ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಸಂಘದ ವಿಶೇಷ ಮಹಾಸಭೆ: ಬೈಲಾದ 48 ಅಂಶಗಳ ತಿದ್ದುಪಡಿಗೆ ಒಪ್ಪಿಗೆ

Published 1 ಅಕ್ಟೋಬರ್ 2023, 12:59 IST
Last Updated 1 ಅಕ್ಟೋಬರ್ 2023, 12:59 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾದಲ್ಲಿನ 48 ಅಂಶಗಳಿಗೆ ತಿದ್ದುಪಡಿ ಮಾಡಿ ಇಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಿಶೇಷ ಮಹಾಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಯಿತು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್‌ ಮತ್ತು ವಿಭಾಗೀಯ ಪೀಠಗಳು ಸಂಘದ ಸದಸ್ಯತ್ವ ಹೊಂದಲು ಅರ್ಹರಲ್ಲ ಎನ್ನುವ ಅಂಶ ಸೇರಿಸಲಾಗಿದೆ.

ಸಂಘದ ಅಧೀನ ಶಾಖೆಗಳ ಆಡಳಿತದಲ್ಲಿನ ನ್ಯೂನ್ಯತೆ, ಗಂಭೀರ ಹಣಕಾಸಿನ ಅವ್ಯವಹಾರಗಳು ಕಂಡುಬಂದಲ್ಲಿ ಸಮಿತಿಯ ಸದಸ್ಯರನ್ನು ಆರು ವರ್ಷ ಮೀರದಂತೆ ಉಚ್ಛಾಟನೆ ಮಾಡಬಹುದು ಎನ್ನುವ ಅಂಶ ಇತ್ತು. ಈ ಅಂಶದ ಜೊತೆಗೆ ಈಗ ಉಚ್ಛಾಟಿತ ಸದಸ್ಯನ ಮನವಿಯಂತೆ ಆತನ ವರ್ತನೆಯಲ್ಲಿ ಸುಧಾರಣೆ ಕಂಡುಬಂದರೆ ರಾಜ್ಯಾಧ್ಯಕ್ಷರು ಉಚ್ಛಾಟನೆಯ ತೀರ್ಮಾನವನ್ನು ಪುನರ್‌ ಪರಿಶೀಲಿಸಬಹುದು ಎನ್ನುವ ಅಂಶ ಸೇರಿಸಲಾಗಿದೆ.

ರಾಜ್ಯಾಧ್ಯಕ್ಷರು ಸಂಘದ ಕಾರ್ಯಚಟುವಟಿಕೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಬಹುದು. ಉಳಿದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹಾಗೂ ಪತ್ರಿಕಾ ಹೇಳಿಕೆ ನೀಡುವಂತಿಲ್ಲ ಎನ್ನುವ ಹೊಸ ಅಂಶ ಸೇರಿಸಲಾಗಿದೆ. ಪ್ರತಿ ವರ್ಷ ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸಿ ನಿರ್ವಹಣೆ ಮಾಡಬೇಕು ಎಂದಿದ್ದ ನಿಯಮವನ್ನು ಮಾರ್ಪಾಡಿಸಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ಬದಲಿಸಲಾಗಿದೆ. ಸಂಘದ ಸದಸ್ಯನ ವಿರುದ್ಧ ಆರೋಪಗಳ ಕೇಳಿ ಬಂದಾಗ ಅವರಿಂದ ವಿವರಣೆ ಕೇಳಲು ಒಂದು ಇದ್ದ ಒಂದು ತಿಂಗಳ ಅವಕಾಶವನ್ನು ಮೂರು ತಿಂಗಳಿಗೆ ವಿಸ್ತರಿಸಲಾಗಿದೆ.

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಷಡಾಕ್ಷರಿ ‘ಕಳೆದ ವರ್ಷ ಶಿವಮೊಗ್ಗದಲ್ಲಿ ನಡೆದಿದ್ದ ವಿಶೇಷ ಮಹಾಸಭೆಯಲ್ಲಿ ಬೈಲಾವನ್ನು ಸಮಗ್ರ ತಿದ್ದುಪಡಿ ಮಾಡಲಾಗಿತ್ತು. ಅದರಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿ ಈಗ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಗಿದೆ’ ಬೈಲಾದಲ್ಲಿ ವಿಷಯಗಳ ಬಗ್ಗೆ ನಿಖರವಾಗಿ ಸದಸ್ಯರಿಗೆ ತಿಳಿಸಲು ಕ್ರಮ ವಹಿಸಲಾಗಿದೆ’ ಎಂದರು.

‘ಸಂಘದ ಸದಸ್ಯತ್ವ ಶುಲ್ಕ ಎನ್ನುವ ಪದ ತಗೆದು ಹಾಕಿ ಈಗ ನಿರ್ದಿಷ್ಟವಾಗಿ ₹200 ಶುಲ್ಕ ಎಂದು ನಮೂದಿಸಲಾಗಿದೆ. ಸಂಘದ ಜಿಲ್ಲಾಧ್ಯಕ್ಷರಿಗೆ ತಾಲ್ಲೂಕು ಸಂಘಟನೆಗಳ ಮೇಲೆ ನಿಯಂತ್ರಣಕ್ಕೆ ಅಧಿಕಾರ ಕೊಡಲಾಗಿದೆ’ ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಸರ್ಕಾರಿ ನೌಕರರು ಪಾಲ್ಗೊಂಡಿದ್ದರು. ಹಲವು ನೌಕರರು ವರ್ಚುವಲ್‌ ವೇದಿಕೆ ಮೂಲಕ ಹಾಜರಾಗಿದ್ದರು.

ನೌಕರರಿಗೆ ₹1 ಕೋಟಿ ವಿಮೆ ಯೋಜನೆ

ಕೊಪ್ಪಳ: ಸರ್ಕಾರಿ ನೌಕರ ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬದವರಿಗೆ ಬ್ಯಾಂಕ್‌ಗಳು ₹1 ಕೋಟಿ ವಿಮೆ ನೀಡುವ ಯೋಜನೆ ರೂಪಿಸಲಾಗುತ್ತಿದೆ. ನೌಕರ ವೇತನ ಪಡೆಯುವ ಬ್ಯಾಂಕ್‌ಗಳ ಜೊತೆಗೆ ಈ ಕುರಿತು ಚರ್ಚಿಸಲಾಗಿದ್ದು, ತಾತ್ವಿಕ ಒಪ್ಪಿಗೆ ನೀಡಿವೆ. ಇದಕ್ಕೆ ನೌಕರರು ವಿಮೆ ಕಂತು ಪಾವತಿಸುವ ಅಗತ್ಯವಿಲ್ಲ ಎಂದು ಷಡಾಕ್ಷರಿ ತಿಳಿಸಿದರು.

‘ತ್ವರಿತವಾಗಿ ಇದನ್ನು ಜಾರಿಗೆ ತರಲು ಸರ್ಕಾರದ ಜೊತೆಗೂ ಮಾತುಕತೆ ನಡೆಯುತ್ತಿದೆ. ತುಮಕೂರಿನಲ್ಲಿ ಇದೇ ತಿಂಗಳಲ್ಲಿ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ನಡೆಯಲಿದೆ. ಆಗ ಮುಖ್ಯಮಂತ್ರಿಯನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

7ನೇ ವೇತನ ಆಯೋಗ ಶಿಫಾರಸು ಮಾಡುತ್ತಿದ್ದಂತೆಯೇ ರಾಜ್ಯ ಸರ್ಕಾರ ವರದಿಯನ್ನು ಜಾರಿ ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಇಲ್ಲವಾದರೆ ಸರ್ಕಾರದ ಜೊತೆ ಚರ್ಚಿಸುತ್ತೇವೆ.
-ಸಿ.ಎಸ್‌.ಷಡಾಕ್ಷರಿ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT