ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಾ ನಿಗಮ ಸ್ಥಾಪನೆಗೆ ವಿರೋಧ

ಜಿಲ್ಲೆಯ ವಿವಿಧೆಡೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ: ಮನವಿ ಸಲ್ಲಿಕೆ
Last Updated 20 ನವೆಂಬರ್ 2020, 2:31 IST
ಅಕ್ಷರ ಗಾತ್ರ

ಕೊಪ್ಪಳ: ನೆರೆ ಸಂತ್ರಸ್ತರ, ಕೋವಿಡ್‌ನಿಂದ ಬಳಲಿದ, ಶೋಷಿತರ ನೋವಿಗೆ ಸರ್ಕಾರ ಸ್ಪಂದಿಸದೇ ಮರಾಠಿಗರ ಓಲೈಕೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಕರವೇ (ಸ್ವಾಭಿಮಾನಿ ಬಣ) ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಾಡು, ನುಡಿ, ಜಲ ವಿಚಾರವಾಗಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ರೈತ, ಕಾರ್ಮಿಕರನ್ನು ಅಲಕ್ಷ್ಯ ಮಾಡಿ ಕೇವಲ ಮತಗಳಿಕೆ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಿ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿದೆ ಎಂದು ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ನಿಗಮ ಸ್ಥಾಪಿಸಿದ್ದಕ್ಕೆ ಮರಾಠಿಗರು ಸಂಭ್ರಮವನ್ನು ಆಚರಿಸಿಲ್ಲ. ಇನ್ನೂ ಮುಂದಾಗಿ ಪ್ರಾಧಿಕಾರ ರಚನೆ ಮಾಡುವಂತೆ ಒತ್ತಾಯ ಹೇರಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ ಎಂಬ ಗುಮಾನಿ ಇದೆ. ಪ್ರವಾಹದಿಂದ ಮನೆ, ಮಠ ಕಳೆದುಕೊಂಡು ಬೀದಿಪಾಲಾದ ತನ್ನ ನೆಲದ ಮಕ್ಕಳನ್ನೇ ಕಾಪಾಡುತ್ತಿಲ್ಲ. ಕೊರೊನಾ ಸೋಂಕಿನಿಂದ ದಿವಾಳಿ ಎದ್ದಿದೆ. ಅನೇಕ ಜ್ವಲಂತ ಸಮಸ್ಯೆಗಳು ಇದ್ದರೂ ರಾಜಕೀಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಸರ್ಕಾರ ಮರಾಠಿಗರ ಪ್ರಾಧಿಕಾರ ರಚನೆಗೆ ಮುಂದಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಲಾಯಿತು. ಸಂಘಟನೆಯ ಮುಖಂಡರಾದ ಪ್ರಭು ಚೆನ್ನದಾಸರ, ಹನಮಂತ ಭೂತಬುಲ್ಲಿ, ದೇವರಾಜ ಅಜ್ಜಳದವರ
ಇದ್ದರು.

‘ನಿಗಮ ಸ್ಥಾಪನೆ ಕೈಬಿಡಿ’

ಗಂಗಾವತಿ: ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿರುವುದನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರದ ತಾಲ್ಲೂಕು ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಉಪ ತಹಶೀಲ್ದಾರ್‌ ಮಂಜುನಾಥ್‌ ನಂದನ್‌ ಅವರಿಗೆ ಮನವಿ ಸಲ್ಲಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ,‘ಮರಾಠಾ ಅಭಿವೃದ್ಧಿ ನಿಗಮ ರಚನೆಗೆ ರಾಜ್ಯ ಸರ್ಕಾರ ₹50 ಕೋಟಿ ಮೀಸಲಿಟ್ಟಿರುವುದು, ಇಡೀ ನಾಡಿನ ಕನ್ನಡಿಗರಿಗೆ ಮಾಡಿರುವ ವಂಚನೆ ಹಾಗೂ ಅವಮಾನ’ ಎಂದು ಕಿಡಿಕಾರಿದರು.

ಬೆಳಗಾವಿಯಲ್ಲಿ ಎಂಇಎಸ್‌ ಸಂಘಟನೆಯನ್ನು ಕಟ್ಟಿಕೊಂಡು ಸದಾ ಒಂದಿಲ್ಲೊಂದು ತಂಟೆ-ತಕರಾರು ಮಾಡುತ್ತ ಪ್ರತಿ ಕನ್ನಡದ ಕೆಲಸಗಳಿಗೂ ಅಡ್ಡಗಾಲು ಹಾಕುತ್ತ, ಕನ್ನಡ ವಿರೋಧಿತನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ನಮ್ಮದೇ ನಾಡಿನಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅಡ್ಡಿಪಡಿಸಿದ ಮರಾಠಿಗರಿಗೆ, ನಮ್ಮ ಸರ್ಕಾರ ನಿಗಮ ಸ್ಥಾಪಿಸಿ ಎಂಥ ಸಂದೇಶ ನೀಡಲು ಹೊರಟಿದೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಅಭಿವೃದ್ಧಿ ನಿಗಮ ರಚನೆಯ ಆದೇಶವನ್ನು ಹಿಂಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಸಮಸ್ತ ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರವೇ ಪದಾಧಿಕಾರಿಗಳಾದ ಖಾಜಾವಲಿ, ಶಂಕರ ಪೂಜಾರಿ, ಹುಸೇನಸಾಬ್, ಉಮೇಶ್, ಭರಮಪ್ಪ, ಶರಣು ನಾಯಕ, ಅಂಜಿ ಪೂಜಾರಿ ಹಾಗೂ ಹಸೇನಸಾಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT