ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಪ್ರಭಾವಿಗಳ ದಾರಿಗಳಷ್ಟೇ ಅಭಿವೃದ್ಧಿ: ಆರೋಪ

Published 9 ಮಾರ್ಚ್ 2024, 13:36 IST
Last Updated 9 ಮಾರ್ಚ್ 2024, 13:36 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಪುರಸಭೆ ವ್ಯಾಪ್ತಿಯ 4ನೇ ವಾರ್ಡ್‌ನ ವಿಷ್ಣುತೀರ್ಥ ನಗರದಲ್ಲಿ ಬಹುತೇಕ ಕಡೆ ರಸ್ತೆ, ಚರಂಡಿ ಇಲ್ಲ. ಮೂಲ ಸೌಕರ್ಯ ಕಲ್ಪಿಸುವಲ್ಲಿ ಪುರಸಭೆ ವಿಫಲವಾಗಿದೆ. ಇಲ್ಲಿಯ ನಿವಾಸಿಗಳ ಸ್ಥಿತಿ ಅರಣ್ಯ ರೋದನವಾಗಿದೆ. ಪುರಸಭೆ ಅಧಿಕಾರಿಗಳು, ವಾರ್ಡ್‌ನ ಸದಸ್ಯರು ಈ ಸಮಸ್ಯೆಗೆ ಸ್ಪಂದಿಸದ ಕಾರಣ ಜನರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ.

ಬಡಾವಣೆಗಳು ಅಭಿವೃದ್ಧಿಗೊಂಡು ದಶಕಗಳು ಕಳೆದರೂ ಬಹುತೇಕ ಪ್ರದೇಶಗಳು ಇನ್ನೂ ಅಭಿವೃದ್ಧಿಗೊಂಡಿಲ್ಲ. ಕೊಪ್ಪಳ ಮುಖ್ಯ ರಸ್ತೆಯಿಂದ ಪಾಲನಕರ್ ಬಡಾವಣೆಯಲ್ಲಿ ಮಕ್ಕಳ ಉದ್ಯಾನ ನಿರ್ಮಾಣವಾಗಿದ್ದು, ಅದರ ಪಕ್ಕದಲ್ಲಿ ಮಣ್ಣಿನ ರಸ್ತೆಗಳು ಕಂಡುಬರುತ್ತಿವೆ. ಉತ್ತಮ ರಸ್ತೆ ಇಲ್ಲ. ಚರಂಡಿಗಳೂ ಇಲ್ಲ. ಜನರಿಗೆ ನಡೆದಾಡಲು ದಾರಿ ಇಲ್ಲದಿರುವುದು ಅದೇ ರೀತಿ ಮನೆಗಳ ಬಚ್ಚಲು ನೀರು ಮಣ್ಣಿನ ರಸ್ತೆಯಲ್ಲಿನ ಗುಂಡಿಗಳಲ್ಲಿ ಮಡುಗಟ್ಟುವುದು ಸಾಮಾನ್ಯ.

ಇದು ಬೇಸಿಗೆಯಲ್ಲಿನ ಸ್ಥಿತಿ. ಮಳೆಗಾಲ ಬಂದರೆ ಇಲ್ಲಿಯ ಜನರ ಸ್ಥಿತಿ ಅಯೋಮಯ. ಕಂದಕೂರು ಎಂಬುವವರ ಮನೆ ಬಳಿ ರಸ್ತೆ ಅಭಿವೃದ್ಧಿಗೊಂಡಿಲ್ಲ. ಮಳೆ ನೀರು ಬಿರುಸಿನಿಂದ ಹರಿದು ಕೊರಕಲು ಉಂಟಾಗುತ್ತವೆ. ರಾತ್ರಿ ವೇಳೆ ವಿದ್ಯುತ್‌ ಹೋದರಂತೂ ಜನ ಮನೆಬಿಟ್ಟು ಹೊರಗೆ ಬರುವುದಕ್ಕೂ ಅಸಾಧ್ಯವಾಗುತ್ತದೆ ಎಂಬ ಅಳಲು ಅಲ್ಲಿಯ ನಿವಾಸಿಗಳದ್ದು.

ಇದಕ್ಕೆ ಅಪವಾದ ಎಂದರೆ ಕೊಪ್ಪಳ ರಸ್ತೆಯಿಂದ ಮಾಜಿ ಶಾಸಕರ ಮನೆಗೆ ಹೋಗುವ ದಾರಿಯನ್ನು ಡಾಂಬರೀಕರಣ ಮಾಡಲಾಗಿದೆ. ಅದಕ್ಕೆ ಹೊಂದಿಕೊಂಡಿರುವ ಮೂರು ಕ್ರಾಸ್‌ಗಳ ರಸ್ತೆಗಳನ್ನೂ ಡಾಂಬರೀಕರಣದಿಂದ ಗಟ್ಟಿಗೊಳಿಸಲಾಗಿದೆ. ಕಾರಣ ಇಷ್ಟೇ ಈ ಪ್ರದೇಶದಲ್ಲಿ ಈ ಹಿಂದೆ ಪುರಸಭೆ ಸದಸ್ಯರು ವಾಸಿಸುತ್ತಿದ್ದುದು ಮತ್ತು ಇನ್ನೂ ಪ್ರಭಾವಿ ಎಂದುಕೊಂಡಿರುವ ಕೆಲ ವ್ಯಕ್ತಿಗಳ ಮನೆ ಇರುವುದು. ಈ ಕಾರಣಕ್ಕೆ ಮೂರೂ ರಸ್ತೆಗಳು ಗುಣಮಟ್ಟದಿಂದ ಕೂಡಿವೆ. ಇದು ಮಿತಿ ಮೀರಿದ ತಾರತಮ್ಯ ನೀತಿಯಾಗಿದೆ. ಏಕೆ ಅಲ್ಲಿಯ ನಿವಾಸಿಗಳಷ್ಟೇ ಪುರಸಭೆಗೆ ಕರ ಪಾವತಿಸುತ್ತಾರೆಯೆ? ಎಂದು ಅಲ್ಲಿಯ ನಿವಾಸಿಗಳಾದ ಬಸವರಾಜ, ಕಳಕಪ್ಪ ಹಾಗೂ ಇತರರು ಅಸಮಾಧಾನ ಹೊರಹಾಕಿದರು.

ಈ ಕುರಿತು ಮಾಹಿತಿಗೆ ಸಂಪರ್ಕಿಸಿದರೆ ವಾರ್ಡ್‌ನ ಸದಸ್ಯ ವಸಂತ ಮೇಲಿನಮನಿ ಅವರ ಮೊಬೈಲ್ ಸ್ವಿಚ್ಡ್‌ ಆಫ್‌ ಆಗಿತ್ತು. ಆದರೆ ಪರಿಶೀಲಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಧರಣೇಂದ್ರಕುಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT