ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಈ ಅಜ್ಜ ಜ್ಞಾನ ದಾಸೋಹಿ: 6ನೇ ತರಗತಿ ಓದಿದ ಅಜ್ಜನೇ ಮೇಷ್ಟು

Published 4 ಸೆಪ್ಟೆಂಬರ್ 2024, 22:30 IST
Last Updated 4 ಸೆಪ್ಟೆಂಬರ್ 2024, 22:30 IST
ಅಕ್ಷರ ಗಾತ್ರ

ಕೊಪ್ಪಳ: ಸಾಕಷ್ಟು ಹಣ ಪಡೆದು ಟ್ಯೂಷನ್‌ ಹೇಳಿಕೊಡುವ ಹಾವಳಿ ಹೆಚ್ಚಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬ 75 ವರ್ಷ ವಯಸ್ಸಿನ ಅಜ್ಜ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮೂರಿನ ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಅವರ ಹೆಸರು ಲಿಂಗಪ್ಪ ಬೇವೂರು. ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಮುಸಲಾಪುರ ಗ್ರಾಮದವರು. ಓದಿದ್ದು ಆರನೇ ತರಗತಿ ಮಾತ್ರ. ಹಾಗಿದ್ದರೂ 19 ವರ್ಷಗಳಿಂದ ಪುಟ್ಟ ಮಕ್ಕಳಿಗೆ ಮೇಷ್ಟ್ರಾಗಿದ್ದಾರೆ. ಪ್ರತಿ ವರ್ಷವೂ 30ರಿಂದ 40 ಮಕ್ಕಳು ಅವರ ಬಳಿ ಟ್ಯೂಷನ್‌ಗೆ ಬರುತ್ತಾರೆ. ಹೀಗಾಗಿ ಲಿಂಗಪ್ಪ ಅವರ ಟ್ಯೂಷನ್‌, ‘ಅಜ್ಜನ ಶಾಲೆ’ ಎಂದೇ ಜನಜನಿತವಾಗಿದೆ. ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ತರಗತಿ ನಡೆಯುತ್ತದೆ. 

ನಾಲ್ಕು ಜನ ಮಕ್ಕಳಿರುವ ಲಿಂಗಪ್ಪ ಅವರಿಗೆ 15 ಎಕರೆ ಭೂಮಿಯಿದೆ. ದೇಹದಲ್ಲಿ ಕಸುವು ಇರುವವರೆಗೂ ಕೃಷಿ ಕಾಯಕ ಮಾಡಿದ್ದ ಲಿಂಗಪ್ಪ, ಈಗ ಭೂಮಿಯನ್ನು ಮಕ್ಕಳಿಗೆ ಹಂಚಿ ತಮ್ಮ ಜೀವನಕ್ಕೆ ಬೇಕಾದಷ್ಟು ಹಣ ಸಂಗ್ರಹಿಸಿಟ್ಟುಕೊಂಡಿದ್ದಾರೆ. ತಮಗೆ ತಿಳಿದ ಜ್ಞಾನವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ವೃದ್ಧಾಪ್ಯದ ದಿನಗಳನ್ನು ಕಳೆಯುತ್ತಿದ್ದಾರೆ.  

ನಿತ್ಯ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ 7ರಿಂದ 9.30ರ ತನಕ ಹಾಗೂ ಸಂಜೆ 5ರಿಂದ 7.30ರ ತನಕ ಪಠ್ಯ ಬೋಧನೆ, ಮಗ್ಗಿಗಳು, ಮಾಸಗಳು, ವರ್ಷ, ಋತುಗಳ ಮಾಹಿತಿ, ಪದಗಳ ಅರ್ಥ, ಬಿಟ್ಟಸ್ಥಳ ತುಂಬುವುದು, ಪ್ರಶ್ನೋತ್ತರ ಹೀಗೆ ಸಾಮಾನ್ಯ ಜ್ಞಾನ ಮತ್ತು ಪಠ್ಯಕ್ಕೆ ಅಗತ್ಯವಿರುವ ಮಾಹಿತಿಯನ್ನು ಹೇಳಿಕೊಡುತ್ತಿದ್ದಾರೆ. 

‘ಕೆಲ ವಿದ್ಯಾರ್ಥಿಗಳು ಮಾಸಿಕ ₹ 50, ₹ 30 ಹೀಗೆ ತಮ್ಮ ಶಕ್ತಿಗೆ ಅನುಗುಣವಾಗಿ ಕೊಡುತ್ತಾರೆ. ಕೆಲವರಿಗೆ ಕೊಡಲು ಆಗುವುದಿಲ್ಲ. ಮಕ್ಕಳು ಹಣ ಕೊಡಲಿ ಬಿಡಲಿ ನನ್ನ ಖುಷಿಗಾಗಿ ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ’ ಎಂದು ಹೇಳುತ್ತಾರೆ ಲಿಂಗಪ್ಪ.

ಲಿಂಗಪ್ಪ ಬೇವೂರು
ಲಿಂಗಪ್ಪ ಬೇವೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT