ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ವ್ಯಾಪಕ ನೀರಿದ್ದರೂ ಜಿಲ್ಲೆಯಲ್ಲಿ ಮಳೆ ಕೊರತೆ!

ಕಾರಟಗಿ, ಗಂಗಾವತಿ, ಕುಕನೂರು ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ
Published 6 ಆಗಸ್ಟ್ 2024, 5:48 IST
Last Updated 6 ಆಗಸ್ಟ್ 2024, 5:48 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಜನರ ಜೀವನಾಡಿ ತುಂಗಭದ್ರಾ ಜಲಾಶಯ ತುಂಬಿ ಹರಿಯುತ್ತಿದ್ದು ನದಿಪಾತ್ರದ ಮುನಿರಾಬಾದ್‌, ಗಂಗಾವತಿ ಹಾಗೂ ಕಾರಟಗಿ ಭಾಗದಲ್ಲಿ ವ್ಯಾಪಕ ನೀರು ಹರಿಯುತ್ತಿದೆ. ಪ್ರವಾಹದ ಆತಂಕವೂ ತಲೆದೂರಿದೆ. ಆದರೆ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಜುಲೈನಲ್ಲಿ ಶೇ 25ರಷ್ಟು ಮಳೆ ಕೊರತೆಯಾಗಿದೆ.

ಕಳೆದ ವರ್ಷ ಸಾಕಷ್ಟು ಬರಗಾಲ ಕಾಡಿದ್ದರಿಂದ ಅನ್ನದಾತರು ಪರದಾಡಿದ್ದರು. ಆದ್ದರಿಂದ ಈ ಬಾರಿಯ ಮುಂಗಾರು ಹಂಗಾಮಿನ ಆರಂಭದಲ್ಲಿ ಆಗಸದತ್ತ ಮೊಗ ಮಾಡಿದ್ದರು. ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿಯೇ ಮಳೆಯಾಗಿದೆ. ಜೂನ್‌ನಲ್ಲಿ ವಾಡಿಕೆಗಿಂತಲೂ ಶೇ 54ರಷ್ಟು ಮಳೆ ಜಾಸ್ತಿಯಾಗಿತ್ತು. ಆದರೆ, ಜುಲೈನಲ್ಲಿ ಮಳೆ ಕೊರತೆಯಾಗಿದ್ದು, ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತಿದೆ.

ಜುಲೈನಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ 4.7 ಸೆಂ.ಮೀ., ಕೊಪ್ಪಳ 6.5 ಸೆಂ.ಮೀ., ಕುಷ್ಟಗಿ 0.5 ಸೆಂ.ಮೀ., ಯಲಬುರ್ಗಾ ತಾಲ್ಲೂಕಿನಲ್ಲಿ 1.0 ಸೆಂ.ಮೀ., ಕಾರಟಗಿ 5.3 ಸೆಂ.ಮೀ., ಕುಕನೂರು 4.2 ಮತ್ತು ಕನಕಗಿರಿ ವ್ಯಾಪ್ತಿಯಲ್ಲಿ 4 ಮಿಲಿ ಮೀಟರ್‌ನಷ್ಟು ಮಳೆ ಕೊರತೆಯಾಗಿದೆ.

ಮಳೆ ಕೊರತೆ ಹಾಗೂ ಹೆಚ್ಚಿನ ಮಳೆಯಿಂದ ಆಗುವ ಬೆಳೆಹಾನಿ ಕುರಿತು ಸಮೀಕ್ಷೆ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು. ಬಳಿಕ ಪರಿಹಾರದ ಬಗ್ಗೆ ಕ್ರಮ ವಹಿಸಲಾಗುವುದು.
ಟಿ.ಎಸ್‌. ರುದ್ರೇಶಪ್ಪ , ಕೃಷಿ ಇಲಾಖೆ ಜಂಟಿ ನಿರ್ದೇಶಕ

ಮಾರ್ಚ್‌ 1ರಿಂದ ಮೇ 31ರ ಅವಧಿಯನ್ನು ಪೂರ್ವ ಮುಂಗಾರು ಎಂದು ಪರಿಗಣಿಸಲಾಗಿದ್ದು, ವಾಡಿಕೆಗಿಂತಲೂ 4 ಸೆಂಟಿ ಮೀಟರ್‌ನಷ್ಟು ಹೆಚ್ಚು ಮಳೆಯಾಗಿತ್ತು. ಜೂನ್‌ನಲ್ಲಿ ವಾಡಿಕೆ ಮಳೆಯ ಪ್ರಮಾಣ ಒಟ್ಟು 7.9 ಸೆಂ.ಮೀ., ಆದರೆ ವಾಸ್ತವಿಕವಾಗಿ ಆದ ಮಳೆ 12.01 ಸೆಂ.ಮೀ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿತ್ತು.

ತುಂಗಭದ್ರಾ ನದಿ ನೀರು ಹರಿಯುವ ಜಿಲ್ಲೆಯ ಪ್ರದೇಶಗಳಲ್ಲಿ ಬಹುತೇಕ ಭಾಗ ಭತ್ತ ಬಿತ್ತನೆ ಮಾಡಲಾಗಿದೆ. ಮಳೆಯಾಶ್ರಿತವೇ ಆಗಿರುವ ಕುಕನೂರು, ಕುಷ್ಟಗಿ, ಯಲಬುರ್ಗಾ ಮತ್ತು ಕನಕಗಿರಿ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಫಸಲಿನ ಕೊರತೆಯೂ ಕಾಡುತ್ತಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಬೇಕಾದಾಗ ಮಳೆ ಬಾರದೆ ಬೇಡವಾದಾಗ ಸುರಿದಿದೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳು ಮತ್ತು ನೆರೆ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ತಂಪನೆಯ ವಾತಾವರಣವೂ ಕೃಷಿ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ರೈತರು.

ಕಳೆದ ವರ್ಷ ಬರಗಾಲದ ಕಾರಣದಿಂದಾಗಿ ಬಿತ್ತನೆಯೂ ಕಡಿಮೆಯಾಗಿತ್ತು. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 9,895.33 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಸ್ವೀಕೃತವಾಗಿದ್ದು, 8,098.63 ಕ್ವಿಂಟಲ್‌ ಮಾರಾಟ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ತಿಳಿಸಿದರು.

‘1,796.70 ಕ್ವಿಂಟಲ್‌ ಬಿತ್ತನೆ ಬೀಜ ಸಂಗ್ರಹವಿದೆ. ಕೊರತೆಯಿಲ್ಲ. ಜೂನ್‌ನಲ್ಲಿ ವಾಡಿಕೆಗಿಂತಲೂ ಹೆಚ್ಚು, ಜುಲೈನಲ್ಲಿ ಕಡಿಮೆ ಮಳೆಯಾಗಿದ್ದು, ಆಗಸ್ಟ್‌ನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ವ್ಯರ್ಥವಾಗಿ ಹರಿಯುತ್ತಿದೆ ನದಿ ನೀರು

ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರಲು ಶಿವಮೊಗ್ಗ ಮತ್ತು ಸುತ್ತಮುತ್ತಲಿನ ದಕ್ಷಿಣದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವುದು ಅಗತ್ಯ. ಈ ಬಾರಿ ಅಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ನಿತ್ಯ ಸಾಕಷ್ಟು ಟಿಎಂಸಿ ಅಡಿ ಒಳಹರಿವು ಬಂದಿದ್ದು ಪ್ರತಿದಿನವೂ ಲಕ್ಷಾಂತರ ಕ್ಯಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಅದು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಆದ್ದರಿಂದ ಪ್ರಸ್ತಾವಿತ ನವಲಿ ಸಮಾನಂತರ ಜಲಾಶಯ ನಿರ್ಮಾಣ ಮಾಡಬೇಕು ಎನ್ನುವ ಕೂಗು ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT