ಮಂಗಳವಾರ, ಜುಲೈ 27, 2021
20 °C
ಪ್ರಸ್ತಾವದಲ್ಲಿಯೇ ಉಳಿದ ಯೋಜನೆ, ದಾನಿಗಳಿಂದ ಕೆಲವೆಡೆ ಸಲಕರಣೆ ದೇಣಿಗೆ: ಶೇ 10ರಷ್ಟೂ ಇಲ್ಲ ಸಾಧನೆ!

ಕೊಪ್ಪಳ: ‘ಸ್ಮಾರ್ಟ್‌’ ಆಗದ ಸರ್ಕಾರಿ ಶಾಲಾ ತರಗತಿಗಳು

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಹಿಂದುಳಿದ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ಮೂಲಕ ತಂತ್ರಜ್ಞಾನ ಆಧಾರಿತ ಬೋಧನೆಗೆ ಇನ್ನೂ ಮಹೂರ್ತ ಕೂಡಿ ಬಂದಿಲ್ಲ. ಈ ನಿಟ್ಟಿನಲ್ಲಿ ಶೇ 10 ರಷ್ಟೂ ಸಾಧನೆಯಾಗಿಲ್ಲ.

ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಸ್ಮಾರ್ಟ್‌ಕ್ಲಾಸ್ ಆರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯತತ್ಪರವಾಗಿದ್ದರೂ ನಿರೀಕ್ಷಿತ ಸಾಧನೆ ಕಂಡುಬಂದಿಲ್ಲ. ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾದ ಪರಿಕಲ್ಪನೆಯಡಿ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಆರಂಭಕ್ಕೆ ಸೂಚನೆ ಇದೆ.

ಮೂಲಸೌಕರ್ಯಗಳ ಕೊರತೆ: ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇದೆ. ಆಟದ ಮೈದಾನ, ಶುದ್ಧ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ಸುಸಜ್ಜಿತ ಕಟ್ಟಡಗಳ ಕೊರತೆ ಇದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಶಾಲಾ ಕೊಠಡಿ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ನೀಡುತ್ತಿದ್ದರೂ ಅದು ಸದ್ಬಳಕೆಯಾಗುತ್ತಿಲ್ಲ.

ಲಾಕ್‌ಡೌನ್ ಕಾರಣ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾದರೂ, ಸೌಲಭ್ಯಗಳ ಕೊರತೆಯೇ ಮುಖ್ಯ ಸಮಸ್ಯೆಯಾಗಿದೆ. ಒಂದು ಸ್ಮಾರ್ಟ್‌ಕ್ಲಾಸ್‌ ನಿರ್ಮಾಣಕ್ಕೆ ಕನಿಷ್ಠ ₹10 ಲಕ್ಷ ಬೇಕು. ಗಟ್ಟಿಮುಟ್ಟಾದ ಕಟ್ಟಡ, ವಿದ್ಯುತ್, ಪ್ರಾಜೆಕ್ಟರ್, ಎಲ್‌ಇಡಿ ಪರದೆ, ಬ್ಯಾಟರಿಗಳ ಜೋಡಣೆ ಮತ್ತು ತಾಂತ್ರಿಕತೆಯ ಕೌಶಲ ಇರುವ ಶಿಕ್ಷಕರ ಸಂಖ್ಯೆ ಕೂಡಾ ಕಡಿಮೆ ಇದೆ.

ಸಾಮಾಜಿಕ ಜಾಲತಾಣಗಳ ಮೂಲಕ ವರ್ಗ ಕೊಠಡಿಯ ಡಿಜಿಟಲ್‌ ಬೋರ್ಡ್‌ ಮೂಲಕ ಶಿಕ್ಷಣ ನೀಡುವ ಯೋಜನೆ ಸಾಕಾರಗೊಳ್ಳಬೇಕಿದೆ.

ಜಿಲ್ಲೆಯಲ್ಲಿ 1,232 ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, 35 ಪದವಿ ಕಾಲೇಜುಗಳಿವೆ. 5 ಸಾವಿರ ಶಿಕ್ಷಕರು, 28 ಸಾವಿರ ಮಕ್ಕಳಿದ್ದಾರೆ. ಕೊಪ್ಪಳ ತಾಲ್ಲೂಕುವೊಂದರಲ್ಲಿಯೇ 231 ಪ್ರಾಥಮಿಕ, 35 ಪ್ರೌಢಶಾಲೆಗಳಿದ್ದು, ಕೇವಲ 12 ಸ್ಮಾರ್ಟ್‌ಕ್ಲಾಸ್‌ಗಳಿವೆ.

ಜಿಲ್ಲೆಯಲ್ಲಿ 30 ಸ್ಮಾರ್ಟ್‌ಕ್ಲಾಸ್‌ಗಳಿದ್ದು 13 ತರಗತಿಗಳನ್ನು ದಾನಿಗಳ ನೆರವಿನಿಂದ ನಡೆಸಲಾಗುತ್ತಿದೆ. ಪ್ರತಿಯೊಂದು ಶಾಲೆಯಲ್ಲಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ಕ್ಲಾಸ್ ಆರಂಭಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಂಡಳಿ ಅಧ್ಯಕ್ಷ ದತ್ತಾತ್ತ್ರೇಯ ಪಾಟೀಲ ರೇವೂರ ಅವರು ಇಂಥ ಶಾಲೆಗಳಿಗೆ ತಕ್ಷಣ ಅನುದಾನ ನೀಡುವುದಾಗಿ ಹೇಳಿದ್ದಾರೆ. ಶಿಕ್ಷಣ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗಳನ್ನು ಗುಣಮಟ್ಟದ ಆಧಾರದ ಮೇಲೆ ಆರಂಭಿಸಬೇಕು ಎಂಬುವುದು ಶಿಕ್ಷಣ ತಜ್ಞರ ಆಗ್ರಹ. ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್‌ ಪೂರೈಕೆ ಸಮಸ್ಯೆಯಿಂದ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗುತ್ತಿವೆ. ಬಹುದಿನದಿಂದ ಬಳಸದೇ ಇರುವುದರಿಂದ ಈಗ ಇರುವ ಕಂಪ್ಯೂಟರ್‌ಗಳು ಬಹುತೇಕ ಹಾಳಾಗಿವೆ. ಶಿಕ್ಷಕರು ಇನ್ನೂ ಮ್ಯಾನುವಲ್‌ ಬರವಣಿಗೆಯಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಿರುವುದರಿಂದ ತಂತ್ರಜ್ಞಾನ ಬಳಕೆಯಲ್ಲಿ ಹಿಂದೆ ಬಿದ್ದಿವೆ.

ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ದುಬಾರಿ ಆಗಿರುವುದರಿಂದ ಗ್ರಾಮೀಣ ಭಾಗದ ಬಹುತೇಕ ಬಡವರು, ಮಧ್ಯಮವರ್ಗದ ಜನರು ಇನ್ನೂ ಸರ್ಕಾರಿ ಶಾಲೆಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಅವಲಂಬಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿ ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೆ ಏರಿಸುವ ಅವಶ್ಯಕತೆ ಇದೆ.

ದಾನಿಗಳ ನೆರವು: ಸರ್ಕಾರಿ ಶಾಲೆಯಲ್ಲಿ ಕಲಿತು ಉತ್ತಮ ಸ್ಥಾನದಲ್ಲಿರುವ ಶಿಕ್ಷಣ ಪ್ರೇಮಿಗಳು, ಉದ್ಯಮಿಗಳು, ಮಠ–ಮಾನ್ಯಗಳು ಸ್ಮಾರ್ಟ್‌ಕ್ಲಾಸ್‌ ಆರಂಭಕ್ಕೆ ನೆರವು ನೀಡಿವೆ. ಆದರೆ ಅದು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಸರ್ಕಾರಿ ಶಾಲೆಗಳು ದೇಗುಲ ಎಂದು ನಾಮಫಲಕ ಹಾಕಲಾಗಿದ್ದರೂ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವುದೇ ಹೆಚ್ಚು.

ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಕೆಲವು ಶಾಲಾ ಆವರಣಕ್ಕೆ ಗೋಡೆ ಇಲ್ಲದರುವುದರಿಂದ ಜೂಜಾಟ, ಕೃಷಿ ಸಾಮಗ್ರಿ ಸಂಗ್ರಹ, ಧಾನ್ಯ ಒಣಗಿಸುವುದು, ಮದುವೆ ಕಾರ್ಯಕ್ಕೆ ಕೂಡಾ ಬಳಕೆ ಮಾಡಿಕೊಂಡು ಧರ್ಮಛತ್ರಗಳಂತೆ ಮಾಡಿಕೊಂಡಿರುವುದು ದುರಂತ. ಶಾಲೆಗಳ ಬಗ್ಗೆ ಅಪಾರ ಪ್ರೀತಿ ಇರುವ ಪ್ರಾಥಮಿಕ ಶಾಲೆಯ ಶಿಕ್ಷಕರು ಈ ಕುರಿತು ಸ್ಥಳೀಯರಿಗೆ ಸುತ್ತಮುತ್ತಲಿನ ಜನರಿಗೆ ಬುದ್ಧಿ ಹೇಳಿದರೆ ಅವಾಚ್ಯಶಬ್ಧಗಳಿಂದ ನಿಂದಿಸುವುದು, ಹಲ್ಲೆ ಮಾಡಿದ ಘಟನೆಗಳು ಕೂಡಾ ನಡೆದಿದೆ. ಆದ್ದರಿಂದ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದರ ಜತೆಗೆ ಸ್ಮಾರ್ಟ್‌ಕ್ಲಾಸ್‌ ಆರಂಭಕ್ಕೆ ದಿಟ್ಟ ಹೆಜ್ಜೆಯಿಡಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು