ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಬಸ್‌: ರಸ್ತೆಯಲ್ಲಿಯೇ ಓದಿ ಪ್ರತಿಭಟಿಸಿದ ವಿದ್ಯಾರ್ಥಿಗಳು

Last Updated 24 ಜೂನ್ 2022, 13:35 IST
ಅಕ್ಷರ ಗಾತ್ರ

ಹನುಮಸಾಗರ (ಕೊಪ್ಪಳ): ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೋನಾಪೂರ ಹಾಗೂ ಪರಮನಹಟ್ಟಿ ಗ್ರಾಮಗಳ 50 ಪ್ರೌಢಶಾಲಾ ವಿದ್ಯಾರ್ಥಿಗಳು ಬಸ್‌ ಸೌಲಭ್ಯಕ್ಕಾಗಿ ಆಗ್ರಹಿಸಿ ಶುಕ್ರವಾರ ರಸ್ತೆಯಲ್ಲಿಯೇ ಕುಳಿತು ಓದಿ ಪ್ರತಿಭಟನೆ ಮಾಡಿದರು.

ಈ ಗ್ರಾಮಗಳ ಮಕ್ಕಳು ನಿತ್ಯ ನಾಲ್ಕು ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಬೇಕಾಗಿದೆ. ಈಗ ಮಳೆಗಾಲದ ಸಮಯವಾದ ಕಾರಣ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಬಸ್ ಒದಗಿಸಿ ಎಂದು ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹನುಮಸಾಗರ ಸಮೀಪದ ಬಾದಮನಾಳ ಕ್ರಾಸ್‍ನಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿದರು.

ಹಿಂದೆ ಈ ಗ್ರಾಮಗಳ ಮಾರ್ಗವಾಗಿ ಶಾಲಾ ಸಮಯಕ್ಕೆ ಒಂದು ಬಸ್‌ ಸಂಚರಿಸುತ್ತಿತ್ತು. ಆದರೆ ಈ ವರ್ಷ ಬಸ್‌ ಸಂಚಾರ ರದ್ದುಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಗೆ ತಲುಪಲು ನಿತ್ಯ ವಾಕಿಂಗ್‌ ಮಾಡಬೇಕಾಗಿದೆ.

‘ನಾವು ನಿತ್ಯ ಮಳೆಯಲ್ಲಿ ನೆಂದುಕೊಂಡೇ ಶಾಲೆಗೆ ಹೋಗುತ್ತಿದ್ದೇವೆ. ಪಠ್ಯಪುಸ್ತಕಗಳು ತೋಯ್ದು ಹೋಗುತ್ತವೆ‘ ಎಂದು ವಿದ್ಯಾರ್ಥಿನಿ ಶರಣಮ್ಮ ನೋವು ತೋಡಿಕೊಂಡರು.

ಬಸ್ ಸೌಲಭ್ಯ ಸಿಗದ ತನಕ ಹೋರಾಟ ಕೈ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ರಸ್ತೆಯ ನಡುವೆ ಜೋರಾಗಿ ಪುಸ್ತಕಗಳನ್ನು ಓದಿದರು.

ಆಗ ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎಸ್.ಹನುಮಂತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ಸಾರಿಗೆ ಅಧಿಕಾರಿಗಳ ಜೊತೆ ಫೋನ್‌ನಲ್ಲಿ ಮಾತನಾಡಿದರು. ಆಗ ಅಧಿಕಾರಿಗಳು ಶನಿವಾರದಿಂದ ಬಸ್‌ ಸಂಚಾರ ಆರಂಭಿಸುವುದಾಗಿ ಹೇಳಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ನಡೆದುಕೊಂಡೇ ಶಾಲೆಗೆ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT