್ವ ಸಿಬ್ಬಂದಿ ಸೇರಿ ತಾಲ್ಲೂಕಿನಲ್ಲಿ ಸೋಮವಾರ ಒಂದೇ ದಿನ 16 ಜನರಲ್ಲಿ ಕೋವಿಡ್ ದೃಢಪಟ್ಟಿದೆ.

ಸೋಂಕಿತರಲ್ಲಿ 7 ಜನ ಬೆಂಗಳೂರಿನಿಂದ ಬಂದವರು. ತಲಾ ಒಬ್ಬರು ಗೋವಾ, ಗುಜರಾತ್‌ನಿಂದ ಬಂದಿದ್ದಾರೆ. ನವಲಹಳ್ಳಿಯ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 4, ಹುಲ್ಸಗೇರಾ ಗ್ರಾಮದ ಮೂರು ವರ್ಷದ ಗಂಡುಮಗು, ಪಟ್ಟಣದ ಅಗ್ನಿಶಾಮಕ ಠಾಣೆಯ ಓರ್ವ ಸಿಬ್ಬಂದಿಗೂ ಸೋಂಕು ತಗುಲಿದೆ.

ತಾವರಗೇರಾ, ಮುದೇನೂರು, ಕೂಡ್ಲೂರು, ಕೆ.ಬೋದೂರು, ಕೆ.ಬೋದೂರು, ಗರ್ಜನಾಳ, ಕಳಮಳ್ಳಿ ಮತ್ತು ಕಳಮಳ್ಳಿ ತಾಂಡಾ, ಹನುಮನಾಳ, ಅಂಟರಠಾಣಾ, ಮಾಲಗಿತ್ತಿ ಗ್ರಾಮಗಳಲ್ಲಿ ತಲಾ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಕುಷ್ಟಗಿಯ 33 ವರ್ಷದ ಮತ್ತು ಹನಮನಾಳದ 71 ವರ್ಷದ ವ್ಯಕ್ತಿಗಳ ಪ್ರಯಾಣದ ವಿವರ ಲಭ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಅಗ್ನಿಶಾಮಕ ಠಾಣೆಯಲ್ಲಿನ ಎಲ್ಲರ ಗಂಟಲುದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಸದ್ಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇನ್ನೂ ಕೆಲವರ ವರದಿ ಬರಬೇಕಿದೆ. ಠಾಣೆಯ ಎಲ್ಲ ಸಿಬ್ಬಂದಿ ಸೋಂಕಿತ ಸಿಬ್ಬಂದಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿದ್ದರಿಂದ ಮತ್ತೊಮ್ಮೆ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಠಾಣೆ ಮೂಲಗಳು ತಿಳಿಸಿವೆ. ಅಲ್ಲದೆ, ಅಗ್ನಿಶಾಮಕ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸಂಬಂಧಿಸಿದ ಪಟ್ಟಣ ಮತ್ತು ಗ್ರಾಮಗಳಲ್ಲಿ ಅಗತ್ಯ ಮುಂಜಾಗ್ರತೆಗಾಗಿ ಸೋಂಕಿತ ವ್ಯಕ್ತಿಗಳ ಮನೆಯ ಸುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್‌ ವಲಯವನ್ನಾಗಿ ಘೋಷಿಸಿ, ಸೋಂಕು ನಿವಾರಕ ದ್ರಾವಣ ಸಿಂಡಿಸಲಾಗಿದೆ. ಉಳಿದ ಸೋಂಕಿತ ವ್ಯಕ್ತಿಗಳ ಪ್ರಥಮ, ದ್ವಿತೀಯ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಕಲೆಹಾಕುತ್ತಿದ್ದಾರೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ತಿಳಿಸಿದರು.

ಲೆಕ್ಕಕ್ಕಿಲ್ಲದ ಅಂತರ: ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದರೂ ಸಾರ್ವಜನಿಕರು ಅಂತರ ಕಾಪಾಡುವುದು ಸೇರಿದಂತೆ ಯಾವುದೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಕಂಡು ಬರುತ್ತಿದೆ. ಎಲ್ಲೆಂದರಲ್ಲಿ ಜನರು ಗುಂಪುಗೂಡುವುದು ಸಾಮಾನ್ಯಾಗಿದೆ.

ತಹಶೀಲ್ದಾರ್‌ ಕಚೇರಿ, ಬ್ಯಾಂಕ್‌ಗಳು, ಮಾರುಕಟ್ಟೆ, ವಿವಿಧ ಅಂಗಡಿಗಳಲ್ಲಿ ಸೋಮವಾರ ನೂಕುನುಗ್ಗಲು ಕಂಡುಬಂತು. ಸೋಮವಾರ ಸಂತೆ ನಡೆಸಿದರೂ ಯಾರೂ ಕೇಳುವವರಿರಲಿಲ್ಲ. ತರಕಾರಿ ಮಾರುಕಟ್ಟೆ, ಮಾಂಸ ಮಾರಾಟ ಸ್ಥಳ, ಕಿರಾಣಿ, ಬಟ್ಟೆ, ಚಪ್ಪಲಿ ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು.

ಗುಂಪಿನಲ್ಲಿ ಶಾಸಕ: ಶಾಸಕ ಅಮರೇಗೌಡ ಬಯ್ಯಾಪುರ ಅವರೂ ಅಂತರ ಕಾಯ್ದುಕೊಳ್ಳದೆ ಗುಂಪಿನ ಮಧ್ಯೆ ಇದ್ದುದು ಸೋಮವಾರ ತಹಶೀಲ್ದಾರ್‌ ಕಚೇರಿ ಬಳಿ ಕಂಡುಬಂದಿತು.

ನೂರಾರು ಜನರು ತಹಶೀಲ್ದಾರ್ ಕಚೇರಿಯ ಒಳಗೆ ನುಗ್ಗುತ್ತಿದ್ದುದಕ್ಕೆ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಅಂತರ ಕಾಪಾಡದೆ ಧರಣಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT