ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಾಥಮಿಕ’ದಲ್ಲಿಯೇ ಸೋತಿತೇ ಎಸ್‌ಎಸ್‌ಎಲ್‌ಸಿ ಫಲಿತಾಂಶ?

ಗಟ್ಟಿಯಾಗದ ಬುನಾದಿ, ಶಿಕ್ಷಕರಿಗೆ ಹೆಚ್ಚುವರಿ ಕೆಲಸಗಳ ಹೊರೆ, ಪಾತಾಳಕ್ಕಿಳಿದ ಫಲಿತಾಂಶದ ವೈಫಲ್ಯಕ್ಕೆ ಕಾರಣವೇನು?
Published 13 ಮೇ 2024, 4:53 IST
Last Updated 13 ಮೇ 2024, 4:53 IST
ಅಕ್ಷರ ಗಾತ್ರ

ಕೊಪ್ಪಳ: ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆಯಲು ವೇದಿಕೆಯಾಗಬೇಕಾಗಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ವರ್ಷ ಪ್ರಾಥಮಿಕ ಹಂತದಲ್ಲಿಯೇ ಸೋತಂತೆ ಕಾಣುತ್ತದೆ.  ಹಿಂದಿನ ವರ್ಷದ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆ 16ನೇ ಸ್ಥಾನ ಗಳಿಸಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅಗ್ರಸ್ಥಾನದಲ್ಲಿತ್ತು. ಈ ಬಾರಿ 33ನೇ ಸ್ಥಾನಕ್ಕೆ ಕುಸಿದೆ.

ಇದು ಜಿಲ್ಲೆಯಲ್ಲಿ ಚರ್ಚೆಗೂ ಕಾರಣವಾಗಿದ್ದು, ಭವಿಷ್ಯದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಹೇಗೆ ಎನ್ನುವುದರ ಬಗ್ಗೆ ಅನೇಕ ಪೋಷಕರಿಗೆ ಚಿಂತೆಯಾಗಿದೆ. ಮಕ್ಕಳ ನೈಜ ಜ್ಞಾನ ಮತ್ತು ಕಲಿಕಾ ಗುಣಮಟ್ಟ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ಮಂಡಳಿ ರಾಜ್ಯದಾದ್ಯಂತ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೊಳಿಸಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಪರೀಕ್ಷೆಗಳೇನೋ ಕರಾರುವಾಕ್ಕಾಗಿ ನಡೆಯುವ ಜೊತೆಗೆ ವಿದ್ಯಾರ್ಥಿಗಳ ಜ್ಞಾನದ ಮಟ್ಟದ ವಾಸ್ತವಿಕತೆಯೂ ಈ ಫಲಿತಾಂಶದ ಮೂಲಕ ಬಹಿರಂಗವಾಯಿತು.

ಇದಕ್ಕೂ ಮೊದಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣಕ್ಕೆ ಅಗತ್ಯವಿರುವಷ್ಟು ಉತ್ತರಗಳನ್ನು ಅಲ್ಲಲ್ಲಿ ಶಿಕ್ಷಕರೇ ಹೇಳಿಕೊಡುತ್ತಿದ್ದರು ಎನ್ನುವ ವಿಷಯ ಗುಟ್ಟೇನೂ ಅಲ್ಲ. ಆದರೆ ಈ ಬಾರಿ ವೆಬ್‌ ಕಾಸ್ಟಿಂಗ್ ಮಾಡಿದ್ದರಿಂದ ಯಾರಿಗೂ ಹೇಳಿಕೊಡಲು ಅವಕಾಶವೇ ಇಲ್ಲದಂತಾಯಿತು. ವಿದ್ಯಾರ್ಥಿಗಳು ಕೂಡ ಯಾರಾದರೂ ಉತ್ತರ ಹೇಳಿಕೊಡುತ್ತಾರೆ ಎನ್ನುವ ನಿರೀಕ್ಷೆ ಹೊಂದಿದ್ದರು. ಅವರ ನಿರೀಕ್ಷೆಯೂ ಹುಸಿಯಾಯಿತು.

ಕ್ಯಾಮೆರಾ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭಯ ಹುಟ್ಟಿಸಿತು. ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳಲ್ಲಿ ಭಯ ಹೋಗಲಾಡಿಸಲು ಪರೀಕ್ಷಾ ಹಬ್ಬ ಎಂದು ಒಂದು ಕಡೆ ಆಚರಿಸಿ, ಇನ್ನೊಂದೆಡೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿದೆ. ಆದರೆ ಇದಕ್ಕೆ ಮಕ್ಕಳನ್ನು ಸಿದ್ಧಪಡಿಸುವಲ್ಲಿ ಇಲಾಖೆ ವಿಫಲವಾದಂತೆ ಕಾಣುತ್ತಿದೆ.

ಕಾರಣಗಳು ಅನೇಕ: ಜಿಲ್ಲೆಯ ಬಹಳಷ್ಟು ಗ್ರಾಮಾಂತರ ಪ್ರದೇಶದ ಹಲವು ವಿದ್ಯಾರ್ಥಿಗಳು ದುಡಿಮೆಗಾಗಿ ಮಂಗಳೂರು, ಬೆಂಗಳೂರು ಹಾಗೂ ಗೋವಾಕ್ಕೆ ಹೋಗಿ ನೇರವಾಗಿ ಪರೀಕ್ಷೆಗೆ ಬರುತ್ತಾರೆ. ಅವರಿಗೆ ಪರೀಕ್ಷಾ ಸಮಯದಲ್ಲಿ ಪ್ರವೇಶ ಪತ್ರವೂ ಲಭಿಸುತ್ತದೆ. ಒಂದು ವೇಳೆ ಸಿಗದಿದ್ದರೆ ಸ್ಥಳೀಯ ಜನಪ್ರತಿನಿಧಿಗಳು ಒತ್ತಡ ಹೇರುತ್ತಾರೆ. ನಾವು ಬಡವರು ಇದ್ದೇವೆ, ಹೊಟ್ಟೆ ಪಾಡು ನಡೆಯಬೇಕಲ್ಲವೇ? ಎಂದು ಪ್ರಶ್ನಿಸುವುದರಿಂದ ಶಿಕ್ಷಕರು ಪ್ರವೇಶ ಪತ್ರ ಕೊಡುತ್ತಾರೆ ಎನ್ನುವ ಆರೋಪವೂ ಇದೆ ಎನ್ನುತ್ತವೆ ಮೂಲಗಳು.

ಎಸ್‌ಎಸ್‌ಎಲ್‌ಸಿ ಹಂತಕ್ಕೆ ಬರುವ ಮಕ್ಕಳಲ್ಲಿ ದೊಡ್ಡ ಸಮಸ್ಯೆಯೆಂದರೆ ಸರಿಯಾಗಿ ಅ, ಆ, ಇ, ಈ ಕೂಡ ಬರೆಯಲು ಬರುವುದಿಲ್ಲ. ಹೈಸ್ಕೂಲಿಗೆ ಬಂದ ಮೇಲೆ ಅವರಿಗೆ ಕಲಿಸಬೇಕಾದ ಅನಿವಾರ್ಯತೆ ಶಿಕ್ಷಕರದ್ದು. ದುಡಿಯಲು ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಜಿಲ್ಲೆಯ ಹಲವು ಶಿಕ್ಷಕರು ಪಠ್ಯದ ವಿಷಯಗಳನ್ನು ಆಡಿಯೊ ಮಾಡಿ ಕೊಡುತ್ತಾರೆ. ಅವುಗಳನ್ನು ಕೆಲಸ ಮಾಡುತ್ತಲೇ ವಿದ್ಯಾರ್ಥಿಗಳು ಆಲಿಸಿ ಮನನವೂ ಮಾಡಿಕೊಳ್ಳುತ್ತಾರೆ. ಆದರೆ ಬರೆಯಲು ಮಾತ್ರ ಬರುವುದಿಲ್ಲ ಎನ್ನುವ ಸ್ಥಿತಿ ಈಗಿನದ್ದು.

ಇನ್ನು ಜಿಲ್ಲೆಯಲ್ಲಿರುವ ಬಹುತೇಕ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿದ್ದು ಆ ಶಾಲೆಗಳು ಅತಿಥಿ ಶಿಕ್ಷಕರ ಮೇಲೆ ಅವಲಂಬನೆಯಾಗಿವೆ. ’ಅತಿಥಿ’ಗಳ ಬೋಧನಾ ಗುಣಮಟ್ಟ, ಅನುಭವ, ಜ್ಞಾನದ ಪಕ್ವತೆ, ಮಕ್ಕಳ ಮನಸ್ಸಿಗೆ ನಾಟುವಂತೆ ಹೇಳಿಕೊಡುವ ಕೌಶಲ ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಇನ್ನೂ ಕೆಲವು ಪ್ರಾಥಮಿಕ ಶಾಲೆಗಳಲ್ಲಿ ದಾಖಲೆಗಳ ನಿರ್ವಹಣೆಗಾಗಿ ಮಾತ್ರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಎನ್ನುವಂತಾಗಿದ್ದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊಡೆತ ಕೊಡಲು ಇದು ಕೂಡ ಕಾರಣ ಎನ್ನುತ್ತಾರೆ ಶಿಕ್ಷಣ ತಜ್ಞರು.

ಖಾಸಗಿ ಶಾಲೆಗಳು ಮುಂದೆ ಇವೆ ಎನ್ನುವುದು ಫಲಿತಾಂಶದಿಂದ ಗೊತ್ತಾಗುತ್ತದೆ. ಆದರೆ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಬೇಕಾದಷ್ಟು ಆರ್ಥಿಕ ಚೈತನ್ಯ ನಮಗೆ ಇರಬೇಕಲ್ಲವೇ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು.

-ಪಲ್ಲವಿ ಶೆಟ್ಟಿ ಎಸ್‌ಎಸ್‌ಎಲ್‌ಸಿ ಮಗುವಿನ ತಾಯಿ ಗಂಗಾವತಿ

ಜಿಲ್ಲೆಯ ಫಲಿತಾಂಶ ಹಿಂದಿಗಿಂತಲೂ ಈ ಬಾರಿ ಕಡಿಮೆಯಾಗಿದ್ದು ಮುಂಬರುವ ದಿನಗಳಲ್ಲಿ ಇದು ಹೇಗೆ ಸುಧಾರಣೆ ಮಾಡಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಗುವುದು.

-ಶ್ರೀಶೈಲ ಬಿರಾದಾರ ಡಿಡಿಪಿಐ ಕೊಪ್ಪಳ

ಈಗ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕಾರಿಗಳ ಜೊತೆ ಸಭೆ ನಡೆಸಲು ಬರುವುದಿಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಚರ್ಚಿಸಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸುವೆ.

-ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ

ಖಾಸಗಿ ಶಾಲೆಗಳೇ ಮುಂದು

ಈ ಬಾರಿಯ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯ ಸಾಧನೆ ಪಾತಾಳಕ್ಕೆ ಕುಸಿದಿದ್ದರೂ ಗಳಿಸಿದ ಶೇ 64.01ರಷ್ಟು ಅಂಕಗಳಲ್ಲಿ ಖಾಸಗಿ ಶಾಲೆಯ ವಿದ್ಯಾರ್ಥಿಗಳೇ ಮುಂಚೂಣಿಯಲ್ಲಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 22713 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು 14539 ವಿದ್ಯಾರ್ಥಿಗಳಷ್ಟೇ ಉತ್ತೀರ್ಣರಾಗಿದ್ದಾರೆ. 8174 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಖಾಸಗಿ ಶಾಲೆಗಳ 1904 ಬಾಲಕರು ಪರೀಕ್ಷೆ ಬರೆದಿದ್ದು ಇದರಲ್ಲಿ 1407 ಜನ ಉತ್ತೀರ್ಣರಾಗಿದ್ದಾರೆ. ಇದರ ಶೇಕಡಾವಾರು ಪ್ರಮಾಣ ಶೇ 73.90 ಇದೆ. 1464 ಬಾಲಕಿಯರ ಪೈಕಿ 1339 ಜನ ಪಾಸ್‌ ಆಗಿದ್ದು ಶೇಕಡ 91.46ರಷ್ಟು ಫಲಿತಾಂಶವಿದೆ. ಬಾಲಕ ಮತ್ತು ಬಾಲಕಿಯರ ವಿಭಾಗದ ಎರಡೂ ಸೇರಿ ಖಾಸಗಿ ಶಾಲೆಗಳ ಜಿಲ್ಲೆಯ ಫಲಿತಾಂಶ ಶೇ 81.53ರಷ್ಟಾಗಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳ ಶೇಕಡವಾರು ಫಲಿತಾಂಶ ಶೇ 61.22ರಷ್ಟಿದ್ದರೆ ಅನುದಾನಿತ ಶಾಲೆಗಳ ಫಲಿತಾಂಶ ಶೇ. 59.30ರಷ್ಟು ಇದೆ. ಪರೀಕ್ಷೆ ಬರೆದ ಸರ್ಕಾರಿ ಶಾಲೆಗಳ ಒಟ್ಟು 16731 ವಿದ್ಯಾರ್ಥಿಗಳ ಪೈಕಿ 10243 ಜನರಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಬಾಲಕರ ಪ್ರಮಾಣ ಶೇ 51.99ರಷ್ಟಿದ್ದರೆ ಬಾಲಕಿಯರ ಪ್ರಮಾಣ ಶೇ 69.20ರಷ್ಟು ಇದೆ. ಅನುದಾನಿತ ಶಾಲೆಗಳ 2614 ಮಕ್ಕಳು ಪರೀಕ್ಷೆ ಎದುರಿಸಿದ್ದು ಇದರಲ್ಲಿ 1550 ವಿದ್ಯಾರ್ಥಿಗಳಷ್ಟೇ ಎಸ್‌ಎಸ್‌ಎಲ್‌ಸಿ ಸವಾಲು ಯಶಸ್ವಿಯಾಗಿ ದಾಟಿದ್ದಾರೆ. ಇದರಲ್ಲಿ ಬಾಲಕರು ಶೇ 49.42ರಷ್ಟು ಮತ್ತು ಬಾಲಕಿಯರು ಶೇ 72ರಷ್ಟು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆಯೇ ಹೆಚ್ಚಿದ್ದು ಅಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಖಾಸಗಿಗಿಂತಲೂ ಹೆಚ್ಚಾಗಿದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಯನ್ನು ನೆಚ್ಚಿಕೊಂಡ ಮಕ್ಕಳೇ ಅಧಿಕವಾಗಿದ್ದು ಅದರಲ್ಲಿ ಅನೇಕರು ಬಡತನ ಸಣ್ಣ ವಯಸ್ಸಿನಲ್ಲಿಯೇ ಕುಟುಂಬ ನಿರ್ವಹಣೆ ಸವಾಲು ಪ್ರಾಥಮಿಕ ಹಂತದಲ್ಲಿ ಕಳಪೆ ಶಿಕ್ಷಣ ಪ್ರಾಥಮಿಕ ಹಂತದಲ್ಲಿಯೇ ಇರಬೇಕಾದ ಕನಿಷ್ಠ ಅಕ್ಷರದ ಅರಿವು ಹೀಗೆ ಅನೇಕ ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳು ಫಲಿತಾಂಶ ಕುಸಿತಕ್ಕೆ ಕಾರಣವಾಗಿವೆ ಎನ್ನುತ್ತಾರೆ ಜಿಲ್ಲೆಯ ಹಲವು ಶಿಕ್ಷಕರು.

‘ವೆಬ್‌ ಕಾಸ್ಟಿಂಗ್ ಮುಂದುವರಿಯಲಿ’

ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಿ ಅನೇಕರಿಗೆ ಬೇಸರವಾಗಿರಬಹುದು. ಆದರೆ ಜಿಲ್ಲೆಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಈಗ ಹೊರಗೆ ಬಂದಿರುವುದಷ್ಟೇ ಸತ್ಯ ಎನ್ನುವ ವಾಸ್ತವದ ಅರಿವು ಎಲ್ಲರಿಗೂ ಆಗಬೇಕು. ವೆಬ್‌ ಕಾಸ್ಟಿಂಗ್‌ ಕಣ್ಗಾವಲಿನ ನಡುವೆಯೂ ಜಿಲ್ಲೆಗೆ ಶೇ 60ಕ್ಕಿಂತಲೂ ಹೆಚ್ಚು ಫಲಿತಾಂಶ ಬಂದಿದೆ. ಇದು ಕರಾರುವಾಕ್ಕಾಗಿ ಮುಂದುವರಿದರೆ ಹಂತಹಂತವಾಗಿ ಫಲಿತಾಂಶ ಸುಧಾರಣೆಯಾಗುತ್ತದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟವೂ ಹೆಚ್ಚಾಗುತ್ತದೆ. ತಾತ್ಪೂರ್ತಿಕವಾಗಿ ಈಗಿನ ಫಲಿತಾಂಶವೇ ಹಿನ್ನಡೆಯಂದು ಭಾವಿಸಿದರೆ ಶಿಕ್ಷಣ ಇಲಾಖೆ ಸಾಕ್ಷರತಾ ಇಲಾಖೆಯಾಗಬೇಕಾದ ಅಪಾಯ ತಪ್ಪಿದ್ದಲ್ಲ ಎಂದು ಹೆಸರು ಹೇಳಲು ಬಯಸದ ಶಿಕ್ಷಕರೊಬ್ಬರು ಹೇಳುತ್ತಾರೆ. ಸೊನ್ನೆ ಸುತ್ತಿದ ಶಾಲೆಗಳು ಜಿಲ್ಲೆಯಲ್ಲಿ ಎರಡು ಶಾಲೆಗಳು ಸೊನ್ನೆ ಫಲಿತಾಂಶ ಪಡೆದಿದ್ದು ಇದು ಅಲ್ಲಿನ ಮಕ್ಕಳ ಭವಿಷ್ಯದ ಮೇಲೆ ಕರಿನೆರಳು ಹರಡಿದೆ.  ಕುಷ್ಟಗಿಯ ಬಿವಿಟಿ ಸ್ಮಾರಕ ಹೈಸ್ಕೂಲು ಮತ್ತು ಯಲಬುರ್ಗಾ ತಾಲ್ಲೂಕಿನ ತುಮ್ಮರಗುದ್ದಿಯ ಮೇಲ್ದರ್ಜೆಗೇರಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ ಯಾವ ವಿದ್ಯಾರ್ಥಿಗಳೂ ಉತ್ತೀರ್ಣರಾಗಿಲ್ಲ.

‘ಟೀಚರ್ಸ್‌ ಫಾರ್‌ ಟೀಚಿಂಗ್‌’

ಬೇಕು ಶಿಕ್ಷಕರು ಮಕ್ಕಳ ಬೋಧನೆ ಮಾತ್ರ ಎನ್ನುವ ಯೋಜನೆ ಜಾರಿಗೆ ಬರಲಿ. ಶಿಕ್ಷಕರಿಗೆ ಪಠ್ಯಕ್ಕಿಂತ ಬೇರೆ ಕೆಲಸಗಳನ್ನೇ ಹೆಚ್ಚಾಗಿ ಮಾಡಲು ಇಲಾಖೆ ಹೇಳುತ್ತಿದೆ. ಹೀಗಾದರೆ ಶಿಕ್ಷಕರು ಏನು ಮಾಡಬೇಕು. ಆರಂಭದಲ್ಲಿ ಪ್ರಾಥಮಿಕ ಹಂತದ ಬುನಾದಿ ಗಟ್ಟಿಮಾಡಬೇಕು ಮಕ್ಕಳಲ್ಲಿ ಆಸಕ್ತಿ ಮೂಡುವಂತೆ   ಪಾಠ ಮಾಡಿ ಮಕ್ಕಳನ್ನು ಮೊಬೈಲ್‌ ಫೋನ್‌ ಲೋಕದಿಂದ ಹೊರಗಡೆ ತರಬೇಕು. ಶಾಲೆಯ ಆಡಳಿತ ಆಡಳಿತಾತ್ಮಕ ಕೆಲಸಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಿದರೆ ಶಿಕ್ಷಕರಿಗೂ ಮಕ್ಕಳ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಟಿ.ವಿ. ಮಾಗಳದ ಶಿಕ್ಷಣ ತಜ್ಞರು ಬೋರ್ಡ್‌ ಪರೀಕ್ಷೆಗೆ ವಿರೋಧ ಯಾಕೆ? ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಬರುವ ಮೊದಲು ಒಂದೆರೆಡು ಬಾರಿ ಬೋರ್ಡ್‌ ಪರೀಕ್ಷೆ ನಡೆಸಿದ್ದರೆ ಮಕ್ಕಳಲ್ಲಿ ಪರೀಕ್ಷಾ ಭಯ ದೂರವಾಗುತ್ತಿತ್ತು.  ಬೋರ್ಡ್‌ ಪರೀಕ್ಷೆ ಜಾರಿಗೆ ತಂದಾಗ ಅನೇಕರು ಕೋರ್ಟ್‌ ಮೊರೆ ಹೋದರು. ಆಗ ವಿರೋಧಿಸದಿದ್ದರೆ ಈಗ ಫಲಿತಾಂಶ ಸುಧಾರಣೆಯಾಗುತ್ತಿತ್ತು. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಚಿಂತನೆ ನಡೆಯಲಿದೆ. ಎಸ್‌.ಆರ್‌. ಮನಹಳ್ಳಿ ಶಿಕ್ಷಣ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT