ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ | ಜಿಲ್ಲೆಗೆ ರಾಜ್ಯ ನಾಯಕರು; ಕಾಂಗ್ರೆಸ್‌ ಹುಮ್ಮಸ್ಸು

ಇಂದು ಕುಷ್ಟಗಿ, ನಾಳೆ ಗಂಗಾವತಿಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪ್ರಚಾರ ಸಭೆ
Published 29 ಏಪ್ರಿಲ್ 2024, 6:48 IST
Last Updated 29 ಏಪ್ರಿಲ್ 2024, 6:48 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯ ಮತದಾನಕ್ಕೆ ಒಂದು ವಾರ ಬಾಕಿ ಉಳಿದಿದ್ದು ಈ ಮಹತ್ವದ ಅವಧಿಯಲ್ಲಿಯೇ ಮತಬುಟ್ಟಿ ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್‌ ಹಾಗೂ ಬಿಜೆಪಿ ಅಂತಿಮ ಕಸರತ್ತು ನಡೆಸುತ್ತಿವೆ. ಎರಡು ದಿನ ಜಿಲ್ಲೆಯ ಎರಡು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರಚಾರ ಸಭೆಗಳನ್ನು ನಡೆಸಲಿದ್ದು, ಇದು ಕಾಂಗ್ರೆಸ್‌ ಪಾಳಯದಲ್ಲಿ ಹುಮ್ಮಸ್ಸು ಮೂಡಿಸಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ದೇಶದ ಮೂರನೇ ಮತ್ತು ರಾಜ್ಯದ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಸುವ ವೇಳೆ ಶಾಸಕ ಲಕ್ಷ್ಮಣ ಸವದಿ, ಎಚ್‌.ಕೆ. ಪಾಟೀಲ ಬಂದು ಪ್ರಚಾರ ಸಭೆಗಳನ್ನು ನಡೆಸಿದ್ದರು. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಚಾರ ಮಾಡಿದ್ದರು.

ಬಳಿಕ ಅಭ್ಯರ್ಥಿಗಳ ಪರವಾಗಿ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ನಾಯಕರು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಯ ಐದು, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಮತ್ತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಸಾಮಾಜಿಕ ತಾಣಗಳನ್ನೂ ಬಳಸಿಕೊಂಡು ಕಡಿಮೆ ಅವಧಿಯಲ್ಲಿ ಜನರನ್ನು ತಲುಪಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಕುಷ್ಟಗಿಗೆ ಸಿ.ಎಂ : ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿಂಧನೂರಿನಲ್ಲಿ ಭಾನುವಾರ ಪ್ರಚಾರ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕುಷ್ಟಗಿಯಲ್ಲಿ ರಾಜಶೇಖರ ಹಿಟ್ನಾಳ ಪರ ಮತಯಾಚಿಸುವರು.

ಪ್ರಜಾಧ್ವನಿ–2ರ ಕಾರ್ಯಕ್ರಮದ ಭಾಗವಾಗಿ ಅವರು ಮಂಗಳವಾರ ಗಂಗಾವತಿಯಲ್ಲಿಯೂ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ವ್ಯಾಪ್ತಿಯ ಎರಡು ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕಡೆ ಆಯೋಜನೆಯಾದ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸಭೆ ಕಾಂಗ್ರೆಸ್‌ ಪಾಳೆಯದಲ್ಲಿ ಹುಮ್ಮಸ್ಸು ಮೂಡಿಸಿವೆ.

ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ತವರು ಕ್ಷೇತ್ರದಲ್ಲಿ ಈ ಪ್ರಚಾರ ಸಭೆ ಜರುಗಲಿದೆ. ಅವರು ಪಕ್ಷದ ಜಿಲ್ಲಾಧ್ಯಕ್ಷರಾದ ಬಳಿಕ ಮುಖ್ಯಮಂತ್ರಿ ಕಾರ್ಯಕ್ರಮ ಆಯೋಜನೆಯಾಗಿದ್ದು ಇದೇ ಮೊದಲು. ಇನ್ನುಳಿದ ಅವಧಿಯಲ್ಲಿ ಮತ್ತಷ್ಟು ನಾಯಕರನ್ನು ಆಹ್ವಾನಿಸಿ ಅವರಿಂದ ಮತಬೇಟೆಯಾಡಲು ಪಕ್ಷ ಸಿದ್ಧತೆ ಮಾಡಿಕೊಂಡಿದೆ.

ಬಿಜೆಪಿಯೂ ಕಸರತ್ತು: ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ನಾಯಕರಾದ ಸಿ.ಟಿ. ರವಿ, ಬಿ. ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಬಂದು ಪ್ರಚಾರ ಸಭೆ ಮಾಡಿದ್ದರು.

ಬಳಿಕ ರಾಜ್ಯಮಟ್ಟದ ಯಾವ ನಾಯಕರೂ ಕ್ಷೇತ್ರಕ್ಕೆ ಬಂದಿಲ್ಲ. ಹೀಗಾಗಿ ಕೊನೆಯ ಒಂದು ವಾರದಲ್ಲಿ ರಾಜ್ಯದ ನಾಯಕರನ್ನು ಕ್ಷೇತ್ರಕ್ಕೆ ಕರೆಯಿಸಿ ಮತಬೇಟೆಯಾಡಿಸುವ ಲೆಕ್ಕಾಚಾರದಲ್ಲಿ ಬಿಜೆಪಿಯಿದ್ದು, ಮೂಲಗಳ ಮಾಹಿತಿ ಪ್ರಕಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಜಿಲ್ಲೆಗೆ ಬರಲಿದ್ದಾರೆ ಎಂದು ಗೊತ್ತಾಗಿದೆ.

ಕೊಪ್ಪಳ ನಗರದಲ್ಲಿ ಸಜ್ಜಗೊಂಡಿರುವ ಸಖಿ ಮತಗಟ್ಟೆ ಕೇಂದ್ರದ ನೋಟ
ಕೊಪ್ಪಳ ನಗರದಲ್ಲಿ ಸಜ್ಜಗೊಂಡಿರುವ ಸಖಿ ಮತಗಟ್ಟೆ ಕೇಂದ್ರದ ನೋಟ

ಮತದಾನಕ್ಕೆ ಅಣಿಯಾಗುತ್ತಿದೆ ಜಿಲ್ಲಾಡಳಿತ

ಮತದಾರರ ಮನೆ ಹಾಗೂ ಮನ ತಲುಪಲು ಅಭ್ಯರ್ಥಿಗಳು ರಾಜಕೀಯ ಪಕ್ಷಗಳು ಭಾರಿ ಕಸರತ್ತಿನಲ್ಲಿ ತೊಡಗಿದ್ದರೆ ಇನ್ನೊಂದೆಡೆ ಜಿಲ್ಲಾಡಳಿತ ಮತದಾನವನ್ನು ಸುಸೂತ್ರವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತಗಟ್ಟೆಗಳನ್ನು ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಗುತ್ತಿದೆ. ಜಿಲ್ಲೆಯ ಕುಷ್ಟಗಿ 367 ಕನಕಗಿರಿ 266 ಗಂಗಾವತಿ 235 ಯಲಬುರ್ಗಾ 256 ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 290 ಮತಗಟ್ಟೆಗಳಿವೆ. ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲು ಜಿಲ್ಲೆಯಾದ್ಯಂತ ಸ್ವೀಪ್‌ ಚಟುವಟಿಕೆಗಳನ್ನು ನಡೆಸುತ್ತಿದೆ. ವರ್ಲಿ ಪೇಂಟಿಂಗ್‌ ಆಕರ್ಷಕ ಛಾಯಾಚಿತ್ರಗಳನ್ನು ಗೋಡೆಯ ಮೇಲೆ ಬರೆಯಿಸುವ ಮೂಲಕ ಮತದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ‘ಮೇ 7ರಂದು ನಡೆಯುವ ಮತದಾನದಂದು ದೇಶದ ಉತ್ತಮ ಭವಿಷ್ಯಕ್ಕಾಗಿ ನಮ್ಮ ಅಮೂಲ್ಯ ಅವಕಾಶ ಬಳಸಿಕೊಳ್ಳಬೇಕು. ಮತದಾನದ ಹಕ್ಕನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ನಲಿನ್‌ ಅತುಲ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT