ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಪಾರದರ್ಶಕ ಮತದಾನಕ್ಕೆ ಸಕಲ ಸಿದ್ಧತೆ: ನಲಿನ್‌ ಅತುಲ್‌

Published 5 ಮೇ 2024, 6:22 IST
Last Updated 5 ಮೇ 2024, 6:22 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನ ಯಾವ ಆಮಿಷಕ್ಕೂ ಒಳಗಾಗದೆ ಮುಕ್ತವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಲಿನ್ ಅತುಲ್‌ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ಮತದಾನ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು ‘ಅಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರ ತನಕ ಮತದಾನ ಜರುಗಲಿದ್ದು, ಮೇ 6ರಂದು ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕಾರ್ಯ ಮತ್ತು ಜೂನ್ 4ರಂದು ಮತ ಎಣಿಕೆ ನಡೆಯಲಿದೆ’ ಎಂದು ತಿಳಿಸಿದರು.

‘ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ, ಕನಕಗಿರಿ, ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಸಿಂಧನೂರು, ಮಸ್ಕಿ ಮತ್ತು ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳಲ್ಲಿ 2,045 ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗಲು ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿಕಲಚೇತನರಿಗೆ ರೇಲಿಂಗ್ ಸಹಿತ ರಾಂಪ್ ವ್ಯವಸ್ಥೆ, ನೆರಳು ಹಾಗೂ ವಿದ್ಯುತ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮತದಾನದ ಕರ್ತವ್ಯಕ್ಕಾಗಿ 2,435 ಪಿಆರ್‌ಒ, 2,435 ಎಪಿಆರ್‌ಒ, 4869 ಪಿಒ ಹಾಗೂ 248 ಎಂಒಗಳನ್ನು ನೇಮಿಸಲಾಗಿದೆ. ಮತದಾನ ಸಂಬಂಧ 4,990 ಬ್ಯಾಲೆಟ್ ಯುನಿಟ್‌ಗಳು, 2,657 ಕಂಟ್ರೋಲ್ ಯುನಿಟ್‌ಗಳು ಹಾಗೂ 2755 ವಿವಿಪ್ಯಾಟ್‌ಗಳು ಸೇರಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ. ಮತದಾನ ಪ್ರಕ್ರಿಯೆ ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಮೇ 5ರ ಸಂಜೆ 6 ಗಂಟೆಯಿಂದ 7ರ ರಾತ್ರಿ 12ರ ತನಕ ಡ್ರೈ ಡೇ ಘೋಷಣೆ ಮಾಡಲಾಗಿದೆ. ನಿಷೇಧಾಜ್ಞೆಯೂ ಜಾರಿಯಲ್ಲಿರುತ್ತದೆ’ ಎಂದು ವಿವರಿಸಿದರು.

‘ಆಯೋಗವು ಅಂಗವಿಕಲರು ಮತ್ತು 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲಿನವರಲ್ಲಿ 1304 (ಒಟ್ಟು 1361), ಅಂಗವಿಕಲರು 563 (ಒಟ್ಟು 576), ಅಗತ್ಯ ಸೇವೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 16 ಇಲಾಖೆಯ 853 ಸಿಬ್ಬಂದಿ ಮತದಾರರ ಪೈಕಿ 431 ಮತದಾರರು ಮತ ಚಲಾಯಿಸಿದ್ದಾರೆ’ ಎಂದರು.

ಜಪ್ತಿ: ಮಾದರಿ ನೀತಿ ಸಂಹಿತೆ ಜಾರಿಯ ಅವಧಿಯಿಂದ ಇದುವರೆಗೆ ₹1.02 ಕೋಟಿ ಜಪ್ತಿ ಮಾಡಲಾಗಿದ್ದು, ದಾಖಲೆಗಳ ಪರಿಶೀಲನೆ ನಂತರ ₹69 ಲಕ್ಷ ಬಿಡುಗಡೆ ಮಾಡಲಾಗಿದೆ. ಅಬಕಾರಿ ಇಲಾಖೆಯಿಂದ ₹2.44 ಕೋಟಿ ಮೌಲ್ಯದ 60,742 ಲೀಟರ್‌ ಮದ್ಯ ಜಪ್ತಿಯಾಗಿದೆ. ಪೊಲೀಸ್‌ ಇಲಾಖೆಯಿಂದ ₹1.68 ಲಕ್ಷ ಮೌಲ್ಯದ 370 ಲೀಟರ್‌ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದ್ದು ನೀತಿಸಂಹಿತೆ ಉಲ್ಲಂಘನೆಯಿಂದಾಗಿ ಒಟ್ಟು 44 ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು.

ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ರಾಹುಲ್ ರತ್ನಂ ಪಾಡೆಯ ಮಾತನಾಡಿ ‘2024ರ ಲೋಕಸಭಾ ಚುನಾವಣೆಯಲ್ಲಿ ಶೇ.81ಕ್ಕೂ ಹೆಚ್ಚು ಮತದಾನವಾಗಬೇಕು ಎನ್ನುವ ಗುರಿ ಹೊಂದಲಾಗಿದ್ದು, ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ’ ಎಂದರು.

‘2019ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಡಿಮೆ ಮತದಾನ ದಾಖಲಾದ 610 ಮತಗಟ್ಟೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಮಹಿಳಾ ಮತದಾರರ ಮತದಾನ ಪ್ರತಿಶತ ಹೆಚ್ಚಿಸಲು ಅಂಗನವಾಡಿ, ಆಶಾ ಕಾರ್ಯಕರ್ತರು ಮತ್ತು ಮಹಿಳಾ ಬಿ.ಇಡಿ ಕಾಲೇಜು ವಿದ್ಯಾರ್ಥಿನಿಯರಿಂದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವಾಕ್‌ಥಾನ್ ಜಾಗೃತಿ ನಡೆಸಲಾಗಿದೆ‘ ಎಂದು ಮಾಹಿತಿ ನೀಡಿದರು.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಚುನಾವಣಾ ಶಾಖೆಯ ನಾಗರಾಜ, ಶಿವು, ಪ್ರಸನ್ನ ಪಾಲ್ಗೊಂಡಿದ್ದರು.

ಇಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯ ನಾಳೆ ಮನೆಮನೆಗೆ ಪ್ರಚಾರಕ್ಕೆ ಅವಕಾಶ ಕೊಪ್ಪಳದ ಗವಿಸಿದ್ಧೇಶ್ವರ ಪದವಿ ಮತಯಂತ್ರಗಳ ಸಂಗ್ರಹ
ಅಂಕಿ ಅಂಶ ಮಾಹಿತಿ
919499 ಪುರುಷ ಮತದಾರರು 946763 ಮಹಿಳಾ ಮತದಾರರು 135 ಲಿಂಗತ್ವ ಅಲ್ಪಸಂಖ್ಯಾತರು 1866397 ಒಟ್ಟು ಮತದಾರರು 2045 ಒಟ್ಟು ಮತಗಟ್ಟೆಗಳು 1024 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ
ಮತದಾನ ಮಾಡಲು ಹಲವು ದಾಖಲೆ
ಮತದಾರರ ಪಟ್ಟಿಯಲ್ಲಿ ನೋಂದಾಯಿತ ಮತದಾರರು ತಮ್ಮ ಭಾವಚಿತ್ರವಿರುವ ಗುರುತಿನಚೀಟಿ ಹೊರತುಪಡಿಸಿ ಹಲವು ದಾಖಲೆಗಳನ್ನು ತರಬಹುದು. ಆಧಾರ್‌ಕಾರ್ಡ್ ನರೇಗಾ ಜಾಬ್‌ಕಾರ್ಡ್ ಬ್ಯಾಂಕ್‌ ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್‌ಬುಕ್ ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್ ಚಾಲನಾ ಪರವಾನಗಿ ಅಂಗವಿಕಲರ ಗುರುತಿನ ಚೀಟಿ ಪ್ಯಾನ್‌ಕಾರ್ಡ್ ಎಂ.ಪಿ.ಆರ್ ಅಡಿಯಲ್ಲಿ ಆರ್.ಜಿ.ಐ ನೀಡಿರುವ ಸ್ಮಾರ್ಟ್‌ ಕಾರ್ಡ್‌ ಭಾರತೀಯ ಪಾಸ್ ಪೋರ್ಟ್ ಭಾವಚಿತ್ರವಿರುವ ಪಿಂಚಣಿ ದಾಖಲೆ ಕೇಂದ್ರ/ರಾಜ್ಯ/ಪಿ.ಎಸ್.ಯು  ಸೇವಾ ಗುರುತಿನ ಚೀಟಿ ಸಂಸದ ಶಾಸಕ ಹಾಗೂ ವಿಧಾನಪರಿಷತ್‌ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿಯೂ ಮತದಾನ ಮಾಡಬಹುದು.
ಧ್ವನಿವರ್ಧಕ ನಿಷೇಧಿಸಿ ಆದೇಶ
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ (ಇಂದು ಸಂಜೆ 6 ಗಂಟೆಯಿಂದ) ಚುನಾವಣೆ ಪ್ರಚಾರ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಬಳಸಲಾಗುವ ಧ್ವನಿವರ್ಧಕಗಳ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಿಬ್ಬಂದಿ ಅನುಕೂಲಕ್ಕೆ ಹೆಲ್ತ್‌ ಶೆಲ್ಟರ್
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿರುವ ಕಾರಣ ಚುನಾವಣಾ ಸಿಬ್ಬಂದಿ ಮತ್ತು ಮತದಾರರಿಗೆ ನೆರಳಿನ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು ಸಿಬ್ಬಂದಿಗೆ ಹೆಲ್ತ್‌ ಶೆಲ್ಟರ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಎಲ್ಲಾ ಮಸ್ಟರಿಂಗ್ ಕೇಂದ್ರಗಳಲ್ಲಿ ಹೆಲ್ತ್ ಶೆಲ್ಟರ್‌ಗಳನ್ನು ಸ್ಥಾಪಿಸಿ ಪ್ರತಿ ಮತಗಟ್ಟೆಗಳಿಗೆ ಆರೋಗ್ಯ ಸಂಬಂಧಿತ ಸಾಮಗ್ರಿಗಳ ಕಿಟ್ ನೀಡಲಾಗುತ್ತಿದೆ. ಮಸ್ಟರಿಂಗ್ ಕೇಂದ್ರಗಳಲ್ಲಿ ಮತ್ತು ಮತದಾನದ ದಿನದಂದು ಮತದಾನ ಸಿಬ್ಬಂದಿ ಮತ್ತು ಪೊಲೀಸರಿಗೆ ಊಟದ ವ್ಯವಸ್ಥೆಯೂ ಇರುತ್ತದೆ. ವೈದ್ಯಕೀಯ ಕಿಟ್‌ನಲ್ಲಿ ಔಷಧಿ ಒಆರ್‌ಎಸ್‌ ಎಜರ್ಜಿ ಪಾನೀಯಾ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT