ಅಳವಂಡಿ: ಹೋಬಳಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆಯಿದ್ದು, ಸರ್ಕಾರ ಕೂಡಲೇ ಗ್ರಾಮದಲ್ಲಿ ಮೇವು ಬ್ಯಾಂಕ್ ಹಾಗೂ ಗೋಶಾಲೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಉಪ ತಹಶೀಲ್ದಾರ ಕಚೇರಿಗೆ ಗುರುವಾರ ರೈತರು ಹಾಗೂ ಕಾರ್ಮಿಕರು ಮನವಿ ಸಲ್ಲಿಸಿದರು.
ಮುಂಗಾರು ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ನಡೆದಿದ್ದು, ನಂತರದ ದಿನಗಳಲ್ಲಿ ಮಳೆ ಮಾಯವಾಗಿದ್ದರಿಂದ ಬೆಳೆ ತೇವಾಂಶ ಕೊರತೆಯಿಂದ ಹಾಳಾಗಿದೆ. ಬೆಳೆಯು ಹಾಳಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಈವರೆಗೂ ಹಿಂಗಾರು ಮಳೆಯಾಗಿಲ್ಲ. ಕಾರಣ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕಾರಣ ಸರಕಾರ ತಕ್ಷಣವೇ ಗ್ರಾಮದಲ್ಲಿ ಮೇವಿನ ಬ್ಯಾಂಕ್ ಅನ್ನು ಸ್ಥಾಪಿಸಬೇಕು. ಗೋಶಾಲೆ ಸ್ಥಾಪಿಸಿ, ಜಾನುವಾರುಗಳನ್ನು ರಕ್ಷಿಸಬೇಕು ಎಂದರು.
ಕಳೆದ ವರ್ಷ ಸಂಗ್ರಹಿಸಿದ ಮೇವು ಇಲ್ಲಿಯವರೆಗೂ ಜಾನುವಾರುಗಳಿಗೆ ನೀಡಲಾಗಿದೆ. ಆದರೆ ಈಗ ಮೇವು ದಾಸ್ತಾನು ಖಾಲಿಯಾಗುತ್ತ ಬಂದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಸಂಗ್ರಹಿಸಿದ ಮೇವು ಖಾಲಿಯಾಗುವ ಮೊದಲೇ ಸರ್ಕಾರ ಮೇವು ಬ್ಯಾಂಕ್ ಹಾಗೂ ಗೋಶಾಲೆ ಪ್ರಾರಂಭಿಸಬೇಕು. ಮುಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆ ನಾಶವಾಗಿದ್ದು, ಕೂಡಲೇ ರೈತರಿಗೆ ಬರ ಪರಿಹಾರ ಅಥವಾ ಬೆಳೆಹಾನಿಯನ್ನು ನೀಡಬೇಕು ಎಂದು ಆಗ್ರಹಿಸಿದರು. ನಂತರ ಉಪತಹಶೀಲ್ದಾರ ಕಚೇರಿಯ ಅಧಿಕಾರಿ ಶ್ರೀಕಾಂತ ಗೊಂದೂಳಿ ಅವರಿಗೆ ಮನವಿ ಸಲ್ಲಿಸಿದರು.
ರೈತರಾದ ಶಿವಗ್ಯಾನಪ್ಪ ನೀಲಿಹಿಂಡರ, ನಿಂಗರಾಜ ಜಂತ್ಲಿ, ಬಸವರಾಜ ನೀಲೋಗಿಪುರ, ಗುಡದೀರಪ್ಪ, ಮಂಜುನಾಥ, ವೆಂಕಟೇಶ ಬಂಡಿ, ರಾಮಣ್ಣ ವಾಲಿಕಾರ, ರೇಣುಕರಾಜ ಅಡವಳ್ಳಿ, ರಾಮಣ್ಣ ತಳಕಲ್, ಶಿವನಗೌಡ ಪೋಲಿಸಪಾಟೀಲ, ಬಸವರಾಜ, ನಿಂಗಪ್ಪ, ಹನುಮಂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.