ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮತದಾನ ಪ್ರಮಾಣ ಹೆಚ್ಚಿಸುವ ಸವಾಲು

ಸ್ವೀಪ್‌ ಚಟುವಟಿಕೆ ಆರಂಭಿಸಿದ ಜಿಲ್ಲಾ ಪಂಚಾಯಿತಿ, ಕಡಿಮೆ ಮತದಾನದ ಮತಗಟ್ಟೆಯತ್ತ ಚಿತ್ತ
Published 27 ಮಾರ್ಚ್ 2024, 5:19 IST
Last Updated 27 ಮಾರ್ಚ್ 2024, 5:19 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಗೆ ಮತದಾನದ ದಿನಾಂಕ ಪ್ರಕಟವಾಗುತ್ತಿದ್ದಂತೆ ಒಂದೆಡೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡು ಪ್ರಚಾರದ ಯೋಜನೆಗಳ ರೂಪುರೇಷೆ ಆರಂಭಗೊಂಡಿದೆ. ಇನ್ನೊಂದೆಡೆ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಪಂಚಾಯಿತಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

2019ರ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೊಪ್ಪಳ, ಕುಷ್ಟಗಿ, ಗಂಗಾವತಿ, ಕನಕಗಿರಿ, ಯಲಬುರ್ಗಾ ಕ್ಷೇತ್ರಗಳಲ್ಲಿ ಒಟ್ಟು ಶೇ. 70.67ರಷ್ಟು ಮತದಾನವಾಗಿತ್ತು. ಇದೇ ವ್ಯಾಪ್ತಿಯಲ್ಲಿ ಸಿಂಧನೂರು, ಸಿರಗುಪ್ಪ ಮತ್ತು ಮಸ್ಕಿ ಕ್ಷೇತ್ರಗಳು ಬರಲಿವೆ. ಒಟ್ಟು ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಶೇ.68.41 ರಷ್ಟು ಮತದಾನವಾಗಿತ್ತು. ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,41,560 ಮತದಾರರು ಇದ್ದು, 2042 ಮತಗಟ್ಟೆಗಳಿವೆ.

ನರೇಗಾ ಕೂಲಿ ಕಾರ್ಮಿಕರು ಹಾಗೂ ರೈತರು ಇರುವ ಕಡೆ ಹೆಚ್ಚು ಗಮನ ಹರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮದ ಪ್ರಮುಖ ದೇವಸ್ಥಾನ ಮತ್ತು ಹೆಚ್ಚು ಜನರು ಇರುವ ಕಡೆ ಕಾಯಕ ಬಂಧುಗಳ ಮೂಲಕ ಸ್ವೀಪ್‌ ಚಟುವಟಿಕೆ ನಡೆಯುತ್ತಿವೆ.

ಜಿಲ್ಲೆಯಲ್ಲಿ ಒಟ್ಟು 1307 ಮತದಾನ ಕೇಂದ್ರಗಳು ಇದ್ದು, ಗ್ರಾಮೀಣ ಪ್ರದೇಶದಲ್ಲಿ 1032 ಮತ್ತು ನಗರ ವ್ಯಾಪ್ತಿಯ 275 ಕೇಂದ್ರಗಳಲ್ಲಿ ಮತದಾನ ಜರುಗಲಿದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 494 ಕೇಂದ್ರಗಳಲ್ಲಿ ಶೇ. 68.75ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿತ್ತು. ಅಂಥ ಕೇಂದ್ರಗಳ ವ್ಯಾಪ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸ್ವೀಪ್‌ ತಂಡ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದೆ. ಎರಡನೇ ಹಂತದಲ್ಲಿ ಮೇ 7ರಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದ 211 ಮತಗಟ್ಟೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿತ್ತು.

ಹೊಸ ಮತ್ತು ಯುವ ಮತದಾರರನ್ನು ಸೆಳೆಯುವ ಸಲುವಾಗಿ ಜಿಲ್ಲಾ ಪಂಚಾಯಿತಿ ಯುವ ಹಾಗೂ ಮಹಿಳಾ ಸಂಘಟನೆಗಳನ್ನು ಸ್ವೀಪ್‌ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಯೋಜನೆ ರೂಪಿಸಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಾಕಾಥಾನ್‌, ಬೈಕ್‌ ರ್‍ಯಾಲಿ, ಗ್ರಾಮೀಣ ಭಾಗದಲ್ಲಿ ಟ್ರ್ಯಾಕ್ಟರ್‌, ಬಂಡಿ ಜಾಥಾ, ಕಡಿಮೆ ಮತದಾನವಾದ ಕ್ಷೇತ್ರಗಳಲ್ಲಿ ಮೇಣದ ಪ್ರತಿಮೆಯ ಬೆಳಕಿನ ಮೂಲಕ ಜಾಗೃತಿ ಮತ್ತು ಅಂಗವಿಕಲರ ಜೊತೆಗೆ ರ್‍ಯಾಲಿ ಜರುಗಲಿದೆ.

ಮಾಧ್ಯಮ ಪ್ರತಿನಿಧಿಗಳು, ಎನ್‌ಜಿಒ, ಯುವಕರು, ಸಾರ್ವಜನಿಕ ಬದುಕಿನಲ್ಲಿ ಇರುವವರನ್ನು ಒಳಗೊಂಡು ತಂಡಗಳನ್ನು ರಚಿಸಿ ಗ್ರಾಮೀಣ ಕ್ರೀಡೆ ನಡೆಯಲಿವೆ. ಇದರಿಂದ ಕ್ರೀಡೆಗೂ ಉತ್ತೇಜನ, ಮತದಾನದ ಜಾಗೃತಿಯಾಗುತ್ತದೆ ಎನ್ನುವ ಲೆಕ್ಕಾಚಾರ ಅಧಿಕಾರಿಗಳದ್ದು. ಸ್ವಸಹಾಯ ಸಂಘದವರ ಮಹಿಳೆಯರು ಗ್ರಾಮೀಣ ಭಾಗದಲ್ಲಿ ಕಡ್ಡಾಯ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ಮಾಡಿಕೊಂಡಿದೆ. ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ 39,832 ಮತದಾರರಿಗೆ ವಿದ್ಮುನ್ಮಾನ ಮತಯಂತ್ರದ ಮೂಲಕ ಅಣಕು ಮತದಾನದ ಪ್ರಾತ್ಯಕ್ಷಿಕೆ, ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ ನಡೆದಿವೆ.

ರಾಹುಲ್‌ ರತ್ನಂ ಪಾಂಡೆಯ
ರಾಹುಲ್‌ ರತ್ನಂ ಪಾಂಡೆಯ

ಆನೆಗೊಂದಿ ಉತ್ಸವದಿಂದಲೇ ಮತದಾನದ ಜಾಗೃತಿ ಆರಂಭ ಗ್ರಾಮೀಣ ಪ್ರದೇಶಗಳಲ್ಲಿ ಸ್ವೀಪ್‌ ಚಟುವಟಿಕೆ ಯುವ ಹಾಗೂ ಸ್ವಸಹಾಯ ಸಂಘಟನೆಗಳ ಜೊತೆಗೂಡಿ ಚಟುವಟಿಕೆ

ಹಿಂದಿನ ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಹೆಚ್ಚು ಮತದಾನವಾಗುವಂತೆ ಸ್ವೀಪ್‌ ಚಟುವಟಿಕೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಸಂಘ ಸಂಘಟನೆಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು.

-ರಾಹುಲ್‌ ರತ್ನಂ ಪಾಂಡೆಯ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶೇ. 70ಕ್ಕಿಂತ ಕಡಿಮೆ ಮತದಾನವಾದ ಮಾಹಿತಿ

ವಿಧಾನಸಭಾ ಕ್ಷೇತ್ರ;ಮತಗಟ್ಟೆ;ಗ್ರಾಮೀಣ;ಪಟ್ಟಣ

ಕುಷ್ಟಗಿ;211;183;28

ಕನಕಗಿರಿ;91;72;19

ಗಂಗಾವತಿ;61;14;47

ಯಲಬುರ್ಗಾ;50;42;08

ಕೊಪ್ಪಳ;81;22;59

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT