ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ನುಗ್ಗೆಯಿಂದ ಲಾಕ್‌ಡೌನ್‌ನಲ್ಲೂ ಹಿಗ್ಗಿದ ರೈತ

70 ಟನ್‌ಗಿಂತ ಅಧಿಕ ನುಗ್ಗೆ ರಫ್ತು
Last Updated 17 ಮೇ 2020, 20:00 IST
ಅಕ್ಷರ ಗಾತ್ರ

ಗಂಗಾವತಿ: ಭರಪೂರ ನುಗ್ಗೆ ಬೆಳೆದಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅರಳಹಳ್ಳಿ ಗ್ರಾಮದ ರೈತರೊಬ್ಬರು ಲಾಕ್‌ಡೌನ್ ನಡುವೆಯೂ ಲಾಭ ಕಂಡಿದ್ದಾರೆ. ರೈತ ಬಸವರಾಜ್‌ ಅವರಿಗೆ ಲಕ್ಷಗಟ್ಟಲೇ ಆದಾಯ ತಂದುಕೊಡುವಲ್ಲಿ ತೋಟಗಾರಿಕೆ ಇಲಾಖೆಯೂ ಪ್ರಮುಖ ಪಾತ್ರ ವಹಿಸಿದೆ.

ಕೇಸರಹಟ್ಟಿ ಗ್ರಾಮದ ಶರಣಪ್ಪ ಎಂಬುವವರಿಗೆ ಸೇರಿದ ಐದು ಎಕರೆ ಭೂಮಿಯನ್ನು ಗುತ್ತಿಗೆ ಪಡೆದ ರೈತ ಬಸವರಾಜ್ ಅವರು ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಪಿಕೆಎಂ-ಒನ್ ಎಂಬ ತಳಿ ನಾಟಿ ಮಾಡಿದ್ದರು. ಹನಿ ನೀರಾವರಿ ಪದ್ಧತಿ ಅಳವಡಿಸಿದಲ್ಲದೇ ಸಾವಯವ ಗೊಬ್ಬರದ ಮೂಲಕ ನುಗ್ಗೆ ಬೆಳೆದಿದ್ದರು.

ನುಗ್ಗೆ ಇಳುವರಿ ಬಂದ ಸಮಯದಲ್ಲೇ ಲಾಕ್‌ಡೌನ್ ಜಾರಿಯಾಯಿತು. ಹಲವು ರೈತರು ಮಾರುಕಟ್ಟೆ ಇಲ್ಲದೆ ಸಂಕಷ್ಟ ಅನುಭವಿಸಿದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಸವರಾಜ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇಲಾಖೆಯ ಅಧಿಕಾರಿಗಳು ನೆರವಿಗೆ ಧಾವಿಸಿದಲ್ಲದೇ ಮಾರುಕಟ್ಟೆಯ ವ್ಯವಸ್ಥೆ ಮಾಡಿದರು.

ಲಾಕ್‌ಡೌನ್‌ನಲ್ಲಿಯೇ 70 ಟನ್ ನುಗ್ಗೆ ಮಾರಾಟ: ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನೆರವಿನಿಂದ ಬೆಳಗಾವಿ, ಬೆಂಗಳೂರು, ರಾಯಚೂರು, ಸಿಂಧನೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಗೆ 70 ಟನ್‌ಗಿಂತ ಅಧಿಕ ನುಗ್ಗೆ ರಫ್ತು ಮಾಡಿದ್ದಾರೆ.

’ಡಿಸೆಂಬರ್ ಹಾಗೂ ಜನವರಿಯಲ್ಲಿ ಕೆ.ಜಿಗೆ ₹60 ರಿಂದ ₹70 ರೂಪಾಯಿಯಂತೆ ನುಗ್ಗೆ ಮಾರಾಟ ಮಾಡಿದ್ದೆವು. ಸದ್ಯ ಕೆ.ಜಿ.ಗೆ ₹25 ರಿಂದ ₹30 ರೂಪಾಯಿಗೆ ಮಾರಾಟ ಮಾಡಿದೆವು. ಇದರಿಂದ ಏಳರಿಂದ ಎಂಟು ಲಕ್ಷ ಆದಾಯ ಸಿಕ್ಕಿದೆ. ಕೊರೊನಾದಿಂದ ನಮಗೆ ಲಾಭವಾಗಿದೆ ಹೊರತು ನಷ್ಟವಾಗಿಲ್ಲ‘ ಎನ್ನುತ್ತಾರೆ ರೈತ ಬಸವರಾಜ್.

*
ಕೊರೊನಾ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಇರದೇ ಇದ್ದಾಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೆರವಿಗೆ ಧಾವಿಸಿ ಮಾರುಕಟ್ಟೆ ಒದಗಿಸಿದ ಪರಿಣಾಮ ಆಧಿಕ ಲಾಭ ಗಳಿಸಲು ಸಾಧ್ಯವಾಗಿದೆ.
-ಬಸವರಾಜ್, ರೈತ ಅರಳಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT